

ಇಂದಬೆಟ್ಟು: ಶುಲ್ಕ ಪಾವತಿ ಮಾಡದವರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತ ಮಾಡುವಂತೆ ಒತ್ತಾಯಿಸಿದ ಘಟನೆ ಇಂದಬೆಟ್ಟು ಗ್ರಾಮಸಭೆಯಲ್ಲಿ ನಡೆದಿದೆ.
ಇಂದಬೆಟ್ಟು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ ಅವರ ಅಧ್ಯಕ್ಷತೆಯಲ್ಲಿ ಫೆ.12ರಂದು ಪಂಚಾಯತ್ ಸಭಾಭವನದಲ್ಲಿ ಜರಗಿತು. ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಅಧಿಕಾರಿ ವೀರಭದ್ರಪ್ಪ ಭಾಗವಹಿಸಿದ್ದರು.
ಗ್ರಾಮಸ್ಥರ ಅಸಮಾಧಾನ: ಶುಲ್ಕ ಪಾವತಿ ಮಾಡಲು ಬಾಕಿ ಇರುವ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೆಲವೊಂದು ಮನೆಯವರು ಪಂಚಾಯತಿಗೆ ನೀರಿನ ಬಿಲ್ಲು ಪಾವತಿ ಮಾಡದೆ ಬಾಕಿ ಮಾಡಿದ್ದಾರೆ. ಪಂಚಾಯತ್ ಆದಾಯಕ್ಕಿಂತ ಗ್ರಾಮದ ಇತರ ಖರ್ಚುಗಳು ಹೆಚ್ಚಾಗುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದಾಗ ಪ್ರತಿಕ್ರಿಯಿಸಿದ ಗ್ರಾಮಸ್ಥರು ನೀರಿನ ಬಿಲ್ಲು ಪಾವತಿ ಮಾಡದೆ ಬಾಕಿರುವ ಎಲ್ಲಾ ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಎಂದು ಒತ್ತಾಯಿಸಿದರು. ಯಾವ ವಾರ್ಡಿನ ಸದಸ್ಯರ ಮನೆಯವರು ಬಿಲ್ಲು ಪಾವತಿ ಮಾಡದೆ ಸದಸ್ಯರ ಪರವಾಗಿ ಪಂಚಾಯಿತಿಗೆ ಒತ್ತಡ ಹಾಕಿದರೆ ಅಂತವರ ಮೊತ್ತವನ್ನು ವಾರ್ಡ್ ಸದಸ್ಯ ಕಟ್ಟಬೇಕು ಎಂದು ಗ್ರಾಮಸ್ಥರು ಹೇಳಿದರು. ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ಇಟ್ಟಿರುವ ಯಾವುದೇ ಬೇಡಿಕೆ ಈಡೇರಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಬಂದಿಲ್ಲ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕದೆ ಹೋದ ಸಿಬ್ಬಂದಿಗಳು: ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಫೆ. 8ರಂದು ಮಧ್ಯಾಹ್ನದ ನಂತರ ರಜೆ ಇದ್ದ ಕಾರಣ ಸಿಬ್ಬಂದಿಗಳು ಬೀಗ ಹಾಕದೆ ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದರ ಬಗ್ಗೆ ಪ್ರಶ್ನಿಸಿ ಕಚೇರಿ ಒಳಗಡೆ ಫ್ಯಾನ್ ಮತ್ತು ಬಲ್ಬುಗಳು ಉರಿಯುತ್ತಿದ್ದವು. ಹೋಟೆಲ್ ಸಿಬ್ಬಂದಿಯನ್ನು ಬೀಗ ಹಾಕಲು ತಿಳಿಸಿದನ್ನು ಗ್ರಾಮಸ್ಥರು ಪ್ರಶ್ನಿಸಿದರು. ಅನೇಕ ಕಬ್ಬಿಣದ ಕಂಬಗಳು ಇಂದಬೆಟ್ಟು ಗ್ರಾಮದಲ್ಲಿ ಇದೆ. ಅದನ್ನು ಬದಲಾವಣೆ ಮಾಡಬೇಕು ಮತ್ತು ಲೈನ್‌ಮ್ಯಾನ್ ಅವಶ್ಯಕತೆ ಇದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗೆ ಗ್ರಾಮಸ್ಥರು ತಿಳಿಸಿದರು. ಮಜಲು ರೋಡಿಗೆ ಬಸ್ ನಿಲ್ದಾಣ ಮತ್ತು ಬಸ್ ನಿಲ್ಲಿಸುವ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ಹೇಳಿದಾಗ ಉತ್ತರಿಸಿದ ಅಧ್ಯಕ್ಷರು ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು.

ಅತ್ಯುತ್ತಮವಾಗಿ ಸಭೆ ನಡೆದಿದೆ: ಆಶಾಲತಾ -ಅಧಿಕಾರಿಗಳು ಇಲ್ಲದೆ ಗ್ರಾಮಸಭೆ ಮುಂದೂಡಿಕೆಯಾಗುತ್ತದೆ ಎಂದು ಭಯವಾಗಿತ್ತು. ಆದರೆ ನಿಮ್ಮೆಲ್ಲರ ಸಹಕಾರದಿಂದ ಅತ್ಯುತ್ತಮವಾಗಿ ಸಭೆ ನಡೆದಿದೆ. ಒಳ್ಳೆಯ ಮಾಹಿತಿಯನ್ನು ನೀಡಿ ಗ್ರಾಮದ ಅಭಿವೃದ್ಧಿಗೆ ನಾವು ನಿಮ್ಮೊಂದಿಗೆ ಇದ್ದೇವೆ. ನೀವು ನಮ್ಮೊಂದಿಗೆ ಇರುವ ಒಳ್ಳೆಯ ಸಂದೇಶ ನೀಡಿದ್ದೀರಿ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸುವ ಎಂದು ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಹೇಳಿದರು.
