

ಉಜಿರೆ: ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಮತ್ತು ಉಜಿರೆ ಸಂತ ಅಂತೋನಿ ಚರ್ಚಿನ ಸೆಕ್ರೆಡ್ ಹಾರ್ಟ್ ವಾರ್ಡಿನ ಗುರಿಕಾರರಾದ ಸುನಿಲ್ ಸಂತೋಷ್ ಮೊರಾಸ್ ಇವರ ನೇತ್ರತ್ವದಲ್ಲಿ ವಾಳೆಯ ಕಕ್ಕೆಜಾಲು ಪೀಟರ್ ಲೋಬೊ ಮತ್ತು ಕುಂಟಿನಿ ಐರಿನ್ ಡಿಕೋಸ್ಟ ಇವರ ಸಂಪೂರ್ಣವಾಗಿ ದುರಸ್ಥಿ ಮಾಡಿದ ಎರಡು ಮನೆಗಳನ್ನು ಎ. 30ರಂದು ಉಜಿರೆ ಸಂತ ಅಂತೋಣಿ ಇಗರ್ಜಿಯ ಧರ್ಮಗುರು ಅಬೆಲ್ ಲೋಬೊ ಇವರು ಆಶಿರ್ವದಿಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿಜಯ್ ಲೋಬೊ, ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಕಾರ್ಯದರ್ಶಿ ಲಿಗೋರಿ ವಾಸ್, ಚರ್ಚ್ ಅಯೋಗಗಳ ಸಂಯೋಜಕಿ ಲವೀನಾ ಫೆರ್ನಾಂಡೀಸ್, ಉಜಿರೆ ಎಸ್.ಎಂ.ಐ.ಕಾನ್ವೆಂಟಿನ ಸುಪೀರಿಯರ್ ನ್ಯಾನ್ಸಿ ಡಾಯಸ್ ಹಾಜರಿದ್ದರು. ಸಂದೇಶ ನೀಡಿದ ಧರ್ಮಗುರು ಅಬೆಲ್ ಲೋಬೋ ಬಡವರ ಪರವಾಗಿ ಹಮ್ಮಿಕೊಳ್ಳುವಂತಹ ಇಂತಹ ಯೋಜನೆಗಳು ದೇವರಿಗೆ ಮೆಚ್ಚುವಂತದ್ದಾಗಿವೆ.
ನವೀಕೃತಗೊಂಡ ಈ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಂಟುಂಬಗಳು ದೇವರ ಆಶಿರ್ವಾದದಿಂದ ಆರೋಗ್ಯ ಮತ್ತು ಶಾಂತಿಯಿಂದ ಬಾಳಲೆಂದು ಹಾರೈಸಿದರು. ಈ ಮನೆಗಳ ಮೇಲ್ವಿಚಾರಣೆ ಕೈಗೊಂಡ ವಲೇರಿಯನ್ ರೊಡ್ರಿಗಸ್ ಮತ್ತು ಸುನಿಲ್ ಮೊರಾಸ್ ಇವರನ್ನು ಅಭಿನಂದಿಸಿದರಲ್ಲದೆ ದಾನಿಗಳ ಮೇಲೆ ದೇವರ ಕ್ರಪೆ ಇರಲಿ ಎಂದರು. ಇನ್ನೋರ್ವ ಅಥಿತಿ ಆಂಟನಿ ಫೆರ್ನಾಂಡೀಸ್ ಮಾತನಾಡಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸಗಳಿಸಿದಾಗ ಮಾತ್ರ ಇಂತಹ ಯೋಜನೆಗಳ ನೇತ್ರತ್ವವನ್ನು ವಹಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯ ಎಂದರಲ್ಲದೆ ಮನೆಗಳ ದುರಸ್ಥಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು ಮತ್ತು ಇಂತಹ ಜನಪರ ಯೋಜನೆಗಳಿಗೆ ಧನಸಹಾಯ ನೀಡಿದವರನ್ನು ಕೊಂಡಾಡಿದರು.
ಮನೆಯ ಫಲಾನುಭವಿ ಸೆಲೆಸ್ಟಿನ್ ಲೋಬೊ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿ ಅತೀ ಅಗತ್ಯವಾಗಿದ್ದ ಮನೆ ದುರಸ್ಥಿ ಮಾಡಿ ಕೊಟ್ಟವರ ಕಾರ್ಯವನ್ನು ಸ್ಮರಿಸಿದರು. ಗುರಿಕಾರ ಸುನಿಲ್ ಸಂತೋಷ್ ಮೊರಾಸ್ ದಾನಿಗಳ ಪಟ್ಟಿಯನ್ನು ಮತ್ತು ಎರಡೂ ಮನೆಗಳಿಗೆ ಖರ್ಚಾದ ಲೆಕ್ಕದ ವಿವರಗಳನ್ನು ತಿಳಿಸಿದರು. ಇದೇ ಸಂದರ್ಭ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಮಾಡಿಕೊಟ್ಟು ಸುಮಾರು 70 ಸಾವಿರ ದಾನ ರೂಪದಲ್ಲಿ ರಿಯಾಯಿತಿ ನೀಡಿದ ಪ್ರಖ್ಯಾತ ಕಾಂಟ್ರಾಕ್ಟರ್ ಮೆಲ್ವಿನ್ ಫೆರ್ನಾಂಡೀಸ್ ಮತ್ತು ಸಿ.ಒ.ಡಿ.ಪಿ.ಸಂಸ್ಥೆಯ ಮೂಲಕ ರೂಪಾಯಿ 1.25 ಲಕ್ಷ ಯೋಜನೆಗೆ ದೊರಕಿಸಿಕೊಟ್ಟ ಆಂಟನಿ ಫೆರ್ನಾಂಡೀಸ್ ಇವರಿಗೆ ಕ್ರತಜ್ಞತೆ ಸಲ್ಲಿಸಿದರು.
ಈ ಯೋಜನೆಯಲ್ಲಿ ಉಳಿದ ರೂಪಾಯಿ 40,000ವನ್ನು ಉಜಿರೆಯ ಉಷಾ ಬರ್ಬೋಜಾ ಅವರ ಮನೆ ದುರಸ್ಥಿಗಾಗಿ ಧರ್ಮಗುರುಗಳಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ವಲೇರಿಯನ್ ರೊಡ್ರಿಗಸ್ ಪ್ರಾಸ್ಥಾವಿಕವಾಗಿ ಮಾತನಾಡಿ ಅತೀ ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹಗೊಂಡು ಈ ಯೋಜನೆ ಕಾರ್ಯಗತಗೊಂಡಿದೆ. ಅನೇಕ ದಾನಿಗಳು ನಮ್ಮ ಕನಿಷ್ಟ ಸಂಪರ್ಕದ ಮೂಲಕ ಈ ಯೋಜನೆಗೆ ಸಹಕಾರ ನೀಡಿದ್ದಾರೆ. ನಮ್ಮ ಧರ್ಮಗುರುಗಳ ಪ್ರಾರ್ಥನೆ ಕೂಡಾ ಸದಾ ನಮ್ಮೊಂದಿಗೆ ಇತ್ತು ಎಂದು ಹೇಳಿದರು. ಆರಂಭದಲ್ಲಿ ವಲೇರಿಯನ್ ರೊಡ್ರಿಗಸ್ ಸ್ವಾಗತಿಸಿದರು. ವಾಳೆಯ ಕಾರ್ಯದರ್ಶಿ ಮರೀನಾ ಅಂದ್ರಾದೆ ನಿರೂಪಿಸಿದರು. ವಾಳೆಯ ಪ್ರತಿನಿಧಿ ಜೇಸನ್ ಮೊರಾಸ್ ಧನ್ಯವಾದವಿತ್ತರು.