ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 30 ರಂದು ವಾರ್ಷಿಕ ಕ್ರೀಡಾಕೂಟವು ನೆರವೇರಿತು. ಈ ಕ್ರೀಡಾಕೂಟವನ್ನು ಪ್ರಾರ್ಥನಾ ಗೀತೆಯನ್ನು ಹಾಡಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಶಾಲಾ ಸಂಚಾಲಕ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿಲ್ವೋನಿಯಾ ಪಾಯಸ್ ಧ್ವಜಾರೋಹಣವನ್ನು ನೆರವೇರಿಸಿದರು.
ವಿದ್ಯಾರ್ಥಿಗಳು ಪಥಸಂಚಲನವನ್ನು ಮಾಡಿ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯು ಮಕ್ಕಳ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿ, ಮಕ್ಕಳಿಗೆ ಶುಭ ಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಲ್ವೋನಿಯಾ ಪಾಯಸ್ ಆಗಮಿಸಿದ್ದರು.
ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಎಲ್ಲರಿಗೂ ಅಂಥ ಅವಕಾಶಗಳು ಸಿಗುವುದಿಲ್ಲ ಎಂದು ಹೇಳಿ, ಮಕ್ಕಳಿಗೆ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವಂ|ಸ್ವಾ| ದೀಪಕ್ ಲಿಯೋ ಡೇಸ, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಸ್, ಪುಂಜಾಲಕಟ್ಟೆ ವಲಯದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಚೇತನ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಡಿಸೋಜ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್, ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಮೇರಿ ಡಿಸೋಜಾ, ಗಾರ್ಡಿಯನ್ ಏಂಜಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಹೆಲೆನ್ ಮೋನಿಕ ಲೋಬೊ, ಶಿಕ್ಷಕ -ರಕ್ಷಕ ಸಂಘದ ಸದಸ್ಯೆ ಶ್ವೇತ, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸಹಶಿಕ್ಷಕ ಜೆರಾಲ್ಡ್ ಡಿಸೋಜಾ ಮತ್ತು ಶಿಕ್ಷಕಿ ರೀಮಾ ವೆರೋನ ನಿರೂಪಿಸಿ, ಶಿಕ್ಷಕಿ ತಸ್ರೀನ ಸ್ವಾಗತಿಸಿ, ಮಲ್ಲಿಕಾ ಧನ್ಯವಾದವನ್ನು ಸಮರ್ಪಿಸಿದರು.