ಬೆಳ್ತಂಗಡಿ: ಉರುವಾಲು ಗ್ರಾಮದ ಹಲೇಜಿಯ ತನ್ನೋಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದ ಗುಡ್ಡಕ್ಕೆ ಫೆ.16ರಂದು ರಾತ್ರಿ 7 ಗಂಟೆಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ರಬ್ಬರ್ ಕೃಷಿ ನಿಲ್ಲಿಸಿ ಅಡಿಕೆ ಕೃಷಿ ಪ್ರಾರಂಭಿಸಲು ಸಿದ್ಧವಾಗಿದ್ದ ಬಳ್ಳಿ ಪೊದೆ ಮಿಶ್ರಿತ ಸುಮಾರು 5 ಎಕ್ರೆ ಯಷ್ಟು ಗುಡ್ಡ ಬೆಂಕಿಗೆ ಆಹುತಿಯಾಗಿದೆ.
ಇದನ್ನು ಗಮನಿಸಿದ ಪಕ್ಕದ ತೋಟದಲ್ಲಿ ಜೆ.ಸಿ.ಬಿ ಕೆಲಸ ಮಾಡುತ್ತಿದ್ದ ಕಲ್ಲೇರಿಯ ಚಾಮುಂಡೇಶ್ವರಿ ಅರ್ಥ್ ಮೂವರ್ಸ್ ಮಾಲಕ ದಿನೇಶ್ ನಾಯ್ಕ ಅವರು ಸಮಯ ಪ್ರಜ್ಞೆ ಮೆರೆದು ಬೆಂಕಿ ಹರಡಿದ್ದ ಗುಡ್ಡದ ಸುತ್ತ ಸಣ್ಣ ಕಂದಕ ನಿರ್ಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ನಂದಿಸುವ ಕಾರ್ಯದಲ್ಲಿ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ಹೆಚ್.ಎಲ್., ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮ ಪ್ರಸಾದ್, ತಾಲೂಕು ಮರಾಟಿ ಸಂಘದ ಅಧ್ಯಕ್ಷ ಸತೀಶ್ ಹೆಚ್.ಎಲ್., ಸ್ಥಳೀಯರಾದ ಶ್ರೀಧರ ಪೂಜಾರಿ, ಪ್ರಶಾಂತ್ ಹೆಚ್., ಗಣೇಶ್ ಮತ್ತಿತರರು ಸಹಕರಿಸಿದರು.