ಅಧಿವೇಶನದಲ್ಲಿ ಶಾಸಕ ಪೂಂಜರಿಂದ ಕಬಡ್ಡಿ ಅಸೋಸಿಯೇಶನ್‌ನ ಘನತೆಗೆ ಚ್ಯುತಿ ಬರುವ ಹೇಳಿಕೆ – ತಾಲೂಕು ಕಬಡ್ಡಿ ಸಂಸ್ಥೆ ಗೌರವಾಧ್ಯಕ್ಷರಾಗಿದ್ದರೂ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದ ಪೂಂಜ – ಶಾಸಕರ ಬಗ್ಗೆ ಸಭಾಧ್ಯಕ್ಷರಿಗೆ ದೂರು: ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ

0

p>

ಬೆಳ್ತಂಗಡಿ: ಹಲವು ಸಾಧನೆಗಳನ್ನು ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ವಿಧಾನಸಭಾ ಅಧಿವೇಶನದಲ್ಲಿ ಆರೋಪ ಮಾಡಿರುವುದು ಖೇದಕರವಾಗಿದೆ. ಸ್ವತಃ ಜಿಲ್ಲಾ ಸಂಸ್ಥೆಯ ಅಜೀವ ಸದಸ್ಯರಾಗಿದ್ದರೂ ಬೆಳ್ತಂಗಡಿ ತಾಲೂಕು ಕಬಡ್ಡಿ ಸಂಸ್ಥೆ ಗೌರವ ಅಧ್ಯಕ್ಷರಾಗಿದ್ದರೂ ಹರೀಶ್ ಪೂಂಜ ಅವರು ಯಾವುದೇ ಮಹಾಸಭೆಗೆ ಮತ್ತು ಯಾವುದೇ ಕಬಡ್ಡಿ ಸಂಸ್ಥೆ ಚಟುವಟಿಕೆಗಳಲ್ಲಿ ಭಾಗವಹಿಸದೇ ಆರೋಪ ಮಾಡಿದ್ದಾರೆ ಎಂದು ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.

ಸೌಜನ್ಯಕ್ಕಾಗಿಯೂ ಭೇಟಿ ನೀಡಿಲ್ಲ: ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಂಟಕ್ ರಾಷ್ಟ್ರೀಯ ಮುಖಂಡರೂ ಆಗಿರುವ ರಾಕೇಶ್ ಮಲ್ಲಿ ಅವರು 2022ರಲ್ಲಿ ಬೆಳ್ತಂಗಡಿ ತಾಲೂಕಿನ ಎಸ್.ಡಿ.ಎಮ್. ಕಾಲೇಜ್ ಮತ್ತು ೨೦೨೩ನೇ ಸಾಲಿನಲ್ಲಿ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ಜ್ಯೂನಿಯರ್ ಬಾಲಕರ 10 ದಿವಸದ ತರಬೇತು ಶಿಬಿರಗಳಿಗೆ ಒಂದು ದಿವಸವೂ ಬಂದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಶಾಸಕರು ಮಾಡಲಿಲ್ಲ. ಬಂಟ್ವಾಳದ ಮದ್ದದಲ್ಲಿ ನಡೆದ ಸಬ್ ಜ್ಯೂನಿಯರ್ ಬಾಲಕ/ಬಾಲಕಿಯರ ತರಬೇತು ಶಿಬಿರಕ್ಕೆ ಸೌಜನ್ಯಕ್ಕಾಗಿಯೂ ಭೇಟಿ ನೀಡಿಲ್ಲ. ಇತ್ತೀಚೆಗೆ ಆಳ್ವಾಸ್ ಕಾಲೇಜು ಮತ್ತು ಸಂತ ಫಿಲೋಮಿನ ಕಾಲೇಜಿನಲ್ಲಿ ಜ್ಯೂನಿಯರ್ ಬಾಲಕ/ಬಾಲಕಿಯರ ತರಬೇತಿ ಶಿಬಿರವನ್ನು ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಆಯೋಜಿಸಿದ್ದು ಇದರ ಎಲ್ಲಾ ಖರ್ಚು ವೆಚ್ಚಗಳನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಡಾ. ಮೋಹನ್ ಆಳ್ವರವರು ಮತ್ತು ಪುತ್ತೂರು ತಾಲೂಕು ಕಬಡ್ಡಿ ಸಂಸ್ಥೆ ವಹಿಸಿಕೊಂಡಿದೆ. ಕೋಲಾರದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದ ಪ್ರಯಾಣ ವೆಚ್ಚ, ಸಮವಸ್ತ್ರ, ಊಟೋಪಚಾರದ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾ ಸಂಸ್ಥೆಯಿಂದ ಮಾಡಲಾಗಿದೆ ಎಂದು ಹೇಳಿದರು.

