ರಾಮಕೃಷ್ಣ ಭಟ್ ಚೊಕ್ಕಾಡಿಯವರ “ಪ್ಲೀಸ್… ಸ್ವಲ್ಪ ಗಮನಿಸಿ” ಪುಸ್ತಕ ಬಿಡುಗಡೆ

0

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಬಿಡುಗಡೆಯಲ್ಲಿ ಅಂಕಣ ಬರಹವಾಗಿ ಪ್ರಕಟವಾಗಿದ್ದ, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಅಂಕಣ ಬರಹದ ಸಂಕಲನ “ಪ್ಲೀಸ್… ಸ್ವಲ್ಪ ಗಮನಿಸಿ” ಎಂಬ ಪುಸ್ತಕವು ಸುಳ್ಯದ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಬಿಡುಗಡೆಯಾಯಿತು.

ಖ್ಯಾತ ಶಿಕ್ಷಣ ತಜ್ಞ, ಆಡಳಿತಗಾರ, ಬರಹಗಾರರಾದ ಪ್ರೊ. ರಾಧಾಕೃಷ್ಣ ಕೆ. ಇ. ಇವರು ಬಿಡುಗಡೆಗೊಳಿಸಿ ಮಾತನಾಡುತ್ತಾ, ಪುಸ್ತಕ ಮಸ್ತಕಕ್ಕೆ ಬರಬೇಕು. ಇವತ್ತು ಶಿಕ್ಷಣದ ಹೆಸರಲ್ಲಿ ಮಾಹಿತಿ ಸಂಗ್ರಹ ನಡೆಯುತ್ತಿದೆ. ಗುಣಮಟ್ಟದ, ಸ್ಪರ್ಧೆಯ, ಕೌಶಲದ ಹೆಸರಲ್ಲಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಆಲದ ಮರದಂತೆ ದೃಷ್ಟಿ ಮತ್ತು ಸೃಷ್ಟಿ ಬೆಳೆಯಬೇಕು. ಈ ಪುಸ್ತಕವು ಶೈಕ್ಷಣಿಕ ಚಿಂತನೆಗಳ, ವ್ಯಕ್ತಿತ್ವ ವಿಕಾಸದ ವಿಷಯಗಳ ಮೂಲಕ ಗಮನ ಸೆಳೆಯುತ್ತಿದೆ. ಶೈಕ್ಷಣಿಕ ವಲಯದಲ್ಲಿ ಈ ಕೃತಿಯು ಉಪಯೋಗಿಸುವಂತಾಗಬೇಕು ಎಂದು ಹೇಳಿದರು.

ಕೃತಿಕಾರರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಮಾತನಾಡುತ್ತಾ, ಈ ಕೃತಿಯ ವಿಚಾರಗಳು ಶೈಕ್ಷಣಿಕವಾಗಿ ಮಕ್ಕಳಿಗೆ ನೀಡಿದ ತರಬೇತಿಯ ವಿಷಯಗಳಾಗಿವೆ. ಈ ವಿಚಾರಗಳನ್ನು ಅಂಕಣ ಬರಹವಾಗಿ ಪ್ರಕಟಪಡಿಸಿದ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಪತ್ರಿಕೆಯ ಬಳಗಕ್ಕೆ, ಶೈಕ್ಷಣಿಕವಾಗಿ ಪ್ರಯೋಗಕ್ಕೆ ವಿಶೇಷವಾಗಿ ಪ್ರೋತ್ಸಾಹ ನೀಡಿದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ, ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥರವರು ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಹೆಮ್ಮೆಯ ಶಿಕ್ಷಕ ಪ್ರತಿಭೆ ರಾಮಕೃಷ್ಣ ಭಟ್ ರವರ ಈ ಕೃತಿಯನ್ನು ಶಿಕ್ಷಕರು ಬಳಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ನಿನಾದದ ರೂವಾರಿ ವಸಂತ ಶೆಟ್ಟಿ ಬೆಳ್ಳಾರೆಯವರು ಸ್ವಾಗತಿಸಿದರು. ಪ್ರಾಂಶುಪಾಲರಾಗಿ ದುಡಿದು ನಿವೃತ್ತಿ ಪಡೆದಿರುವ, ಕೃಷಿಕ ನಾರಾಯಣ ಶೇಡಿಕಜೆಯವರು ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಬಳಿಕ ಖ್ಯಾತ ಗಾಯಕಿಯರಾದ ಸುಪ್ರಿಯಾ ಆಚಾರ್ಯ ಮತ್ತು ಸುಮಾ ಕೋಟೆಯವರಿಂದ ಭಾವಗೀತೆ, ಜಾನಪದಗೀತೆ, ಭಕ್ತಿಗೀತೆಗಳ ಗಾಯನ ನಡೆಯಿತು. ನಿನಾದ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಐತಪ್ಪ ಶೆಟ್ಟಿಯವರು ವಂದಿಸಿದರು.

LEAVE A REPLY

Please enter your comment!
Please enter your name here