ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ. 24 ರಂದು ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಕೆಳ ಅಂತಸ್ತಿನ ಸಭಾಭವನದಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭಿಸಲಾಯಿತು.
ವಿದ್ಯಾರ್ಥಿಗಳು ಹಾಡು ನೃತ್ಯ ನಾಟಕದ ಮೂಲಕ ಕ್ರಿಸ್ ಮಸ್ ಹಬ್ಬದ ಮಹತ್ವವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂ.ಸ್ವಾ. ಸ್ಟ್ಯಾನಿ ಗೋವಿಯಸ್ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನಾವು ನಮ್ಮ ಜೀವನದಲ್ಲಿ ಎಲ್ಲವನ್ನೂ ಪ್ರೀತಿಸುವ, ಗೌರವಿಸುವ ಗುಣವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿ, ಮಕ್ಕಳಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಕೋರಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗರ್ಡಾಡಿ ಚರ್ಚ್ ನ ಧರ್ಮ ಗುರುಗಳಾದ ವಂ. ಸ್ವಾ. ಆರ್ಥರ್ ಪ್ರಶಾಂತ್ ಮೀನೇಜಸ್ ಆಗಮಿಸಿದ್ದರು. ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಕ್ರಿಸ್ ಮಸ್ ಹಬ್ಬ ನಮಗೆಲ್ಲರಿಗೂ ಶಾಂತಿ ಸಮಾಧಾನವನ್ನು ತರಲಿ ಎಂದು ಹೇಳಿ, ಮಕ್ಕಳಿಗೆ ಹಬ್ಬದ ಶುಭಾಶಯವನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವಂ. ಸ್ವಾ. ದೀಪಕ್ ಲಿಯೊ ಡೇಸ, ಪುಂಜಾಲಕಟ್ಟೆ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಚೇತನ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾಲ್ಸ್ ನ್ಯೂನಸ್, ಗಾಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಹೆಲೆನ್ ಮೋನಿಕ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಿಕ್ಷಕ- ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ಲರಿಗೂ ಸಿಹಿ ತಿಂಡಿಗಳನ್ನು ಹಂಚಲಾಯಿತು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗ್ಲೆನ್ಸನ್ ಮತ್ತು ಸನ ನಿರೂಪಿಸಿ, ನಿಧಿಶ್ ಶೆಟ್ಟಿ ಸ್ವಾಗತಿಸಿ, ಮಹಮ್ಮದ್ ಅನೀಕ್ ರವರು ಧನ್ಯವಾದವನ್ನು ಸಮರ್ಪಿಸಿದರು.