ಪಡಂಗಡಿ: “ಸರಕಾರಿ ಶಾಲೆಗಳು ಸಬಲೀಕರಣಗೊಳ್ಳಲು ಸರಕಾರದ ಇಚ್ಛಾಶಕ್ತಿ, ಕ್ರಿಯಾಯೋಜನೆಗಳು ಅತ್ಯಗತ್ಯ. ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಸರಕಾರಿ ಶಾಲೆಗಳನ್ನು ಬಲಪಡಿಸಬೇಕು. ಹಾಗೆಯೇ ಹೋಬಳಿಗೊಂದರಂತೆ ಸುಸಜ್ಜಿತ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಕಲಿಕೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಅನುವು ಮಾಡಿಕೊಡಬೇಕು. ಒಂದೇ ಸೂರಿನಲ್ಲಿ ಮಕ್ಕಳು ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆಯುವಂತಾಗಬೇಕು” ಎಂದು ಪಡಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ವಹಿಸಿದ್ದರು. ಪಡಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಪ್ರೌಢಶಾಲಾ ಶಿಕ್ಷಣ ಸಂಯೋಜಕಿ ಚೇತನಾಕ್ಷಿ, ಪಡಂಗಡಿ ಸಿ. ಎ. ಬ್ಯಾಂಕ್ ಅಧ್ಯಕ್ಷ ಅಂತೋನಿ ಫರ್ನಾಂಡೀಸ್, ಅಶೋಕ್ ಗೋವಿಯಸ್, ಮಾಕ್ಸಿಂ ಸಿಕ್ಕೇರಾ, ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್, ಸಿ.ಎ. ಬ್ಯಾಂಕ್ ನಿರ್ದೇಶಕರು, ಶಾಲಾ ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ಅನ್ನಮ್ಮ ವಿ. ಎಂ. ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಶ್ರೀಶ ಭಟ್ ಕಾರ್ಯಕ್ರಮ ನಿರೂಪಣೆಗೈದರು. ಕನ್ನಡ ಭಾಷಾ ಶಿಕ್ಷಕಿ ಶಶಿಕಲಾ ಧನ್ಯವಾದ ಅರ್ಪಿಸಿದರು.