

ಗಂಡಿಬಾಗಿಲು: ಮಾ.20ರಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಎಂ.ಕಾಂ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಲ್ಲಿರುವ ಸಿಯೋನ್ ಆಶ್ರಮಕ್ಕೆ ಅರ್ಥಪೂರ್ಣ ಭೇಟಿಯನ್ನು ಕೈಗೊಂಡರು. ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರು ತುಂಬು ಹೃದಯದಿಂದ ಈ ಪುಣ್ಯ ಕಾರ್ಯಕ್ಕೆ ಶುಭ ಹಾರೈಸಿ, ವಿದ್ಯಾರ್ಥಿ ಸಮೂಹವನ್ನು ಮತ್ತು ಪ್ರಾಧ್ಯಾಪಕ ವೃಂದವನ್ನು ಈ ಭೇಟಿಗೆ ಬಿಳ್ಕೊಟ್ಟರು.
ಎ.ಕಾಂ ವಿಭಾಗದ ಸಂಯೋಜಕರಾದ ನೆಲ್ಸನ್ ಮೊನಿಸ್ ಸೇರಿದಂತೆ ಒಟ್ಟು 47 ವಿದ್ಯಾರ್ಥಿಗಳು ಮತ್ತು ನಾಲ್ಕು ಬೋಧಕ ಸಿಬ್ಬಂದಿಗಳನ್ನು ಸಿಯೋನ್ ಆಶ್ರಮದ ಕುಟುಂಬದವರು ಮತ್ತು ಸಿಬ್ಬಂದಿ ವರ್ಗದವರು ಪ್ರೀತಿಯಿಂದ ಸ್ವಾಗತಿಸಿದರು.
ಸಿಯೋನ್ ಆಶ್ರಮದ ಕಾರ್ಯ ನಿರ್ವಾಹಕರಾದ ರಿತೇಶ್‌ರವರು ಆಶ್ರಮದ ಸಂಸ್ಥಾಪಕರಾದ ಯು.ಸಿ ಪೌಲೊಸ್ ಅವರ ಸ್ಪೂರ್ತಿದಾಯಕ ಜೀವನದ ಮೈಲಿಗಲ್ಲಿನ ಪ್ರಯಾಣವನ್ನು ಹಂಚಿಕೊಂಡರು. ಪ್ರಾರಂಭದಲ್ಲಿ ಇಬ್ಬರು ನಿರ್ಗತಿಕರನ್ನು ರಸ್ತೆ ಬದಿಯಿಂದ ತಂದು ತನ್ನ ಸ್ವಂತ ಮನೆಯಲ್ಲಿ ಆಶ್ರಯವನ್ನು ನೀಡಿ ಪ್ರಾರಂಭಿಸಿದ ಸಂಸ್ಥೆ ಇಂದು ಸರಿಸುಮಾರು 390 ಅನಾಥರಿಗೆ, ನಿರ್ಗತಿಕರಿಗೆ, ಕಡೆಗಣಿಸಲ್ಪಟ್ಟವರಿಗೆ, ಅಗತ್ಯವಿರುವವರಿಗೆ ಆಶ್ರಯ, ಆರೈಕೆ ಮತ್ತು ಘನತೆಯನ್ನು ಒದಗಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದರು.
ವಿದ್ಯಾರ್ಥಿಗಳು ವಾರ್ಡ್‌ಗಳಿಗೆ ಭೇಟಿ ನೀಡಿ ಆಶ್ರಮ ನಿವಾಸಿಗಳೊಡನೆ ಮಾತುಕತೆ ನಡೆಸಿದರು ಮತ್ತು ನಂತರ ಹಾಡುಗಳು ಮತ್ತು ನೃತ್ಯಗಳಿಂದ ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅವರನ್ನು ರಂಜಿಸಿದರು.
ಈ ಭೇಟಿಯ ಪ್ರಮುಖ ಅಂಶವೆಂದರೆ, 66,875 ಮೌಲ್ಯದ 535 ಸ್ವಾಸ್ತ್ ಕಿಟ್‌ಗಳನ್ನು ಎ.ಕಾಂ ವಿದ್ಯಾರ್ಥಿಗಳು ವಿತರಿಸಿದರು. ಪ್ರತಿಯೊಂದು ಸ್ವಸ್ತ್ ಕಿಟ್‌ನಲ್ಲಿ 4 ಸ್ನಾನದ ಸಾಬೂನುಗಳು, ಇನ್ನೂರು ಗ್ರಾಂ ತೂಕದ ಟೂತ್‌ಪೇಸ್ಟ್ ಮತ್ತು ಅರ್ಧ ಕೆಜಿ ತೂಕದ ಡಿಟರ್ಜೆಂಟ್ ಪೌಡರ್ ನೀಡಲಾಗಿತ್ತು. ನೈರ್ಮಲ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಈ ಕಿಟ್‌ಗೆ ದಾನಿಗಳು ಕಾಲೇಜಿನ ಪ್ರಾಧ್ಯಾಪಕ ಮತ್ತು ಆಡಳಿತ ಸಿಬ್ಬಂದಿಯವರ ಸಹಕಾರ ಲಭಿಸಿತು.
ಯು.ಸಿ. ಪಾಲೋಸ್ ಅವರ ಪತ್ನಿ ಮೇರಿ ಯು.ಪಿ. ಅವರೊಂದಿಗೆ ವಿದ್ಯಾರ್ಥಿಗಳ ಈ ಪ್ರೀತಿಯ ಕಾರ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.