ಬೆಳ್ತಂಗಡಿ: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಆರಂಭಗೊಂಡಿರುವ ವಾರ್ಷಿಕ ಜಾತ್ರೋತ್ಸವಕ್ಕೆ ಕರಾವಳಿಯ ನಾನಾ ಭಾಗಗಳಿಂದ ಹಸಿರು ಹೊರೆಕಾಣಿಕೆ ಫೆ.೨೮ರಂದು ಸಮರ್ಪಣೆಗೊಂಡಿತು. ಬೆಳಿಗ್ಗೆ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಎದುರು ಮಂಗಳೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಸಿರುವಾಣಿ ಹೊತ್ತ ವಾಹನಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಹಸಿರುವಾಣಿ ವಾಹನಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಮಾವೇಶಗೊಂಡಿತು. ದೇವಳಲ್ಲಿ ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪರವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನಕಾಯಿ ಒಡೆದು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರಾದ ಜಯಂತ ನಡುಬೈಲು, ಪೀತಾಂಬರ ಹೇರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಂ ಕೆ.ಬಿ., ಕೋಶಾಧಿಕಾರಿ ಮೋಹನದಾಸ್ ವಾಮಂಜೂರು, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಸದಸ್ಯರಾದ ನಾರಾಯಣ ಮಚ್ಚಿನ, ಪ್ರಮುಖರಾದ ಯಶವಂತ ದೇರಾಜೆಗುತ್ತು, ಜಾತ್ರೋತ್ಸವ ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ರವಿ ಕಕ್ಕೆಪದವು, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಗರಸಭೆ ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಸ್ ರೈ, ಕೃಷ್ಣವೇಣಿ ಮತ್ತಿತರರು ಉಪಸ್ಥಿತರಿದ್ದರು.