ಬೆಳ್ತಂಗಡಿ: ಸ್ವಾತಂತ್ರ್ಯದ ಸಂದರ್ಭದಲ್ಲಿ ಈ ದೇಶದಿಂದ ವಿಭಜನೆಗೊಂಡಂತಹ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವಂತಹ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿಯನ್ನು ದೃಶ್ಯ ಮಾಧ್ಯಮದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ನಾವು ನೋಡುತ್ತಾ ಬರುತ್ತಿದ್ದೇವೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾ ದೇಶದಲ್ಲಿ ಜಯಗಳಿಸಿರುವಂತಹ ಶೇಖ್ ಹಸೀನಾರವರ ಸರ್ಕಾರವನ್ನು ಪದಚ್ಯುತಗೊಳಿಸಬೇಕು ಎನ್ನುವಂತಹ ಷಡ್ಯಂತ್ರದ ಮೂಲಕ ಅಲ್ಲಿ ನಡೆದಿರುವಂತಹ ಹಿಂಸಾತ್ಮಕ ಕೃತ್ಯಗಳಲ್ಲಿ ನಿರಂತರವಾಗಿ ಹಿಂದೂ ಸಮಾಜದ ಮೇಲೆ ದಾಳಿಯನ್ನು ಮಾಡುತ್ತಾ ಬರುತ್ತಿದ್ದು, ಸುಮಾರು 600ಕ್ಕಿಂತಲೂ ಹೆಚ್ಚಿನ ಹಿಂದೂಗಳನ್ನೂ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಗಳು ಬಾಂಗ್ಲಾದಲ್ಲಿ ನಡೆದಿರುವಂತಹದ್ದು ಮಾಧ್ಯಮಗಳ ಮೂಲಕ ನಾವು ನೋಡಿದ್ದೇವೆ.
ಅದರ ಅತಿರೇಕ ವರ್ತನೆಯು ಚಿನ್ಮಯಂ ಸ್ವಾಮೀಜಿಯವರನ್ನು ವಿನಾ ಕಾರಣ ಸುಳ್ಳು ಕೇಸ್ ಹಾಕಿ ಅವರನ್ನು ಅರೆಸ್ಟ್ ಮಾಡುವ ಮೂಲಕ ಹಿಂದೂಗಳನ್ನು ಯಾವ ರೀತಿಯಲ್ಲಿ ಬಾಂಗ್ಲಾದಲ್ಲಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕಾಣುತ್ತಿದ್ದೇವೆ. ಅವರ ಸಹಕಾರಕ್ಕೆ ಬಂದಂತಹ ಸ್ವಾಮೀಜಿಯವರನ್ನು ಕೂಡ ಬಂಧಿಸಿದ್ದಾರೆ. ಹಿಂದೂಗಳಿಗಾಗಿ ಪ್ರತಿಭಟನೆಯನ್ನು ಮಾಡಿದ್ರೆ ವಿನಾ ಕಾರಣ ಗೋಲಿಬಾರ್, ಲಾಠಿ ಚಾರ್ಚ್ ಮಾಡುವಂತಹ ಪ್ರವೃತ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ, ಭಾರತದಲ್ಲಿರುವಂತಹ ಹಿಂದೂಗಳು ಬಾಂಗ್ಲಾದ ಹಿಂದೂಗಳಿಗೆ ಶಕ್ತಿಯನ್ನು ತುಂಬುವಂತಹ ನಿಟ್ಟಿನಲ್ಲಿ, ಹಿಂದೂ ಹಿತ ರಕ್ಷಣಾ ಸಮಿತಿಯಿಂದ, ಮಂಗಳೂರಿನಲ್ಲಿ ಡಿ. 4 ರಂದು ಬೆಳಗ್ಗೆ 10 ಗಂಟೆಗೆ ಜ್ಯೋತಿ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಹಾಗೂ ಹಿಂದೂ ಹಿತ ರಕ್ಷಣಾ ಸಮಿತಿ ಕರೆ ಕೊಟ್ಟಂತಹ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ಹರೀಶ್ ಪೂಂಜರವರು ಹೇಳಿದರು.
ಡಿ. 2 ರಂದು ಬೆಳ್ತಂಗಡಿ ಪ್ರವಾಸ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂ ಹಿತ ರಕ್ಷಣಾ ಸಮಿತಿ ಕರೆ ಕೊಟ್ಟಂತಹ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ತಾಲೂಕು ಘಟಕ ಸಂಪೂರ್ಣ ಸಹಕಾರದ ಜೊತೆಗೆ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಹೋರಾಟದಲ್ಲಿ ಭಾಗವಹಿಸುವ ಮೂಲಕ ಮಾಡುತ್ತಿದ್ದೇವೆ. ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ತಂಗಡಿಯಿಂದ ಭಾಗವಹಿಸುತ್ತೇವೆ.
ಅನೇಕ ಸಾದು ಸಂತರುಗಳು, ಸ್ವಾಮೀಜಿಗಳು, ಹಿಂದೂ ಪರವಾಗಿ ಯೋಚನೆ ಮಾಡುವಂತಹ ಎಲ್ಲರೂ ಸಾಮೂಹಿಕವಾಗಿ ರಸ್ತೆಗಿಳಿದು ಬಾಂಗ್ಲಾದ ಹಿಂದೂಗಳ ಪರವಾಗಿ ಮತ್ತು ಅಲ್ಲಿಯ ಸರ್ಕಾರ ತಕ್ಷಣ ಹಿಂದೂಗಳ ರಕ್ಷಣೆಗೆ ಬರಬೇಕು ಮತ್ತು ಜಾಗತೀಕವಾಗಿರುವಂತಹ ವಿಶ್ವಸಂಸ್ಥೆ ಎಲ್ಲರೂ ಸಹ ಬಾಂಗ್ಲಾದಲ್ಲಿ ಇರುವಂತಹ ಹಿಂದೂಗಳ ರಕ್ಷಣೆಯ ದೃಷ್ಟಿಯಿಂದ ಯೋಜನೆ ಮಾಡಬೇಕು ಎಂಬ ದೃಷ್ಟಿಯಿಂದ ಭಾರತದ ಹಿಂದೂಗಳು ಬಾಂಗ್ಲಾದ ಹಿಂದೂಗಳಿಗೆ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡುವಂತಹ ಹೋರಾಟ ಇದಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.