ಶಾಸಕರ ಗಮನಕ್ಕೆ ಬಾರದೆ ಇರುವುದು ವಿಷಾದನೀಯ: ಇತ್ತೀಚೆಗೆ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾಟದಲ್ಲಿ ಬಾಲಕರ ತಂಡ ಪ್ರಥಮ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಕಬಡ್ಡಿ ಸಂಸ್ಥೆ ರಾಜ್ಯ ಮಟ್ಟದ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಭಾಗವಹಿಸಿ ಜ್ಯೂನಿಯರ್ ಬಾಲಕಿಯರು ಸತತ ೫ ವರ್ಷ ಪ್ರಥಮ ಸ್ಥಾನವನ್ನು ಮತ್ತು ಒಮ್ಮೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜ್ಯೂನಿಯರ್ ಬಾಲಕರ ತಂಡ 2 ಬಾರಿ ಪ್ರಥಮ ಸ್ಥಾನವನ್ನು ಮತ್ತು 2 ಬಾರಿ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಸಾಧನೆಗಳು ಶಾಸಕರ ಗಮನಕ್ಕೆ ಬಾರದೆ ಇರುವುದು ವಿಷಾದನೀಯ ಎಂದು ಹೇಳಿದ ರಾಕೇಶ್ ಮಲ್ಲಿ ಅವರು ನಮ್ಮ ಸಂಸ್ಥೆ ಪ್ರಾರಂಭಗೊಂಡು ಇಲ್ಲಿಯವರೆಗೆ ಪ್ರತಿ ವರ್ಷವು ಸಂಸ್ಥೆಯ ನಿಯಮಾವಳಿಯಂತೆ ಕಾರ್ಯಕಾರಿ ಸಮಿತಿಯ ಸಭೆಗಳನ್ನು ಮತ್ತು ವಾರ್ಷಿಕ ಮಹಾಸಭೆಯನ್ನು ಕ್ರಮಬದ್ಧವಾಗಿ ಮಾಡುತ್ತಾ ಬಂದಿದ್ದು, ರಾಜ್ಯ ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿವೆ ಎಂದರು.

ಕಬಡ್ಡಿ ಸಂಸ್ಥೆ ಬಲವಾಗಿ ಖಂಡಿಸುತ್ತದೆ-ಶಾಸಕರ ಬಗ್ಗೆ ಕ್ರಮ ಕೈಗೊಳ್ಳಲು ಸಭಾಧ್ಯಕ್ಷರಿಗೆ ವಿನಂತಿಸುತ್ತೇವೆ: ಜಿಲ್ಲಾ ಕಬಡ್ಡಿ ಸಂಸ್ಥೆಯ ಮಹಾಸಭೆಯ ನೋಟಿಸನ್ನು ಸಂಸ್ಥೆಯ ಅಜೀವ ಸದಸ್ಯರಿಗೆ 21 ದಿವಸಗಳ ಮುಂಚಿತವಾಗಿ ಕಳುಹಿಸಿ ದಿನ ಪತ್ರಿಕೆಯಲ್ಲಿ ಮಹಾಸಭೆಯ ಪ್ರಕಟಣೆಯನ್ನು ಪ್ರಕಟಿಸುವ ಮೂಲಕ ಎಲ್ಲಾ ಸದಸ್ಯರುಗಳಿಗೆ ಮಾಹಿತಿ ತಲುಪಿಸುವ ಪ್ರಯತ್ನವನ್ನು ಸಂಸ್ಥೆ ಪ್ರತಿ ವರ್ಷವು ಮಾಡುತ್ತಾ ಬಂದಿದೆ. ಮಹಾಸಭೆಗೆ ಅಡಚಣೆ ಉಂಟು ಮಾಡಲು ಅದೇ ದಿವಸ ದಿನಪತ್ರಿಕೆಯಲ್ಲಿ ಮಹಾಸಭೆ ರದ್ದಾಗಿದೆ ಎಂದು ಪ್ರಕಟಣೆ ನೀಡುವ ಮೂಲಕ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ ಮಹಾಸಭೆಗೆ ಸದಸ್ಯರು ಭಾಗವಹಿಸದಂತೆ ಮಾಡಿದ್ದಾರೆ. ಆದರೆ ಮಹಾಸಭೆಯ ಯಶಸ್ವಿಯಾಗಿ ನಡೆದು ಹೊಸ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಎರಡು ವರ್ಷ ಮಹಾಮಾರಿ ಕೊರೊನಾ ಇದ್ದುದರಿಂದ ಮಹಾಸಭೆಯನ್ನು ಮಾಡಲಾಗಲಿಲ್ಲ. ಪ್ರತಿ ವರ್ಷವು ಲೆಕ್ಕ ಪರಿಶೋಧಕರಲ್ಲಿ ಲೆಕ್ಕ ಪತ್ರಗಳನ್ನು ಮಾಡಿಸಿ ಆಡಿಟ್ ರಿಪೋರ್ಟನ್ನು ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದು ಜಿಲ್ಲಾ ಸಹಕಾರ ಸಂಘಗಳ ಡೆಪ್ಯೂಟಿ ರಿಜಿಸ್ಟರ್ ಕಛೇರಿಯಲ್ಲಿ ನವೀಕರಣವನ್ನು ಮಾಡಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದುಕೊಂಡಿವೆ. ನಮ್ಮ ಕಬಡ್ಡಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಂಗಣವನ್ನು ನಿರ್ಮಿಸಲು ಪ್ರಯತ್ನಿಸಿ ಹಲವಾರು ಕಬಡ್ಡಿ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆ ಅತ್ಯಂತ ಕ್ರಿಯಾಶೀಲವಾಗಿದೆ. ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ಸರಕಾರದಿಂದ ಅಥವಾ ಯುವಜನ ಸೇವಾ ಇಲಾಖೆಯಿಂದ ಯಾವುದೇ ಅನುದಾನ ಪಡೆಯದೇ ಸಂಸ್ಥೆಯ ಪದಾಧಿಕಾರಿಗಳೇ ಮತ್ತು ಸ್ಥಳೀಯ ಕ್ರೀಡಾಪ್ರೇಮಿಗಳಿಂದ ಆರ್ಥಿಕ ನೆರವನ್ನು ಪಡೆದುಕೊಂಡು ಕಬಡ್ಡಿ ಕ್ರೀಡೆಯನ್ನು ವ್ಯವಸ್ಥಿತವಾಗಿ ಬೆಳೆಸುವ ನಮ್ಮ ಸಂಸ್ಥೆಯ ಬಗ್ಗೆ ನಮ್ಮ ಜಿಲ್ಲೆಯ ಶಾಸಕರೊಬ್ಬರು ಇಲ್ಲದ ಸಲ್ಲದ ಆರೋಪವನ್ನು ಮಾಡಿ ನಮ್ಮ ಕಬಡ್ಡಿ ಸಂಸ್ಥೆಗೆ ಚ್ಯುತಿ ಬರುವಂತೆ ಮಾಡಿರುವುದು ವಿಷಾದನೀಯವಾಗಿದೆ. ಈ ಘಟನೆಯನ್ನು ನಮ್ಮ ಕಬಡ್ಡಿ ಸಂಸ್ಥೆ ಒಮ್ಮತದಿಂದ ಬಲವಾಗಿ ಖಂಡಿಸುತ್ತದೆ. ಹಾಗೇ ತಪ್ಪು ಮಾಹಿತಿಯನ್ನು ಸದನಕ್ಕೆ ನೀಡಿದ ಶಾಸಕರ ಬಗ್ಗೆ ಸಭಾಧ್ಯಕ್ಷರು ಮತ್ತು ಸಚಿವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿ ವಿನಂತಿಸುತ್ತೇವೆ ಎಂದು ರಾಕೇಶ್ ಮಲ್ಲಿ ಹೇಳಿದರು.


