

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದ ೬ನೇ ಆರೋಪಿ ಮೊಹಮ್ಮದ್ ಷರೀಫ್ ಕೊಡಾಜೆ(55.ವ) ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ವಿದೇಶದಿಂದ ವಾಪಸ್ ಬರುವಾಗ ದೆಹಲಿ ಏರ್‌ಪೋರ್ಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಈತನ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತ ಪ್ರವೀಣ್ ನೆಟ್ಟಾರ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್‌ಐಎ ಅಧಿಕಾರಿಗಳು ಮೊಹಮ್ಮದ್ ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಸ್ಥಳಗಳ ಮೇಲೆ ಇತ್ತೀಚೆಗೆ ಎನ್‌ಐಎ ದಾಳಿ ಮಾಡಿ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿತ್ತು. ಕರ್ನಾಟಕ ಸೇರಿ ತಮಿಳುನಾಡಿನ ೧೬ ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಕೆಯ್ಯೂರು, ಉಪ್ಪಿನಂಗಡಿ, ಬೆಳ್ತಂಗಡಿಯ ಪಡಂಗಡಿಯಲ್ಲಿಯೂ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಪಡಂಗಡಿಯ ನೌಷಾದ್ ಪತ್ತೆಗೆ
ಮುಂದುವರಿದ ಕಾರ್ಯಾಚರಣೆ: 2022ರ ಜುಲೈ 26ರಂದು ರಾತ್ರಿ 8.30ರ ವೇಳೆಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಮಹಮ್ಮದ್ ಷರೀಫ್ ಕೊಡಾಜೆಯನ್ನು ಬಂಧಿಸಿದ ಬಳಿಕ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ನೌಷಾದ್ ಪತ್ತೆಗೆ ಮತ್ತೆ ಕಾರ್ಯಾಚರಣೆ ಬಿರುಸುಗೊಳಿಸಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆಮರೆಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಹಮೀದ್ ಅವರ ಪುತ್ರ ನೌಷದ್ (27ವ) ಎಂಬಾತನ ಮನೆಗೆ ಬೆಂಗಳೂರಿನಿಂದ ಬಂದ ಐದು ಜನರ ಎನ್.ಐ.ಎ. ಅಧಿಕಾರಿಗಳ ತಂಡ ಇತ್ತೀಚೆಗೆ ಪರಿಶೀಲನೆ ನಡೆಸಿತ್ತು. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಇದುವರೆಗೆ 20 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳೂ ಸೇರಿದಂತೆ ಒಟ್ಟು 23 ಮಂದಿ ವಿರುದ್ಧ ಈಗಾಗಲೇ ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.
ಕೊಲೆ ಪ್ರಕರಣದ ನೇರ ಆರೋಪಿಗಳಾದ ಶಿಯಾಬ್ ನಾವೂರು, ಬಶೀರ್ ಎಲಿಮಲೆ, ರಿಯಾಜ್ ಅಂಕತಡ್ಕ, ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಮಹಮ್ಮದ್ ಮುಸ್ತಫ ಪೈಚಾರು, ತುಫೈಲ್ ಮಡಿಕೇರಿ ಮತ್ತು ಕೊಲೆಗೆ ನೆರವು ನೀಡಿದ ಆರೋಪಿಗಳಾದ ಶಫೀಕ್ ಬೆಳ್ಳಾರೆ, ಝಕೀರ್ ಸವಣೂರು, ಹಾರಿಸ್ ಪಳ್ಳಿಮಜಲು, ನೌಫಲ್ ಗೌರಿಹೊಳೆ, ಆಬಿದ್ ನಾವೂರು, ಜಟ್ಟಿಪಳ್ಳದ ಅಬ್ದುಲ್ ಕಬೀರ್, ಶಾಫಿ ಬೆಳ್ಳಾರೆ, ಇಕ್ಸಾಲ್ ಬೆಳ್ಳಾರೆ, ಇಬ್ರಾಹಿಂ ಷಾ, ಸದ್ದಾಂ ಪಳ್ಳಿಮಜಲು, ಶಾಹಿದ್ ಬೆಳ್ಳಾರೆ, ಜಾಬಿರ್ ಅರಿಯಡ್ಕ, ಮನ್ಸೂರ್ ಪಾಷಾ ಮತ್ತು ಶತೀಫ್ ಕೊಡಾಜೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿದ್ದಿಕ್ ಬೆಳ್ಳಾರೆ, ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಬ್ದುಲ್ ನಾಸಿರ್ ಸೋಮವಾರಪೇಟೆ, ಅಬ್ದುಲ್ ರಹಿಮಾನ್ ಸೋಮವಾರಪೇಟೆ ಹಾಗೂ ನೌಶಾದ್ ಪಡಂಗಡಿ ಬೆಳ್ತಂಗಡಿ ಎಂಬವರನ್ನು ಬಂಧನಕ್ಕಾಗಿ ಹುಡುಕಲಾಗುತ್ತಿದೆ.