ಮುಂಡಾಜೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಘಟಕ ಬೆಳ್ತಂಗಡಿ, ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾಸಂಘದ ಆಶ್ರಯದಲ್ಲಿ ಕವಿ ವಿಶ್ರಾಂತ ಶಿಕ್ಷಕ ಶಂಕರ್ ಎನ್.ತಾಮನ್ಕರ್ ಮುಂಡಾಜೆ ಇವರ ಸೀತಾ ರಾಮಾಯಣ ಮತ್ತು ಮಕರಂದ ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮುಂಡಾಜೆಯ ‘ಪರಂಪರಾ’ದಲ್ಲಿ ಡಿ. 8ರಂದು ಜರಗಿತು.
ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ “ಪ್ರಸ್ತುತ ದಿನಗಳಲ್ಲಿ ನಿರಂತರವಾಗಿ ಪುಸ್ತಕಗಳು ಬಿಡುಗಡೆಗೊಳ್ಳುತ್ತಿರುವುದು ಶ್ಲಾಘನೀಯ. ಇದು ಬರಹಗಾರರು ಮತ್ತು ಓದುಗರು ಸಂಖ್ಯೆ ಕಡಿಮೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಕನ್ನಡದ ರಥವನ್ನು ಎಳೆಯಬೇಕಾದವರು ವಿದ್ಯಾರ್ಥಿಗಳು. ಈ ನಿಟ್ಟಿನಲ್ಲಿ ಕಸಾಪ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ ಮಾತನಾಡಿ “ಕೃತಿಗಳು ಸಹೃದಯಿ ಓದುಗರಿಗೆ ಸಿಕ್ಕಾಗ ಅವುಗಳ ಮೌಲ್ಯ ಹೆಚ್ಚುತ್ತದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಶಿಕ್ಷಣವನ್ನು ಹೆಚ್ಚು ಪ್ರಚಾರ ಪಡಿಸುವುದು ಯಕ್ಷಗಾನ. ನಮ್ಮ ಸಂಸ್ಕೃತಿಯನ್ನು ರೂಪಿಸಲು ಯಕ್ಷಗಾನ ಬಹುದೊಡ್ಡ ಕೊಡುಗೆ ನೀಡಿದೆ” ಎಂದು ಹೇಳಿದರು.
ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಗಣಪತಿ ಭಟ್ ಕುಳಮರ್ವ ಕೃತಿ ಮತ್ತು ಕೃತಿಕಾರರ ಪರಿಚಯ ನೀಡಿದರು. ಸ್ವಾತಿ ಎಸ್.ತಾಮನ್ಕರ್ ಉಪಸ್ಥಿತರಿದ್ದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ಸ್ವಾಗತಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಎನ್. ತಾಮನ್ಕರ್ ವಂದಿಸಿದರು.
ಸಾಧಕರಿಗೆ ಸನ್ಮಾನ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಸ್ಥಾಪಕ ನಾಮದೇವ ರಾವ್, ಹಿರಿಯ ಮುತ್ಸದ್ದಿ ಅಡೂರು ವೆಂಕಟ್ರಾಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಜಯರಾಮ ಕೆ., ಬಡಗುತಿಟ್ಟಿನ ಖ್ಯಾತ ಮದ್ದಲೆ ಚೆಂಡೆ ವಾದಕ ಅನಂತ ಪದ್ಮನಾಭ ಫಾಟಕ್, ವಿದುಷಿ ಅನಸೂಯ ಫಾಟಕ್, ತೆಂಕುತಿಟ್ಟಿನ ಖ್ಯಾತ ಮದ್ದಲೆ ಚೆಂಡೆವಾದಕ ಶಿತಿಕಂಠ ಶೆಂಡ್ಯೆ, ಕಸೂತಿ ವಿನ್ಯಾಸಗಾರ ಎ.ಆರ್.ಗೋಖಲೆ, ಹವ್ಯಾಸಿ ರಂಗ ಕಲಾವಿದ ವೆಂಕಟಗಿರಿ ಹೊಳ್ಳ ಹಾಗೂ ಸಮಾಜಸೇವಕ ಸಚಿನ್ ಭಿಡೆಯವರನ್ನು ಸನ್ಮಾನಿಸಲಾಯಿತು.