

ಬೆಳ್ತಂಗಡಿ: ಬಂಟ್ವಾಳ ತಾಲೂಕು ತಹಶೀಲ್ದಾರ್ ಆಗಿದ್ದ ವೇಳೆ ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸಿ ಜನಮೆಚ್ಚುಗೆ ಪಡೆದಿದ್ದ ರಶ್ಮಿ ಎಸ್.ಆರ್. ಅವರು ಕುಂದಾಪುರ ಉಪ ವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕುಂದಾಪುರ ಸಹಾಯಕ ಆಯುಕ್ತರಾಗಿದ್ದ ಕೆ. ಮಹೇಶ್ಚಂದ್ರ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ರಶ್ಮಿ ಅವರನ್ನು ಸರಕಾರ ನಿಯೋಜಿಸಿದೆ. ಈ ಹಿಂದೆ ಕುಂದಾಪುರದಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರುವ ರಶ್ಮಿ ಅವರು ಸದ್ಯ ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
2014ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿರುವ ಇವರು 2017ರಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರೊಬೆಷನರಿ ಸೇವೆ ಸಲ್ಲಿಸಿ 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿ, 2022ರಲ್ಲಿ ದ.ಕ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಮತ್ತು 2023ರಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. 2024ರ ಜುಲೈನಲ್ಲಿ ಮಂಗಳೂರು ನಗರಾಭಿವೃದ್ಧಿಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ರಶ್ಮಿ ಅನಂತರ ಚಿಕ್ಕಮಗಳೂರು ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದರು.