

ಉಜಿರೆ: ದೇಶಿಕೇಂದ್ರ ಎಜುಕೇಷನಲ್ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಶ್ರೀ ದೇಶಿಕೇಂದ್ರ ವಿದ್ಯಾಲಯದ 2024-25 ನೇ ಸಾಲಿನ ವಾರ್ಷಿಕೋತ್ಸವವು ಮಾ. 19ರಂದು ನಡೆಯಿತು. ಮುಖ್ಯ ಅತಿಥಿ ಖ್ಯಾತ ವೈದ್ಯ ಡಾ! ಶಂತನು ಆರ್. ಪ್ರಭು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಎಳೆಯ ಮಕ್ಕಳನ್ನು ತಿದ್ದಿ ತೀಡಿ ಅವರಿಗೆ ಸಂಸ್ಕಾರದ ಜ್ಞಾನವನ್ನು ನೀಡುವ ಶಿಕ್ಷಣ ಸಂಸ್ಥೆ ಮಗುವಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಶಿಕ್ಷಕರು ನೀಡಿದ ಪ್ರಾಥಮಿಕ ಶಿಕ್ಷಣ ಅದು ಎಂದೆಂದೂ ಮರೆಯದೆ ಮಕ್ಕಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಹುದು. ಮಕ್ಕಳ ಭವಿಷ್ಯ ರೂಪಿಸುವ ವಿದ್ಯಾಕೇಂದ್ರ ಅವರ ಜೀವನದ ಮೊದಲ ಮೆಟ್ಟಿಲು ಎಂದು ನುಡಿದು ಶುಭ ಹಾರೈಸಿದರು.
ಮುಖ್ಯ ಅತಿಥಿ ನಮೃತಾ ಅಣ್ಣಪ್ಪ ಪ್ರಭು ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಮಕ್ಕಳಿಗೆ ಭಾರತೀಯ ಮೌಲ್ಯಾಧಾರಿತ ಜ್ಞಾನ, ಸಂಸ್ಕಾರ ನೀಡುವ ಕೆಲಸ ಶ್ರೇಷ್ಠವಾದುದು. ಮರೆಯುತ್ತಿರುವ ಸಂಸ್ಕೃತಿಯನ್ನು ಮಕ್ಕಳ ವಿಕಸನಕ್ಕೆ ಧಾರೆಯೆರೆಯುತ್ತಿರುವುದು ಶ್ಲಾಘನೀಯ ಎಂದರು.
ಉದ್ಯಮಿ ಅಣ್ಣಪ್ಪ ಪ್ರಭು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾಲಯದ ಮಕ್ಕಳಿಂದ ಶ್ಲೋಕ, ಸುಭಾಷಿತ ಹಾಗು ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಿತು. ಸಂಸ್ಥೆಯ ಅಧ್ಯಕ್ಷ ನವೀನಪ್ರಕಾಶ್ ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಂಜುಳಾ ಸ್ವಾಗತಿಸಿ, ಶ್ರುತಿ ವಂದಿಸಿದರು.