ದಟ್ಟಡವಿಯೊಳು ನಿನ್ನೇಕೆ ಹಾಕಿದರು ಮಗಳೇ….? – ಬೆಳಾಲು: ಅರಣ್ಯ ಮಧ್ಯೆ ೩ ತಿಂಗಳ ಹೆಣ್ಣು ಮಗು ಪತ್ತೆ

0

ಶ್ರೇಯಾ ಪಿ. ಶೆಟ್ಟಿ / ದಾಮೋದರ್ ದೊಂಡೋಲೆ
ತನ್ನ ತಂದೆ, ತಾಯಿ, ಬಂಧು ಬಳಗ ಯಾರು ಎಂಬುದು ತಿಳಿಯುವ ಮುನ್ನವೇ ಮುದ್ದಾದ ಹೆಣ್ಣು ಮಗು ಕಾಡಿನ ನಡುವೆ ಅನಾಥವಾಗಿ ಸಿಕ್ಕಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೂಡಲ್ಕೆರೆ ಮುಂಡ್ರೊಟ್ಟು ರಸ್ತೆಯ ಕಾಡಿನ ಮಧ್ಯೆ ಸುಮಾರು ಮೂರು ತಿಂಗಳ ಹೆಣ್ಣು ಮಗು ಪತ್ತೆಯಾಗಿದೆ. ಹಣೆ ಹಾಗೂ ಹುಬ್ಬಿಗೆ ಕಾಡಿಗೆ ಹಚ್ಚಿ ಕೇಸರಿ ಶಾಲಿನಲ್ಲಿ ಹೊದಿಸಿ ಕಾಡಿನಲ್ಲಿ ಹೆಣ್ಣು ಮಗುವನ್ನು ಯಾರೋ ಬಿಟ್ಟು ಹೋಗಿದ್ದಾರೆ. ಇದು ಹೆಣ್ಣು ಮಗು ಎಂಬ ತಾತ್ಸಾರವೋ? ಹೆತ್ತ ತಂದೆ-ತಾಯಿಗೆ ಯಾವುದಾದರು ಸಂಕಷ್ಟವೋ? ಅನೇಕ ಪ್ರಶ್ನೆಗಳಿದ್ದರೂ ಯಾವುದಕ್ಕೂ ಉತ್ತರ ಇದುವರೆಗೆ ಸಿಕ್ಕಿಲ್ಲ. ಕಾಡಿನ ರಸ್ತೆಯಲ್ಲಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸಿಕ್ಕಿದ ಈ ಮುದ್ದು ಮುದ್ದಾದ ಮಗುವನ್ನು ಇದೀಗ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿರಿಸಲಾಗಿದೆ. ಮಗು ಪತ್ತೆಯಾದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ಅನ್ನಪೂರ್ಣ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಧರ್ಮಸ್ಥಳ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಗುವಿನ ತಂದೆ ಮತ್ತು ತಾಯಿಯ ಪತ್ತೆಗಾಗಿ ನಿರಂತರ ಶೋಧ ನಡೆಸಲಾಗುತ್ತಿದ್ದರೂ ಅವರು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಹಾಗಾಗಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿರುವ ಈ ಘಟನೆ ಸದ್ಯಕ್ಕೆ ನಿಗೂಢವಾಗಿಯೇ ಮುಂದುವರಿದಿದೆ.