ಕಬಡ್ಡಿ ಸಂಸ್ಥೆಯ ಸಾಧನೆ ವಿವರಿಸಿದ ರಾಕೇಶ್ ಮಲ್ಲಿ: ದ.ಕ. ಜಿಲ್ಲಾ ಅಮೆಚ್ಚೂರು ಕಬಡ್ಡಿ ಸಂಸ್ಥೆ ೨೯.೧೦.೨೦೦೪ರಂದು ಅಸ್ತಿತ್ವಕ್ಕೆ ಬಂದು ಸುಮಾರು ೨ ದಶಕಗಳ ಕಾಲದಲ್ಲಿ ಅನೇಕ ಕಬಡ್ಡಿ ಕ್ರೀಡಾ ಪಟುಗಳನ್ನು ಜಿಲ್ಲೆಯಿಂದ ರಾಜ್ಯಕ್ಕೆ, ರಾಷ್ಟ್ರಕ್ಕೆ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದೆ. ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಅವರನ್ನು ಕಳುಹಿಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಗಿದೆ. ನಮ್ಮ ಸಂಸ್ಥೆ ಕ್ರೀಡಾ ಉzಶ ಇಟ್ಟುಕೊಂಡು ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉತ್ತಮ ತರಬೇತಿಯೊಂದಿಗೆ ಕಬಡ್ಡಿ ಕ್ರೀಡಾಪಟುಗಳ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರುಗಳ ಸಹಕಾರದೊಂದಿಗೆ ಕಬಡ್ಡಿ ಮ್ಯಾಟನ್ನು ಒದಗಿಸಿ ಆಧುನಿಕ ರೀತಿಯಲ್ಲಿ ತರಬೇತನ್ನು ನೀಡುವಲ್ಲಿ ಪ್ರಯತ್ನಿಸಿ ಅದರಲ್ಲಿ ಸಫಲತೆಪಡೆದಿದೆ ಎಂದು ಹೇಳಿದ ರಾಕೇಶ್ ಮಲ್ಲಿ ಅವರು ಗ್ರಾಮೀಣ ಮತ್ತು ನಗರ ಪ್ರದೇಶದ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲೆಯ ೮ ತಾಲೂಕುಗಳಲ್ಲಿ ತಾಲೂಕು ಕಬಡ್ಡಿ ಸಂಸ್ಥೆಗಳನ್ನು ಸ್ಥಾಪಿಸಿ ತಾಲೂಕು ತೀರ್ಪುಗಾರರ ಮಂಡಳಿಯನ್ನು ವ್ಯವಸ್ಥಿತವಾಗಿ ರಚಿಸಿ ಕಾರ್ಯ ನಿರ್ವಹಿಸುತ್ತಿದೆ. ಈ ತರಹದ ವ್ಯವಸ್ಥೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೇ ಇಲ್ಲ. ನಮ್ಮ ಜಿಲ್ಲೆಯಿಂದ ಸುಮಾರು ೨೦ ಮಂದಿ ರಾಷ್ಟ್ರೀಯ ತೀರ್ಪುಗಾರರು ಇದ್ದು ಸುಮಾರು ೨೦೦ ಮಂದಿ ರಾಜ್ಯ ತೀರ್ಪುಗಾರರು ಇರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಸಂಸ್ಥೆಯ ನಿರಂತರ ಪ್ರಯತ್ನದ ಫಲವಾಗಿ ಉರ್ವ ಮೈದಾನದ ಹತ್ತಿರ ಸಂಸದರ, ಶಾಸಕರುಗಳ ಹಾಗೂ ಮಾಜಿ ಶಾಸಕರ ಸಹಕಾರದಿಂದ ಮತ್ತು ಸ್ಮಾರ್ಟ್ ಸಿಟಿಯಿಂದ ಸುಮಾರು ೩೫ ಕೋಟಿ ರೂಪಾಯಿಗಳ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಂಗಣ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಮುಕ್ತಾಯದ ಹಂತಕ್ಕೆ ತಲುಪಿರುವುದು ನಮ್ಮ ಕಬಡ್ಡಿ ಸಂಸ್ಥೆಯ ಶ್ರಮಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ನಮ್ಮ ಕಬಡ್ಡಿ ಸಂಸ್ಥೆ ಪ್ರತಿ ವರ್ಷ ಸಬ್‌ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್, ಬಾಲಕ/ಬಾಲಕಿಯರಿಗೆ ಕಬಡ್ಡಿ ಪಂದ್ಯಾಟವನ್ನು ಏರ್ಪಡಿಸಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿ ತರಬೇತಿ ನೀಡಿ ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟಗಳಿಗೆ ಕಳುಹಿಸಿ ಪ್ರಶಸ್ತಿಯನ್ನು ಪಡೆಯುವಲ್ಲಿ ದ.ಕ. ಜಿಲ್ಲೆ ಕಬಡ್ಡಿ ಸಂಸ್ಥೆ ಯಶಸ್ಸನ್ನು ಪಡೆದುಕೊಂಡಿದೆ. ನಮ್ಮ ಕಬಡ್ಡಿ ಸಂಸ್ಥೆಯ ವತಿಯಿಂದ ಮಮತಾ ಪೂಜಾರಿ, ಉದಯ ಚೌಟ, ರೋಸ್‌ಮೇರಿ ಪ್ರೆಸಿಲ್ಲಾ, ರಕ್ಷಿತ್ ಪೂಜಾರಿ, ನವ್ಯಶ್ರೀ ಮತ್ತು ಸುಕೇಶ್ ಹೆಗ್ಡೆ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಶಾಂತ್ ರೈ, ಸುಕೇಶ್ ಹೆಗ್ಡೆ, ಸಚಿನ್ ಸುವರ್ಣ, ರಕ್ಷಿತ್ ಪೂಜಾರಿ, ರತನ್, ಮಿಥುನ್ ಗೌಡ, ಮಿಥಿನ್, ಪ್ರತಾಪ್, ಗಗನ್ ಗೌಡ, ಸುಶಿಲ್ ಕುಮಾರ್, ಅಫ್ರಿದ್, ಸುಶಾಂತ್ ಮತ್ತು ಶಶಾಂಕ್‌ರವರುಗಳು ನಮ್ಮ ಸಂಸ್ಥೆಯ ಮುಖಾಂತರ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಮಿಂಚಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಮಾನಸ, ಹರಿಣಿ, ಹರಿಣಿ ಗೌಡ, ವನಿತಾ ರಂಜಿತಾ, ಸುಶ್ಮಿತಾ, ಧನಲಕ್ಷ್ಮಿ, ಆತ್ಮೀಯ, ರಾಜಶ್ರೀ, ಮುತ್ತವ್ವ, ಸೌಮ್ಯ ರಾಷ್ಟ್ರ ಮಟ್ಟದ ಪಂದ್ಯಾಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ವಿವರಿಸಿದ ರಾಕೇಶ್ ಮಲ್ಲಿ ಅವರು ನಮ್ಮ ಜಿಲ್ಲೆಯ ಅನೇಕ ಕ್ರೀಡಾಪಟುಗಳು ವಿವಿಧ ಪ್ರಶಸ್ತಿ ಗಳಿಸಿ ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು. ಮಮತಾ ಪೂಜಾರಿ ಅರ್ಜುನ ಪ್ರಶಸ್ತಿ, ದಿವಂಗತ ಉದಯ ಚೌಟ, ಪ್ರಶಾಂತ್ ರೈ ಮತ್ತು ಸುಕೇಶ್ ಹೆಗ್ಡೆ ಏಕಲವ್ಯ ಪ್ರಶಸ್ತಿ, ಸೌಮ್ಯ, ಸುಮಿತ ಮತ್ತು ನವ್ಯಶ್ರೀ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಮತ್ತು ವನಿತಾ ಗೌಡ ಅವರು ರಾಜ್ಯ ಒಲಂಪಿಕ್ ಪ್ರಶಸ್ತಿ ವಿಜೇತರಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಸಂಸ್ಥೆಯ ಬಗ್ಗೆ ಶಾಸಕ ಹರೀಶ್ ಪೂಂಜ ಸುಳ್ಳು ಆರೋಪ ಮಾಡಿರುವುದು ಖೇದಕರವಾಗಿದೆ ಎಂದು ರಾಕೇಶ್ ಮಲ್ಲಿ ಹೇಳಿದರು. ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳಾದ ಅಮರನಾಥ ರೈ, ದಿನಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಮೋಹಿತ್ ಸುವರ್ಣ, ಚಂದ್ರಶೇಖರ್ ಮತ್ತು ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಪೂಂಜರಿಗೆ ತಾಕತ್ತಿದ್ದರೆ ಬೆಳ್ತಂಗಡಿಯಲ್ಲಿ ಸ್ಟೇಡಿಯಂ ಮಾಡಿಸಲಿ-4 ಪಂದ್ಯಾಟ ನಡೆಸಲಿ: ರಾಕೇಶ್ ಮಲ್ಲಿ: ಶಾಸಕ ಹರೀಶ್ ಪೂಂಜರಿಗೆ ತಾಕತ್ತು ಇದ್ದರೆ ಬೆಳ್ತಂಗಡಿಯಲ್ಲಿ ಸ್ಟೇಡಿಯಂ ಮಾಡಿಸಲಿ. ನಾಲ್ಕು ಪಂದ್ಯಾಟ ನಡೆಸಲಿ ಎಂದು ಸವಾಲು ಹಾಕಿರುವ ರಾಕೇಶ್ ಮಲ್ಲಿ ಅವರು ಅವರz ಸರಕಾರ ಇರುವಾಗ ಕಬಡ್ಡಿ ಆಟಗಾರರಿಗೆ ಉದ್ಯೋಗ ಕೊಡಿಸುವುದನ್ನಾದರೂ ಮಾಡಿಸಬೇಕಿತ್ತು. ಅದು ಬಿಟ್ಟು ಏನೇನೋ ಮಾತನಾಡುವುದಲ್ಲ ಎಂದು ಹೇಳಿದ್ದಾರೆ.

ಪೂಂಜರು ಹೇಳಿದ್ದು..
ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ದಕ್ಷಿಣ ಕನ್ನಡ ಕಬ್ಬಡಿ ಅಸೋಸಿಯೇಷನ್ ಸಂಬಂಧಪಟ್ಟಂತೆ ಅಲ್ಲಿಯ ಸದಸ್ಯರು ಒಂದು ದೂರನ್ನು ಕೋ-ಓಪರೇಟಿವ್ ರಿಜಿಸ್ಟ್ರಾರ್‌ಗೆ ಕೊಡುತ್ತಾರೆ. ಕೋ-ಓಪರೇಟಿವ್ ರಿಜಿಸ್ಟ್ರಾರ್ ಮೂಲಕ ವಿಚಾರಣೆ ವರದಿಗೆ ಆದೇಶ ಮಾಡುತ್ತಾರೆ. ವಿಚಾರಣೆ ಆದೇಶ ನಂತರ ವರದಿಯ ಪ್ರಕಾರ ಅಲ್ಲಿಯ ಸಿ.