ಉಜಿರೆ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವು ಜ. 01 ರಂದು ಸಿರಿ ಕೇಂದ್ರ ಕಛೇರಿಯಲ್ಲಿ ಜರುಗಿತು.
ಉಜಿರೆ ಶ್ರೀ ಧ. ಮಂ. ಕಾಲೇಜು ಪ್ರಾಂಶುಪಾಲ ಕುಮಾರ್ ಹೆಗ್ಡೆ ಬಿ. ಎ. ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು 2025 ನೇ ಹೊಸ ವರ್ಷಕ್ಕೆ ಪಾದಾರ್ಪಣೆಗೈಯುವ ಈ ಶುಭ ವೇಳೆಯಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಹೊಸ ಆಲೋಚನೆ, ಹೊಸ ನಿರ್ಣಯ, ಹೊಸ ಹವ್ಯಾಸ, ಹೊಸ ಅಭಿರುಚಿಯನ್ನು ರೂಢಿಸಿಕೊಳ್ಳುವ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳುವ ಬಗ್ಗೆ ಪಣತೊಡೋಣ ಎಂದು ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದರು.
ಇದೇ ಸಂದರ್ಭದಲ್ಲಿ ಸಿರಿ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗಾಗಿ ರಚನೆಯಾಗಿರುವ ‘ಸಿರಿ ಕ್ಲಬ್’ ನ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿ ಮಾತನಾಡಿದ ಅವರು ಒಂದು ಸಂಸ್ಥೆಯು ಯಶಸ್ವಿಯಾಗಿ ನಡೆಯಲು ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಶ್ರಮವೂ ಅಷ್ಟೇ ಮುಖ್ಯ. ಡಿ. ವೀರೇಂದ್ರ ಹೆಗ್ಗಡೆ ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ತ್ರೀ ಸಬಲೀಕರಣದ ಧ್ಯೇಯೋದ್ದೇಶದಿಂದ ಕಟ್ಟಿ ಬೆಳೆಸುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ‘ಸಿರಿ ಕ್ಲಬ್’ ಬಳಗವನ್ನು ಕಟ್ಟಿಕೊಂಡಿದ್ದೀರಿ. ಇದು ನಿಜವಾಗಿಯೂ ಬಹಳ ಒಳ್ಳೆಯ ಚಿಂತನೆಯಾಗಿದ್ದು, ಇದಕ್ಕೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವ ಹಾಗೂ ಇಂತಹ ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸಿದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಒಳಿತಿಗಾಗಿ ನಡೆಸಲ್ಪಡುತ್ತಿರುವ ಸಿರಿ ಸಂಸ್ಥೆಯಲ್ಲಿ ಎಲ್ಲರೂ ನಿಷ್ಠೆಯಿಂದ ದುಡಿದು ತಮ್ಮ ಪರಿವಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಜೊತೆಗೆ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆಯವರಿಗೆ ಕೃತಜ್ಞರಾಗಿ ಬಾಳಿ ಎಂದು ಶುಭ ಕೋರಿದರು. ಸಿರಿ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಹೊಸದಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಹೊಸ ಸಿಬ್ಬಂದಿಗಳಿಗೆ ಪುಷ್ಪಗುಚ್ಛವನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಸಿರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ರಾಜೇಶ್ ಪೈ ಸಿರಿ ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿ, ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ಚಿಂತೆನೆಯೊಂದಿಗೆ, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳೂ ಒಟ್ಟಾಗಿ ಶ್ರಮವಹಿಸಿ ದುಡಿದು ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಹಕರಿಸುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ಧನ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವರ್ಷದ ಸಂಭ್ರಮೋಪಾದಿಯಲ್ಲಿ ಸಿರಿ ಸಂಸ್ಥೆಗೆ ಆಗಮಿಸಿ ಎಲ್ಲಾ ಸಿರಿ ಸಿಬ್ಬಂದಿಗಳಿಗೂ ಶುಭವನ್ನು ಹಾರೈಸಿದ ಎಸ್. ಡಿ. ಎಮ್ ಪ್ರಾಂಶುಪಾಲರಿಗೆ, ರಾಜೇಶ್ ಪೈ ಹಾಗೂ ಬೆಳ್ತಂಗಡಿ ಎಸ್. ಎಲ್. ವಿ ಕನ್ ಸ್ಟ್ರಕ್ಷನ್ಸ್ ನ ಇಂಜಿನಿಯರ್ ಸಂಪತ್ ರತ್ನಾರವರಿಗೆ ಗೌರವಾರ್ಪಣೆ ಸಲ್ಲಿಸಿದರು.
2025 ನೇ ಹೊಸ ವರ್ಷದಲ್ಲಿ ಎಲ್ಲಾ ಸಿರಿ ಸಿಬ್ಬಂದಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿ ಎಂದು ಶುಭ ಹಾರೈಸಿದ ಸಿರಿ ಎಂ. ಡಿ. ಸಿರಿ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂಬರುವ ಮಾರ್ಚ್ ತಿಂಗಳಿನಲ್ಲಿ ಸಿರಿ ನೂತನ ಉತ್ಪಾದನಾ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ. ತದನಂತರದ ದಿನಗಳಲ್ಲಿ ಸಿರಿಯ ವಿವಿಧ ಉತ್ಪಾದನಾ ಘಟಕಗಳ ಎಲ್ಲಾ ಸಿಬ್ಬಂದಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಿ, ಸಿರಿ ಸಂಸ್ಥೆಯ ಏಳಿಗೆಗಾಗಿ ಎಲ್ಲರೂ ಶ್ರಮವಹಿಸಿ ದುಡಿಯುವ ಮೂಲಕ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಸ್ತ್ರೀ ಸಬಲೀಕರಣದ ಕನಸನ್ನು ನನಸಾಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ನೆರೆದಿರುವಂತಹ ಅತಿಥಿ ಗಣ್ಯರ ಸಮ್ಮುಖದಲ್ಲಿ ಎಲ್ಲಾ ಸಿರಿ ಸಿಬ್ಬಂದಿಗಳು ಹೊಸ ವರ್ಷವನ್ನು ಆಚರಿಸುವ ಮೂಲಕ ಸಂಭ್ರಮಪಟ್ಟರು. ಹೊಸ ವರ್ಷದ ಪ್ರಯುಕ್ತ ಎಲ್ಲಾ ಸಿರಿ ಸಿಬ್ಬಂದಿಗಳಿಗೆ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಸಿರಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ಸ್ವಾಗತಿಸಿ, ಗೋದಾಮು ಪ್ರಬಂಧಕ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.. ಸಿರಿ ಅಗರಬತ್ತಿ ಘಟಕದ ಮೇಲ್ವಿಚಾರಕ ಸತೀಶ್ ಧನ್ಯವಾದವಿತ್ತರು.