ಘಟನೆಯ ವಿವರ: ಮಾರ್ಚ್ 22ರಂದು ಬೆಳಗ್ಗೆ ಸುಮಾರು 9.15ರ ಸಮಯ. ಗುಲಾಬಿ ಎಂಬವರು ಉಜಿರೆಯಿಂದ ಮುಂಡ್ರೊಟ್ಟು ಕಾಡಿನ ದಾರಿಯಲ್ಲಿ ನಡೆದುಕೊಂಡು ಮಾಯದಲ್ಲಿರುವ ತನ್ನ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಗು ಜೋರಾಗಿ ಅಳುವ ಶಬ್ದ ಕೇಳಿತ್ತು. ತಕ್ಷಣ ಅಲ್ಲಿಯೇ ತರಗೆಲೆ ತೆಗೆದುಕೊಂಡು ಹೋಗುತ್ತಿರುವ ಕೆಲವೊಂದು ಮಹಿಳೆಯರನ್ನು ಕರೆದುಕೊಂಡು ಹೋದ ಗುಲಾಬಿ ಅವರಿಗೆ ಕಾಡಿನ ಮಧ್ಯೆ ಪುಟ್ಟ ಹಸುಗೂಸು ಅಳುತ್ತಾ ಅನಾಥವಾಗಿ ಬಿದ್ದಿರುವುದು ಕಂಡು ಬಂದಿತ್ತು. ಸುತ್ತ ಮುತ್ತ ನೋಡಿದರೆ ಯಾರೂ ಇರಲಿಲ್ಲ. ಮಗು ಮಾತ್ರ ಒಂದು ಕೇಸರಿ ಶಾಲಿನಲ್ಲಿ ಮಧ್ಯೆ ಜೋರಾಗಿ ಅಳುತ್ತಾ ಅನಾಥವಾಗಿ ಕಂಡು ಬಂದಿತ್ತು. ಹುಬ್ಬಿಗೆ ಹಾಗೂ ಹಣೆಗೆ ಸುಂದರವಾಗಿ ಕಾಡಿಗೆ ಹಚ್ಚಲಾಗಿತ್ತು. ತಲೆ ಮೇಲೆ ಪೌಡರ್ ಇತ್ತು. ಆ ಮಗು ಕಾಡಿನ ಮಧ್ಯೆ ಜೋರಾಗಿ ಅಳುತ್ತಾ ಇತ್ತು. ಮಗುವಿನ ಮೈಪೂರ್ತಿ ಸೊಳ್ಳೆಗಳು ಮುತ್ತಿದ್ದವು. ಘಟನೆಯನ್ನು ನೋಡಿದಾಗ ಯಾರೋ ಬೆಳಗ್ಗೆಯೇ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದಂತಿತ್ತು. ಮಗುವನ್ನು ಬಿಟ್ಟು ಹೋದವರು ಒಂದು ವೇಳೆ ರಾತ್ರಿ ಸಮಯದಲ್ಲಿ ಅಥವಾ ಎಲ್ಲೋ ಜನನಿಬಿಡ ಪ್ರದೇಶದಲ್ಲಿ ಮಗುವನ್ನು ಬಿಟ್ಟು ಹೋಗಿರುತ್ತಿದ್ದರೆ ಬೀದಿನಾಯಿಗಳ ಅಥವಾ ಕಾಡು ಪ್ರಾಣಿಗಳ ಆಕ್ರಮಣಕ್ಕೆ ತುತ್ತಾಗುತ್ತಿತ್ತು. ಆ ಹೆಣ್ಣು ಮಗುವಿನ ಆಯುಷ್ಯ ಚೆನ್ನಾಗಿದ್ದ ಕಾರಣ ಗುಲಾಬಿಯವರಿಗೆ ಮಗು ಸಿಕ್ಕಿದೆ.

ತಕ್ಷಣ ಸ್ಪಂದಿಸಿದ ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ: ಮಗುವನ್ನು ನೋಡಿ ಗಾಬರಿಗೊಂಡ ಗುಲಾಬಿ ತಕ್ಷಣ ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಅವರಿಗೆ ಕರೆ ಮಾಡಿ ತಿಳಿಸಿದ್ದರು. ತಕ್ಷಣ ಸ್ಪಂದಿಸಿದ ವಿದ್ಯಾ ಅವರು ಸ್ಥಳಕ್ಕೆ ಬಂದಿದಷ್ಟೇ ಅಲ್ಲದೆ ಆಶಾ ಕಾರ್ಯಕರ್ತೆ ಪ್ರೇಮಾ, ಧರ್ಮಸ್ಥಳ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಮಂಜು, ಧರ್ಮಸ್ಥಳ ಪೋಲೀಸ್ ಠಾಣಾ ಎಸ್‌ಐಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ಸಮಯ ಪ್ರಜ್ಞೆ ತೋರಿದ್ದರು. ಅಧ್ಯಕ್ಷರು ಘಟನಾ ಸ್ಥಳಕ್ಕೆ ತಲುಪುವ ಮುನ್ನ ಸ್ಥಳೀಯರು ಆ ಮಗುವನ್ನು ಮುಟ್ಟಲು ಭಯ ಪಡುತ್ತಿದ್ದರು. ವಿದ್ಯಾ ಶ್ರೀನಿವಾಸ್ ಗೌಡ ಅವರು ಫೋನ್ ಮೂಲಕ ಸ್ಥಳೀಯರಿಗೆ ಧೈರ್ಯ ತುಂಬಿಸಿ ಮಗುವಿನ ಆರೈಕೆ ಮಾಡಲು ಹೇಳಿದ್ದರು.