ಡಿ.ಓ ಒಬ್ಬರಿಗೆ ವರದಿ ಮಾಡುತ್ತಾರೆ. ವರದಿಯಲ್ಲಿ ಕಾರ್ಯಕಾರಿ ಸಮಿತಿಯ ಚುನಾವಣೆ ಆಡಳಿತ ಮಂಡಳಿಯ ಆಯ್ಕೆಯ ಕಾನೂನು ಬಾಹಿರ ಎಂದು ವರದಿ ಮಾಡುತ್ತಾರೆ. ನಾಲ್ಕು ವರ್ಷ ಚುನಾವಣೆ ನಡೆಸದೆ ಅಧಿಕಾರ ಮುಂದುವರೆಸಿದ್ದಾರೆ ಎಂದು ವರದಿ ಮಾಡುತ್ತಾರೆ. ಅನರ್ಹ ಸದಸ್ಯರನ್ನು ಸದಸ್ಯರಾಗಿ ಇಟ್ಟುಕೊಂಡಿದ್ದಾರೆ ಎಂದು ವರದಿ ಮಾಡುತ್ತಾರೆ. ಸ್ಪೋಟ್ಸ್ ಕೋಡ್ ಜಾರಿಯಲ್ಲಿ ಇಲ್ಲ ಎಂದು ವರದಿ ಮಾಡುತ್ತಾರೆ. ಅಜೀವ ಸದಸ್ಯರ ಪಟ್ಟಿ ನೀಡದೆ ಇರುತ್ತಾರೆ. ವಾರ್ಷಿಕ ಸಭೆಯ ಅಯ್ಯವ್ಯಯವನ್ನು ನಡೆಸಿ ಮಾಡಿರುವುದಿಲ್ಲ ಎಂದು ವರದಿ ಮಾಡುತ್ತಾರೆ. ನಿಯಮಾನುಸಾರ ವಿಳಾಸವನ್ನು ತಿದ್ದುಪಡಿ ಮಾಡಿ ಅಲ್ಲಿಯ ಕಾರ್ಯದರ್ಶಿಯ ಮನೆಯನ್ನು ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ದಕ್ಷಿಣ ಕನ್ನಡ ಕಛೇರಿ ಎಂದು ತೋರಿಸಿರುವುದನ್ನು ಗಮನಕ್ಕೆ ತರುತ್ತಾರೆ. ಕೊನೆಗೆ ವಿಚಾರಣಾಧಿಕಾರಿಗಳು ಒಂದು ವರದಿಯಲ್ಲಿ ತಿಳಿಸುತ್ತಾರೆ ದಕ್ಷಿಣ ಕನ್ನಡ ಅಮೆಚೂರ್ ಅಸೋಸಿಯೇಶನ್‌ಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎನ್ನುವಂತದನ್ನ ನಿಮ್ಮ ವಿಚಾರಣಾಧಿಕಾರಿ ಮಾಡಿದ ವರದಿಯು ನಿಮ್ಮ ಇಲಾಖೆಯ ಮೂಲಕ ತಮ್ಮ ಕಛೇರಿಯಲ್ಲಿ ಬಾಕಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಅಮೆಚೂರ್ ಅಸೋಸಿಯೇಶನ್‌ಗೆ ಆಡಳಿತ ಅಧಿಕಾರಿ ನೇಮಕ ಮಾಡಬೇಕು. ಕಬಡ್ಡಿ ಆಟಗಾರರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಕಬಡ್ಡಿ ಆಟಗಾರರಿಗೆ ಪೂರಕವಾಗುವ ದೃಷ್ಠಿಯಲ್ಲಿ ಇದಕ್ಕೆ ಕ್ರೀಡೆ ಇಲಾಖೆಯನ್ನು ಜೋಡಣೆ ಮಾಡವ ಅವಶ್ಯಕತೆ ಇದೆ. ಕಬಡ್ಡಿ ಆಟಗಾರರ ಆಯ್ಕೆಯಲ್ಲಿ ವಂಚನೆ ನಡೆಯುತ್ತಿದೆ. ಕಬಡ್ಡಿ ಆಟಗಾರರಿಗೆ ಉದ್ಯೋಗದಲ್ಲಿ ವಂಚನೆಯಾಗುತ್ತಿದೆ ಎಂದು ಹರೀಶ್ ಪೂಂಜ ಹೇಳಿದ್ದರು.

LEAVE A REPLY

Please enter your comment!
Please enter your name here