ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣಕ್ಕೆ ಜಮೀನು ತೊಡಕು – ಕಲ್ಮಂಜ, ಲಾಯಿಲದಲ್ಲಿ 140 ಎಕ್ರೆ ಭೂಮಿ ಸಿಗದೆ ಆರಂಭಿಕ ಹಿನ್ನಡೆ – ಪರ್ಯಾಯ ಭೂಮಿ ಹುಡುಕಾಟದಲ್ಲಿ ಜಿಲ್ಲಾಡಳಿತ

0

p>

ಬೆಳ್ತಂಗಡಿ: ಪ್ರವಾಸೋದ್ಯಮವನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಿನಿ ವಿಮಾನ ನಿಲ್ದಾಣಕ್ಕೆ ಈಗ ಜಮೀನು ತೊಡಕು ಕಾಡುತ್ತಿದೆ. ಮಿನಿ ವಿಮಾನ ನಿಲ್ದಾಣ ಮಾಡುವುದಾದರೆ ಕನಿಷ್ಠ 140ಎಕ್ರೆ ಜಮೀನು ಅಗತ್ಯವಿದೆ. ಆದರೆ ಜಿಲ್ಲಾಡಳಿತ ಗುರುತಿಸಿದ್ದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಹಾಗೂ ಲಾಯಿಲ ಗ್ರಾಮಗಳ ಜಮೀನನ್ನು ಪರಿಶೀಲಿಸಿದ ಮೂಲಸೌಕರ್ಯ ಅಭಿವೃದ್ಧಿ ನಿಗಮದ ತಾಂತ್ರಿಕ ತಂಡದವರು ಈ ಜಾಗ ಸೂಕ್ತವಾಗಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಸದ್ಯ ಲಭ್ಯವಿರುವ ಜಮೀನು ಮಿನಿ ವಿಮಾನ ನಿಲ್ದಾಣ ನಿರ್ಮಿಸಲು ಸಾಲುತ್ತಿಲ್ಲ ಎಂದಿದ್ದಾರೆ. ನಿಗದಿತ ಜಮೀನಿನ ಸ್ಥಿತಿಗತಿಯನ್ನು ಕಂದಾಯ, ಮಾಲಿನ್ಯ, ಭೂವಿಜ್ಞಾನ, ಭೂಮಾಪನ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿದ್ದಾರೆ. ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳೂ ಪರಿಶೀಲಿಸಿದ್ದಾರೆ. ಈ ಜಾಗ ಏರು ತಗ್ಗುಗಳಿಂದ ಕೂಡಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ. ಜತೆಗೆ ಅರಣ್ಯ ಇಲಾಖೆಯ ವಶದಲ್ಲಿರುವ ಅಕೇಶಿಯಾ ಹಾಗೂ ನೆಡುತೋಪುಗಳು ಇಲ್ಲಿರುವುದನ್ನು ಪರಿಶೀಲಿಸಲಾಗಿತ್ತು.

ಪರ್ಯಾಯ ಜಾಗಕ್ಕೆ ಹುಡುಕಾಟ: ಈಗ ಪರ್ಯಾಯ ಸ್ಥಳಗಳನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಂದ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಸೂಚನೆ ಬಂದಿದ್ದು ಜಾಗಕ್ಕಾಗಿ ಹುಡುಕಾಟ ನಡೆಯುತ್ತಿದೆ. ಈಗ ನಿಗದಿ ಮಾಡಿರುವ ಜಾಗ ಸೂಕ್ತ ಅಲ್ಲ ಎಂಬುದಾಗಿ ಸ್ಥಳ ಪರಿಶೀಲಿಸಿದ ವಿಮಾನ ನಿಲ್ದಾಣ ಸಚಿವಾಲಯದ ತಾಂತ್ರಿಕ ತಂಡ ತಿಳಿಸಿದೆ. ಪರ್ಯಾಯ ಜಾಗ ಪರಿಶೀಲನೆಯ ಹಂತದಲ್ಲಿದೆ. ಇನ್ನೂ ಅಂತಿಮ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರ್ಯಾಯ ಜಾಗ ನಿಗದಿ ಮಾಡಲು ಸೂಚನೆ: ಪ್ರವಾಸೋದ್ಯಮ ಹಾಗೂ ಉದ್ಯಮ ವಲಯವನ್ನು ಉತ್ತೇಜಿಸಲು ಮತ್ತು ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ 2023-24ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಧರ್ಮಸ್ಥಳ, ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಹೊಸ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಪ್ರಕಟಿಸಿತ್ತು.
ಈ ಪೈಕಿ ಚಿಕ್ಕಮಗಳೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಕೊಡಗು ಏರ್‌ಸ್ಟ್ರಿಪ್‌ಗೆ ಕುಶಾಲನಗರ ಸಮೀಪ ಜಮೀನು ಗುರುತಿಸಿದ್ದು, ತಾಂತ್ರಿಕ ತಂಡದ ಪರಿಶೀಲನೆ ನಡೆಯುತ್ತಿದೆ. ಧರ್ಮಸ್ಥಳದ ಮಿನಿ ವಿಮಾನ ನಿಲ್ದಾಣಕ್ಕೆ ಪರ್ಯಾಯ ಜಾಗ ನಿಗದಿ ಮಾಡುವಂತೆ ಈಗಾಗಲೇ ಸೂಚನೆ ಬಂದಿದೆ. ಈ ಕುರಿತಂತೆ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here