ಮಗುವನ್ನು ಕಾಳಜಿಯಿಂದ ನೋಡಿಕೊಂಡ ಆಶಾ ಕಾರ್ಯಕರ್ತೆಯರು: ಸ್ಥಳಕ್ಕೆ ಬಂದ ಆರೋಗ್ಯಾಧಿಕಾರಿ ಡಾ. ಮಂಜು ಅವರು ಮಗುವಿನ ಆರೋಗ್ಯ ತಪಾಸಣೆ ಮಾಡಿ ಮಗು ಆರೋಗ್ಯವಾಗಿರುವುದನ್ನು ಖಚಿತಪಡಿಸಿದರು. ಘಟನಾ ಸ್ಥಳಕ್ಕೆ ಬಂದಿದ್ದ ಕುಲ್ಪಾಡಿ ಆಶಾ ಕಾರ್ಯಕರ್ತೆ ಪ್ರೇಮಾ ಹಾಗೂ ಮಾಯ ವಲಯದ ಆಶಾ ಕಾರ್ಯಕರ್ತೆ ಪ್ರೇಮಾ ಮಗುವನ್ನು ಚೆನ್ನಾಗಿ ಆರೈಕೆ ಮಾಡಿದ್ದರು. ಮಗು ಅಳುವಾಗ ಸಮಾಧಾನ ಪಡಿಸುತ್ತಿದ್ದ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಮಗುವನ್ನು ಸುಪರ್ದಿಗೆ ಪಡೆದು ಅಲ್ಲಿಂದ ಕರೆದುಕೊಂಡು ಹೋಗುವವರೆಗೆ ಜೊತೆಗಿದ್ದರು.ಮಗುವಿಗೆ ಎದೆ ಹಾಲು ಕೊಟ್ಟ ಮಹಾತಾಯಿ: ಮೂರು ತಿಂಗಳ ಹಸುಗೂಸು ಹಸಿವಿನಿಂದ ಅಳುತ್ತಿರುವಾಗ ಯಾರೋ ಒಬ್ಬಳು ತಾಯಿ ತನ್ನ ಎದೆ ಹಾಲನ್ನು ತೆಗೆದು ಈ ಪುಟ್ಟ ಮಗುವಿಗಾಗಿ ಕಳುಹಿಸಿ ಮಹಾತಾಯಿ ಅನ್ನಿಸಿಕೊಂಡಿದ್ದಾರೆ. ಯಾರೋ ಬಿಟ್ಟು ಹೋದ ಮಗುವಿಗಾಗಿ ಮಮ್ಮಲ ಮಿಡಿದು ಎದೆ ಹಾಲು ಕೊಟ್ಟು ಮಗುವಿನ ಜೀವ ಉಳಿಸಿದ ತಾಯಿಗೆ ಮಗುವಿನ ಪರವಾಗಿ ಎಲ್ಲರೂ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮಗುವಿಗೆ ಪುನರ್ಜನ್ಮ: ಗುಲಾಬಿಯವರು ಆ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ. ದೇವರ ರೀತಿ ಆ ಹೆಣ್ಣು ಮಗುವಿನ ಜೀವನದಲ್ಲಿ ಬಂದಿದ್ದಾರೆ. ಒಂದು ವೇಳೆ ಆ ಮಗು ಯಾರ ಗಮನಕ್ಕೂ ಬಾರದೆ ಇರುತ್ತಿದ್ದರೆ ಅಥವಾ ರಾತ್ರಿ ವೇಳೆ ಆ ಮಗುವನ್ನು ಬಿಟ್ಟು ಹೋಗಿರುತ್ತಿದ್ದರೆ ನಾವು ಊಹೆ ಮಾಡಲೂ ಸಾಧ್ಯವಾಗದ ದುರ್ಘಟನೆ ಸಂಭವಿಸುತ್ತಿತ್ತು. ಮಗುವಿನ ಅದೃಷ್ಟ ಚೆನ್ನಾಗಿದ್ದ ಕಾರಣ ಗುಲಾಬಿ ಅವರಿಗೆ ಮಗು ಸಿಕ್ಕಿದೆ. ರಕ್ಷಣೆ ಪಡೆದಿದೆ.

