

ಬೆಳ್ತಂಗಡಿ: ಲಾಯಿಲ ಕರ್ನೋಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ಕ್ಯಾನ್ ಫಿನ್ ಹೊಮ್ಸ್ ಸಂಸ್ಥೆ ಬೆಂಗಳೂರು, ರೋಟರಿ ಕ್ಲಬ್ ಇಂದಿರಾ ನಗರ ಬೆಂಗಳೂರು, ರೋಟರಿ ಕ್ಲಬ್ ಬೆಳ್ತಂಗಡಿ, ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಕಾರದೊಂದಿಗೆ ಕರ್ನೋಡಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ ಮತ್ತು ನವೀಕರಣಗೊಂಡ ಶಾಲೆಯ ಹಸ್ತಾಂತರ ಕಾರ್ಯಕ್ರಮ ಎ. 6ರಂದು ವಿವಿಧ ವೈವಿದ್ಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಹೇಳಿದರು. ಅವರು ಎ. 1ರಂದು ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
60 ವರ್ಷಗಳ ಹಿಂದೆ ಪ್ರಾರಂಭವಾದ ಈ ಶಾಲೆ 8ನೇ ತರಗತಿವರೆಗೆ ವಿದ್ಯಾಭ್ಯಾಸ ನೀಡುತ್ತದೆ. ಮೊದಲು 250ರಿಂದ 300 ವಿದ್ಯಾರ್ಥಿಗಳು ಕಲಿಯುತ್ತಿದ್ದು ಶಾಲೆಯಲ್ಲಿ ಶಾಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಪ್ರಸ್ತುತ 93 ಮಕ್ಕಳು ಕಲಿಯುತ್ತಿದ್ದಾರೆ.
ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಾರಂಭ ಮಾಡಿದ ಹಳೆ ವಿದ್ಯಾರ್ಥಿ ಸಂಘ ನಾವು ಕಲಿತ ಶಾಲೆಗೆ ಗುರುದಕ್ಷಿಣೆಯಾಗಿ ಶಾಲೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಯೋಚಿಸಿ ಹಳೆ ವಿದ್ಯಾರ್ಥಿ ಸಂಘ ರೂ. 15ಲಕ್ಷ, ಬದುಕು ಕಟ್ಟೋಣ ಬನ್ನಿ ತಂಡ ರೂ. 15ಲಕ್ಷ, ರೋಟರಿ ಕ್ಲಬ್ ಇಂದಿರಾ ನಗರ ಮತ್ತು, ರೋಟರಿ ಕ್ಲಬ್ ಬೆಳ್ತಂಗಡಿ ರೂ. 12ಲಕ್ಷ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರವರ ಅನುದಾನದಿಂದ ನೂತನ ಸಭಾ ಭವನ, ಗ್ರಾಮ ಪಂಚಾಯತ್ ಲಾಯಿಲದಿಂದ ಇಂಗು ಗುಂಡಿ ಮತ್ತು ಆವರಣ ಗೋಡೆ ನಿರ್ಮಾಣ ಸೇರಿದಂತೆ ಸುಮಾರು ರೂ. 50ಲಕ್ಷ ವೆಚ್ಚದಲ್ಲಿ ಶಾಲೆ ಯ ನವೀಕರಣ ಗೊಂಡು ಖಾಸಗಿ ಶಾಲೆಗೆ ಪೈಪೋಟಿ ಯಂತೆ ಅಭಿವೃದ್ಧಿಯಾಗಿದೆ. ಇದರ ಹಸ್ತಾಂತರ ಮತ್ತು ಸ್ನೇಹ ಸಮ್ಮಿಲನ ವಿವಿಧ ವೈವಿದ್ಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾ ಭವನದ ಲೋಕಾರ್ಪಣೆ ಮಾಡಲಿದ್ದಾರೆ, ಅನೇಕ ಗಣ್ಯರು, ಹಳೆ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್ ಮಾತನಾಡಿ ಬದುಕು ಕಟ್ಟೋಣ ಬನ್ನಿ ತಂಡ ಕಳೆದ 8 ವರ್ಷದಿಂದ ವಿವಿಧ ಸಮಾಜ ಸೇವೆ ಮಾಡುತ್ತಾ ಬರುತ್ತಿದ್ದು ಕಳೆದ ಮೂರು ವರ್ಷ ದಿಂದ ಸರಕಾರಿ ಶಾಲೆ ಉಳಿಸಿ ಯೋಜನೆಯಲ್ಲಿ 4 ಶಾಲೆಗನ್ನು ಅಭಿವೃದ್ಧಿ ಮಾಡಲಾಗಿದೆ ಇದು 5ನೇ ಶಾಲೆಯಾಗಿದ್ದು ಹಳೆ ವಿದ್ಯಾರ್ಥಿ ಸಂಘ, ಊರವರ ಸಹಕಾರ ದಿಂದ ಅಭಿವೃದ್ಧಿ ಮಾಡಲಾಗಿದೆ. ಸಾಮಗ್ರಿಗೆ ಮಾತ್ರ ಹಣ ವಿನಿಯೋಗ ಮಾಡಿದ್ದು ಇತರ ಕೆಲಸ ಶ್ರಮದಾನದಿಂದ ಮಾಡಲಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು ಶಾಲಾಭಿವೃದ್ಧಿ ಸಮಿತಿ,ಪೋಷಕರು, ದಾನಿಗಳು ಸಹಕಾರ ನೀಡಿದ್ದಾರೆ. ಎಲ್ಲರೂ ಸೇರಿ ಸ್ನೇಹ ಸಮ್ಮಿಲನ ಮಾಡುತ್ತಿದ್ದು ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಲರವ, ಹಳೆ ವಿದ್ಯಾರ್ಥಿಗಳಿಂದ ವೈವಿದ್ಯ ಕಾರ್ಯಕ್ರಮ, ಸಂಜೆ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರಿಂದ ತೆಲಿಕೆದ ಬರ್ಸ ಕಾಮೋಡಿ, ರಾತ್ರಿ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ “ಅಮ್ಮೆರ್ ” ತುಳು ನಾಟಕ ಪ್ರದರ್ಶನ ಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್ ಆರ್. ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಎಂ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೌಮ್ಯ, ಸಹ ಶಿಕ್ಷಕ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.