ಸಿಬ್ಬಂದಿಗಳ ಕೊರತೆಯಿಂದ ತೊಂದರೆ: ವೀರಭದ್ರಪ್ಪ -ಗ್ರಾಮ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿರುವುದು ತುಂಬಾ ಖುಷಿಯಾಯಿತು. ಗ್ರಾಮದ ಸಮಸ್ಯೆಗಳ ಬಗ್ಗೆ ಜನರು ಪ್ರಸ್ತಾಪಿಸಿದಾಗ ಮಾತ್ರ ಬಗೆಹರಿಯುವುದು. ಸಭೆಯಲ್ಲಿ ಅಧಿಕಾರಿಗಳು ಕೊನೆಯವರೆಗೆ ಇರಬೇಕು. ಗ್ರಾಮಸ್ಥರು ಕೊಟ್ಟ ಅರ್ಜಿಯ ಬಗ್ಗೆ ಕೇಳುತ್ತಿರಬೇಕು. ಎಲ್ಲಾ ಇಲಾಖೆಯಲ್ಲಿಯೂ ಸಿಬ್ಬಂದಿಗಳ ಕೊರತೆ ಇದೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಮಾರ್ಗದರ್ಶಕ ಅಧಿಕಾರಿ ವೀರಭದ್ರಪ್ಪ ಹೇಳಿದರು.
ಯಾರಲ್ಲಿ ನಾವು ಪ್ರಶ್ನಿಸಬೇಕು ಎಂದು ಗ್ರಾಮಸ್ಥರು ನೋಡಲ್ ಅಧಿಕಾರಿಯನ್ನು ಪ್ರಶ್ನಿಸಿದರು. ಸಭೆಯಲ್ಲಿ ನಿರ್ಣಯ ಮಾಡಿ ಅಧಿಕಾರಿಗಳಿಗೆ ನೊಟೀಸ್ ಕಳುಹಿಸುವ ಎಂದು ನೋಡಲ್ ಅಧಿಕಾರಿ ವೀರಭದ್ರಪ್ಪ ಹೇಳಿದರು. ಪ್ರತಿ ಗ್ರಾಮ ಸಭೆಯಲ್ಲಿ ನಿಮ್ಮ ಉತ್ತರ ಇದೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಾಮಾನ್ಯ ಸಭೆಾ ಮತ್ತು ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಿದ ಯಾವುದೇ ಬೇಡಿಕೆ ಅರ್ಜಿಗಳಿಗೆ ಸ್ಪಂದನೆ ಇಲ್ಲ ಎಂದು ಆನಂದ್ ಆಡಿಲು ಮತ್ತು ಲಕ್ಷ್ಮಣ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯತ್ ಅಭಿವೃದ್ಧಿ ದೃಷ್ಠಿಯಿಂದ ಉನ್ನತ ಮಟ್ಟದ ಅಧಿಕಾರಿಗಳ ಸಭೆಗೆ ಕರೆದರೆ ಗ್ರಾಮಸ್ಥರಿಗೆ ತಿಳಿಸಿ ನಾವು ಬರುತ್ತೇವೆ ಎಂದು ಜಾಕೂಬ್ ಹೇಳಿದರು.
ಕರುಗಳ ಪ್ರದರ್ಶನ: ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಒಂದು ವರ್ಷದ ಒಳಗಿನ ಹೆಣ್ಣು ಕರುಗಳ ಪ್ರದರ್ಶನೆ ಮತ್ತು ಪೂಜೆ ನಡೆಯಲಿದೆ ಮತ್ತು ಹಾಲು ಕರೆಯುವ ಸ್ಪರ್ಧೆ ಇದೆ. ಹಾಲಿನ ಸಂಘದಲ್ಲಿ ಹೆಸರು ನೋಂದಾಯಿಸಿ ಎಂದು ಪಶು ಸಂಗೋಪನಾ ಇಲಾಖಾಧಿಕಾರಿ ಹೇಳಿದರು. ಪಂಚಾಯತ್ ಸದಸ್ಯರುಗಳಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಆನಂದ ಅಡಿಲು, ಪ್ರಮೋದ್ ಬೆದ್ರಬೆಟ್ಟು, ಸತೀಶ್ ಬೆದ್ರಬೆಟ್ಟು, ಸುಮಿತ್ರಾ, ಹರಿಣಾಕ್ಷಿ, ವೀರಪ್ಪ ಮೊಯ್ಲಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳುವ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ರಶ್ಮಿ ಬಿ.ಪಿ ಸ್ವಾಗತಿಸಿ ವರದಿ ಮಂಡಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಕ್ ತಿಳಿಸಿ ವಂದಿಸಿದರು.