ಪೊಲೀಸ್ ಹಾಗೂ ಸ್ಥಳೀಯರಿಂದ ಕಾಡಿನಲ್ಲಿ ಶೋಧ: ಮಗು ಸಿಕ್ಕ ನಂತರ ಸ್ಥಳಕ್ಕಾಗಮಿಸಿದ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಸ್ಥಳೀಯರು ಕಾಡಿನಲ್ಲಿ ಮಗುವಿನ ಹೆತ್ತವರಿಗಾಗಿ ಶೋಧ ನಡೆಸಿದ್ದಾರೆ. ಬಿಟ್ಟು ಹೋದವರ ಕುರಿತಾಗಿ ಯಾವುದಾದರೂ ಕುರುಹು ಅದೇ ರೀತಿ ಎಲ್ಲಾದರೂ ಮಗುವನ್ನು ಬಿಟ್ಟು ಹೆತ್ತ ತಾಯಿ ಅಥವಾ ತಂದೆ ಏನಾದರೂ ಅನಾಹುತ ಮಾಡಿಕೊಂಡಿರಬಹುದಾ ಎಂಬ ಶಂಕೆಯೊಂದಿಗೆ ಸುತ್ತ ಮುತ್ತ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವ ಕುರುಹು ಕೂಡ ಕಂಡು ಬಂದಿಲ್ಲ. ಪ್ರಕರಣ ನಿಗೂಢವಾಗಿಯೇ ಮುಂದುವರಿದಿದೆ.

ಮಗುವಿನ ದತ್ತು ಪ್ರಕ್ರಿಯೆ ಹೀಗೆ ನಡೆಯುತ್ತದೆ…
ಪರಿತ್ಯಕ್ತ ಮಗು ದೊರಕಿದ ಕೂಡಲೇ ಪ್ರಥಮ ವರ್ತಮಾನ ದಾಖಲಿಸುವುದು. ನಂತರ ಮಗುವಿನ ವೈದ್ಯಕೀಯ ಪರೀಕ್ಷೆ ಮಾಡುವುದು. ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ತಾತ್ಕಾಲಿಕ ಪುನರ್ವಸತಿಗಾಗಿ ದತ್ತು ಕೇಂದ್ರಕ್ಕೆ ದಾಖಲಿಸುವುದು. ಸಿಎಆರ್‌ಎ ಪೋರ್ಟಲ್‌ನಲ್ಲಿ ೩ ದಿನಗಳೊಳಾಗಿ ಮಾಹಿತಿ ಅಪ್‌ಲೋಡ್ ಮಾಡುವುದು. ರಾಷ್ಟ್ರವ್ಯಾಪಿ ಅಥವಾ ರಾಜ್ಯವ್ಯಾಪಿ ಪತ್ರಿಕೆಗಳಲ್ಲಿ ಮಗುವಿನ ಪೋಷಕರ ಪತ್ತೆಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸುವುದು. ಮಗು 2 ವರ್ಷದೊಳಗಿದ್ದರೆ 60 ದಿನಗಳವರೆಗೆ ಮತ್ತು ಮಗು 2 ವರ್ಷದ ಮೇಲ್ಪಟ್ಟಿದ್ದರೆ 4 ತಿಂಗಳವರೆಗೆ ಪೋಷಕರಾದವರಿಗೆ ನಿಗದಿತ ಸಮಯದೊಳಗೆ ದಾಖಲಾತಿಗಳನ್ನು ಸಲ್ಲಿಸಿ ಮಗುವನ್ನು ತಮ್ಮ ಸುಪರ್ದಿಗೆ ಪಡೆಯಲು ಅವಕಾಶವಿರುತ್ತದೆ. ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಪೋಷಕರ ಪತ್ತೆಗಾಗಿ ಪ್ರಯತ್ನ ಮಾಡಿರುವ ಬಗ್ಗೆ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಲಾಗುವುದು. ಮತ್ತು ಪೊಲೀಸರಿಂದ ವರದಿಪಡೆದು ಮಗುವನ್ನು ದತ್ತು ಮುಕ್ತ ಆದೇಶ ಪಡೆಯುವುದು. ನಂತರ ಮಗುವಿನ ಎಂಇಆರ್ ಹಾಗೂ ಸಿಎಸ್‌ಆರ್, ಸಿಎಆರ್‌ಎ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.

ಹುಟ್ಟಿದ ಮಗು ತಮಗೆ ಬೇಡವಾದಲ್ಲಿ ಪೋಷಕರು ಕದ್ದು ಮುಚ್ಚಿ ಬೇರೆಲ್ಲೋ ಬಿಟ್ಟು ಹೋಗುವ ಬದಲು ಅದನ್ನು ನೇರವಾಗಿ ಸರಕಾರಕ್ಕೆ ಒಪ್ಪಿಸಲು ಮಮತೆಯ ತೊಟ್ಟಿಲು ಕಾರ್ಯಕ್ರಮ ರೂಪಿಸಲಾಗಿದೆ. ಬಹುತೇಕ ಪೋಷಕರು ಯಾವುದೋ ಕಾರಣಕ್ಕೆ ಸಮಾಜಕ್ಕೆ ಹೆದರಿ ಇದೀಗ ತಾನೆ ಭೂಮಿಗೆ ಬಂದ ಕಂದಮ್ಮಗಳನ್ನು ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಹಾಗೂ ಪೊದೆಗಳಲ್ಲಿ ಬಿಸಾಡಿ ಎಳೆಯ ಜೀವಿಗಳನ್ನು ಹಿಂಸಿಸುತ್ತಿರುವ ಪ್ರಕರಣಗಳನ್ನು ತಪ್ಪಿಸಲು ಸರಕಾರವೇ ವಿಶೇಷ ದತ್ತು ಸಂಸ್ಥೆಯ ಮೂಲಕ ಮಮತೆಯ ತೊಟ್ಟಿಲು ಕಾರ್ಯಕ್ರಮವನ್ನು ರೂಪಿಸಿ ಆರೈಕೆ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಮತೆ ತೊಟ್ಟಿಲುಗಳನ್ನು ನಗರದ ಜಿಲ್ಲಾಸ್ಪತ್ರೆ, ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರ, ಸರಕಾರಿ ವಿಶೇಷ ದತ್ತು ಕೇಂದ್ರ ಹಾಗೂ ವಾತ್ಸಲ್ಯಧಾಮ ದತ್ತು ಕೇಂದ್ರ, ಪುತ್ತೂರು ಈ ಕಡೆಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಹೆಚ್ಚು ಜಾಗೃತಿ ಮಾಡಿಸುವ ಮೂಲಕ ಮಕ್ಕಳ ಸಂರಕ್ಷಣೆಗೆ ಪ್ರಥಮಾದ್ಯತೆ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ದತ್ತುವಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಗಳ ಕಛೇರಿ, ದಕ್ಷಿಣ ಕನ್ನಡ ಜಿಲ್ಲೆ:0824-2440004, ವಾತ್ಸಲ್ಯಧಾಮ ದತ್ತು ಕೇಂದ್ರ, ಕೇರ್ ಆಫ್ ರಾಮಕೃಷ್ಣ ಸೇವಾ ಸಮಾಜ, ನೆಲ್ಲಿಕಟ್ಟೆ, ಪುತ್ತೂರು:9482553016 ಮತ್ತು ಸರಕಾರಿ ವಿಶೇಷ ದತ್ತು ಕೇಂದ್ರ, ಕೃಷ್ಣ ನಗರ, ಬೋಂದೆಲ್, ಮಂಗಳೂರು:8495011855 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿಗೆ ಬರುತ್ತಿದೆ ಕರೆಗಳ ಮೇಲೆ ಕರೆ
ಯಾವುದೋ ಪರಿಸ್ಥಿತಿಗೆ ಕಟ್ಟು ಬಿದ್ದು ಕಾಡ ಮಧ್ಯೆ ಮಗುವನ್ನು ಬಿಟ್ಟು ಹೋಗಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಕಾಡಿನಲ್ಲಿ ಮಗು ಸಿಕ್ಕಿರುವ ಕುರಿತಾಗಿ ಪ್ರಕಟವಾದ ವರದಿ ಸಂಚಲನ ಸೃಷ್ಠಿಸಿದೆ. ಸುದ್ದಿ ಸಿಬ್ಬಂದಿಗಳಿಗೆ ವೈಯುಕ್ತಿಕವಾಗಿ ಮತ್ತು ಸುದ್ದಿ ಕಚೇರಿಗೆ ಐನೂರಕ್ಕೂ ಮಿಕ್ಕಿ ಕರೆಗಳು ಬಂದಿದೆ. ನಮಗೆ ಆ ಮಗುವನ್ನು ಕೊಡುತ್ತಾರ? ನಮಗೆ ಮಕ್ಕಳಿಲ್ಲ. ನಾವು ಆ ಮಗುವನ್ನು ರಾಣಿ ರೀತಿ ನೋಡಿಕೊಳ್ಳುತ್ತೇವೆ. ನಮಗೆ ಆ ಮಗು ಬೇಕು. ದತ್ತು ಪಡೆದುಕೊಳ್ಳುವುದು ಹೇಗೆ ಎಂದು ಕರೆ ಮಾಡಿದವರು ವಿಚಾರಿಸುತ್ತಿದ್ದಾರೆ.
ಮಗು ಪತ್ತೆಯಾದ ಬಗ್ಗೆ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗಿರುವ ಸಂಪೂರ್ಣ ವರದಿ ಮತ್ತು ಪ್ರತ್ಯೇಕ ವಿಶೇಷ ವರದಿಯನ್ನು ೫ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಮಗು ಎಲ್ಲಿದೆ? ಮುಂಡ್ರೊಟ್ಟು ಕಾಡಿನಲ್ಲಿ ಸಿಕ್ಕ ಮಗುವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಬಂದು ಘಟನೆಯ ವಿವರವನ್ನು ಪಡೆದು ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದರು.
ನಂತರದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸೂಚನೆ ಪಡೆದು ಹೆಣ್ಣು ಮಗುವಿನ ಮುಂದಿನ ಆರೈಕೆಗಾಗಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಸೇರಿಸಲಾಗಿದೆ. ಮಗುವಿನ ಹಿನ್ನೆಲೆ ಕುರಿತಾಗಿ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು ಇದೀಗ ಈ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ.

ಮಗು ದೊಡ್ಡ ಆಫೀಸರ್ ಆಗಲಿ: ನನಗೆ ಘಟನಾ ಸ್ಥಳದಲ್ಲಿಯೇ ಮಗು ಬೇಕು ಎಂದು ಸುಮಾರು ಕರೆ ಬಂದಿತ್ತು. ನಿರಂತರವಾಗಿ ಕರೆ ಬರುತ್ತಿದೆ. ಮಗುವನ್ನು ದತ್ತು ತೆಗೆದುಕೊಳ್ಳುವ ಬಗ್ಗೆಯೂ ಕೇಳುತ್ತಿದ್ದಾರೆ.
ನನಗೆ ಅಧ್ಯಕ್ಷ ಸ್ಥಾನದಲ್ಲಿರುವಾಗ ಬಂದಿರುವ ದೊಡ್ಡ ಸವಾಲು ಇದು. ನನಗೆ ಒಂದು ಮಗುವಿನ ಜೀವ ಉಳಿಸುವ ಅದೃಷ್ಟ ಸಿಕ್ಕಿದೆ. ಆಶಾ ಕಾರ್ಯಕರ್ತೆಯರು ನನ್ನ ಜೊತೆ ಇದ್ದರು. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮಗವನ್ನು ನೋಡಿದಾಗ ತಾಯಿ ಯಾವುದೋ ಒತ್ತಡಕ್ಕೆ ಬಿದ್ದು ಬಿಟ್ಟು ಹೋಗಿರಬಹುದು ಎಂದು ಅನಿಸುತ್ತಿದೆ. ನನಗೆ ಇರುವುದು ಇಬ್ಬರು ಗಂಡು ಮಕ್ಕಳು. ನನಗೂ ಆ ಹೆಣ್ಣು ಮಗು ಬೇಕು ಅನ್ನಿಸಿತ್ತು. ಇನ್ನು ಮುಂದೆ ಆ ಮಗು ದೊಡ್ಡ ಆಫೀಸರ್ ಆಗಲಿ ಎಂದು ಹಾರೈಸುತ್ತೇನೆ. – ವಿದ್ಯಾ ಶ್ರೀನಿವಾಸ್ ಗೌಡ, ಗ್ರಾ.ಪಂ. ಅಧ್ಯಕ್ಷರು ಬೆಳಾಲು


ತುಂಬಾ ಬೇಜಾರಾಗುತ್ತದೆ: ನಾನು ಹೋಗುವಾಗ ಜೋರಾಗಿ ಮಗು ಅಳುವ ಶಬ್ಧ ಕೇಳಿ ಬಂತು. ತಕ್ಷಣ ಅಲ್ಲಿ ತರಗೆಲೆ ಆರಿಸುತ್ತಿದ್ದವರ ಬಳಿ ಹೋಗಿ ವಿಷಯ ಹೇಳಿ ಅವರ ಜೊತೆ ಹೋದೆ. ನೋಡುವಾಗ ಬಟ್ಟೆಯಲ್ಲಿ ಸುತ್ತಿದ ಮಗು ಇತ್ತು. ಮಗುವಿಗೆ ಸೊಳ್ಳೆ ಕಚ್ಚುತ್ತಿತ್ತು. ಇದನ್ನು ನೋಡಿದಾಗ ತುಂಬಾ ಬೇಜಾರಾಗುತ್ತದೆ. ಇಂತಹ ಮಗುವನ್ನು ಬಿಟ್ಟು ಹೋಗಿದ್ದಾರಲ್ವಾ. ಅವರಿಗೆ ಏನು ಹೇಳಬೇಕು. -ಗುಲಾಬಿ, ಮಗುವನ್ನು ರಕ್ಷಿಸಿದವರು

ವದಂತಿ ಹಬ್ಬಿಸಬೇಡಿ: ಡಾ. ಗೋಪಾಲಕೃಷ್ಣ ಭಟ್
ಬೆಳಾಲಿನ ಕಾಡಿನಲ್ಲಿ ಪತ್ತೆಯಾದ ಮಗುವಿನ ಬಗ್ಗೆ ಹಲವಾರು ಪುಕಾರುಗಳು ಹಬ್ಬತೊಡಗಿವೆ. ಇದರ ಪೈಕಿ ಒಂದು ವದಂತಿ ಆ ಮಗು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಹುಟ್ಟಿದ್ದಂತೆ ಅನ್ನುವುದು, ಈ ಬಗ್ಗೆ ಕೆಲವು ವಾಹಿನಿಗಳಲ್ಲಿ ವರದಿ ಪ್ರಸಾರವಾಗಿವೆ. ಈ ಬಗ್ಗೆ ಸುದ್ದಿ ನ್ಯೂಸ್ ಬೆನಕದ ಎಂ.ಡಿ. ಡಾ.ಗೋಪಾಲಕೃಷ್ಣ ಭಟ್‌ರವನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಿದಾಗ ಸುದ್ದಿ ಬಿಡುಗಡೆಯವರು ಸ್ಪಷ್ಟನೆ ಕೇಳಿದ್ದಕ್ಕೆ ಧನ್ಯವಾದ. ಸುಖಾಸುಮ್ಮನೆ ಬೆನಕದ ಹೆಸರಲ್ಲಿ ವರದಿ ಮಾಡಬಾರದು. ನಮ್ಮಲ್ಲಿ ಯಾವುದೇ ಅಕ್ರಮ ಹೆರಿಗೆಗಳು ಆಗುವುದಿಲ್ಲ. ಬೆಳಾಲಿನಲ್ಲಿ ಸಿಕ್ಕಿರುವ ಮಗುವಿನ ಫೋಟೋ ನೋಡಿ ಇದು ಬೆನಕದಲ್ಲಿ ಹುಟ್ಟಿದ್ದಾ ಅಂತ ಕೇಳಿದ್ರೆ ಅದನ್ನು ಸ್ಪಷ್ಟಪಡಿಸುವುದು ಕಷ್ಟ. ಆದರೆ ಅಧಿಕಾರಿಗಳು ಮಗುವಿನ ತಂದೆ ಅಥವಾ ತಾಯಿಯ ವಿವರ ನೀಡಿದರೆ ನಮ್ಮಲ್ಲಿ ಹುಟ್ಟಿರುವುದಾ ಅನ್ನುವ ಪ್ರಶ್ನೆಗೆ ಉತ್ತರ ಸಿಗಬಹುದು. ಯಾಕಂದ್ರೆ ನಮ್ಮಲ್ಲಿ ಹೆರಿಗೆಯಾದ ತಾಯಿ ಹಾಗೂ ತಂದೆಯ ಆಧಾರ್ ಕಾರ್ಡ್ ದಾಖಲೆಗಳು ಲಭ್ಯವಿರುತ್ತವೆ. ಕಳೆದ ನಾಲ್ಕು ತಿಂಗಳಿಂದ ಜನನ ಆದವರ ವಿವರಗಳನ್ನು ನೀಡಬಹುದು. ಅದು ಹೊರತು ಪಡಿಸಿ ಸುಮ್ಮನೆ ಬೆನಕದ ಹೆಸರಲ್ಲಿ ವದಂತಿ ಹಬ್ಬಿಸುವುದು ಸರಿಯಲ್ಲ ಎಂದು ಹೇಳಿದರು.

ಆರೋಗ್ಯದಲ್ಲಿ ಸಮಸ್ಯೆ ಇಲ್ಲ: ನಾವು ಸ್ಥಳಕ್ಕೆ ಬಂದ ಕೂಡಲೇ ಮಗುವಿನ ಆರೋಗ್ಯ ತಪಾಸಣೆ ಮಾಡಿದೆವು. ಮಗುವಿನ ಹಾರ್ಟ್ ಬೀಟ್ ಚೆನ್ನಾಗಿತ್ತು. ಮಗುವಿಗೆ ಬೇರೆ ತಾಯಿಯ ಹಾಲು ತಂದು ಕುಡಿಸಿದಾಗ ಮಗು ಹಾಲು ಕುಡಿದಿದೆ. ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. -ಡಾ. ಮಂಜು, ಆರೋಗ್ಯಾಧಿಕಾರಿ, ಧ.ಪ್ರಾ.ಆರೋಗ್ಯ ಕೇಂದ್ರ

ಮಗು ನಾಲ್ಕು ಲೋಟ ಹಾಲು ಚಮಚದಲ್ಲಿ ಕುಡಿದದ್ದು ನೋಡಿ ಅಚ್ಚರಿ
ಬೆಳಾಲು ಕಾಡಿನಲ್ಲಿ ಸಿಕ್ಕ ಮಗುವನ್ನು ಆರೈಕೆ ಮಾಡಿದ ಆಶಾ ಕಾರ್ಯಕರ್ತೆಯರು ಚಮಚದಲ್ಲಿ ಹಾಲು ನೀಡಿದಾಗ ಅದನ್ನು ಕುಡಿದಿದೆ. ನಾಲ್ಕು ಲೋಟದಷ್ಟು ಹಾಲು ಕುಡಿದಿರುವುದರಿಂದ ಅವರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ ಮಗು ೩ ತಿಂಗಳಲ್ಲೇ ಚಮಚದಲ್ಲಿ ಹಾಲು ಕುಡಿಯಲು ಅಭ್ಯಾಸಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here