ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ಭ್ರಷ್ಟಾಚಾರ-ದೂರಿನ ಹಿನ್ನೆಲೆ – ನ್ಯಾಯಮೂರ್ತಿ ನಾಗಮೋಹನ್‌ದಾಸ್ ದಿಢೀರ್ ಭೇಟಿ-ಪರಿಶೀಲನೆ – ಅಧಿಕಾರಿಗಳನ್ನು ಪ್ರಶ್ನಿಸಿ, ದಾಖಲೆ ಪರಿಶೀಲಿಸಿ ಮಾಹಿತಿ ಸಂಗ್ರಹ

0

ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರು ಬೆಳ್ತಂಗಡಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿಯ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಭ್ರಷ್ಟಾಚಾರ ನಡೆಸಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬೆಸ್ಟ್ ಫೌಂಡೇಶನ್ ಮುಖ್ಯಸ್ಥ ರಕ್ಷಿತ್ ಶಿವರಾಂ ಅವರು ಸರಕಾರಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೆ, ಬಿಜೆಪಿ ಸರಕಾರ ಆಡಳಿತ ನಡೆಸಿದ್ದ ೪ ವರ್ಷದ ಅವಧಿಯ ವೇಳೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಕಾಮಗಾರಿಗಳಲ್ಲಿ ಶೇ.೪೦ ಕಮಿಷನ್ ಪಡೆದಿರುವ ಆರೋಪಗಳ ಕುರಿತ ತನಿಖೆಗಾಗಿ ರಾಜ್ಯ ಕಾಂಗ್ರೆಸ್ ಸರಕಾರ ೨೦೨೩ರ ಆಗಸ್ಟ್ ೫ರಂದು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೂ ರಕ್ಷಿತ್ ಶಿವರಾಂ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬೆಳ್ತಂಗಡಿ ಪ್ರವಾಸಿ ಮಂದಿರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿದ ನ್ಯಾಯಮೂರ್ತಿ: ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಹೊಸಮನಿ ಬಂಕಪ್ಪ ಮತ್ತು ಇತರ ಇಂಜಿನಿಯರ್‌ಗಳೊಂದಿಗೆ ಮಾಹಿತಿ ಸಂಗ್ರಹಿಸಿದ ನಾಗಮೋಹನ್ ದಾಸ್ ಅವರು ರಕ್ಷಿತ್ ಶಿವರಾಂ ಅವರು ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿ ನೀಡಿರುವ ಅಂಶಗಳ ಬಗ್ಗೆ ಪ್ರಶ್ನಿಸಿದರು. ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬಂಟ್ವಾಳ, ಮೂಡಬಿದ್ರೆ ಸಹಿತ ಎಲ್ಲಿಯೂ ಇಷ್ಟು ದೊಡ್ಡ ಪ್ರವಾಸಿ ಮಂದಿರ ಇಲ್ಲ, ಬೆಳ್ತಂಗಡಿಯಲ್ಲಿ ಮಾತ್ರ ಇಷ್ಟು ದೊಡ್ಡ ಪ್ರವಾಸಿ ಮಂದಿರ ನಿರ್ಮಾಣ ಆಗಿರುವುದು ಏಕೆ ? ಎಂದು ನ್ಯಾಯಮೂರ್ತಿಗಳು ಅಧಿಕಾರಿಗಳನ್ನು ಈ ವೇಳೆ ಪ್ರಶ್ನಿಸಿದರು ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ ನ್ಯಾಯಮೂರ್ತಿಯವರು ಪ್ರವಾಸಿ ಮಂದಿರದ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಬೆಂಗಳೂರಿಗೆ ತೆರಳಿದ್ದಾರೆ. ಇನ್ನಷ್ಟು ಮಾಹಿತಿ ಸಂಗ್ರಹಿಸಿ ಅವರು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತು ಬಿಮಲ್ ಕಂಪನಿಯವರಿಂದ ಶಾಸಕ ಹರೀಶ್ ಪೂಂಜರವರೊಂದಿಗೆ ಸೇರಿ ಅವ್ಯವಹಾರ-ರಕ್ಷಿತ್ ಶಿವರಾಂ ದೂರು-ವಸ್ತು ನಿಷ್ಠ ವರದಿ ನೀಡಲು ಸೂಚನೆ: ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತು ಬಿಮಲ್ ಕಂಪನಿಯವರು ಶಾಸಕ ಹರೀಶ್ ಪೂಂಜರವರೊಂದಿಗೆ ಸೇರಿ ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಇಂಜಿನಿಯರ್‌ಗೆ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಪತ್ರ ಬರೆದು ವರದಿ ಕೇಳಿದ್ದಾರೆ.
ಮಂಗಳೂರು ವಿಭಾಗದ ಬೆಳ್ತಂಗಡಿ ಉಪವಿಭಾಗದ ವ್ಯಾಪ್ತಿಯ ಪ್ರವಾಸಿ ಮಂದಿರದ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಪ್ರಕರಣದಲ್ಲಿ ಬಾಗಿಯಾಗಿರುವ ಮುಖ್ಯ ಕಾರ್ಯಪಾಲಕ ಅಭಿಯಂತರರು ಲೋಕೋಯೋಗಿ ವಿಭಾಗ ಮಂಗಳೂರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಯೋಗಿ ಉಪವಿಭಾಗ ಬೆಳ್ತಂಗಡಿ ಮತ್ತು ಬಿಮಲ್ ಇನ್ಫ್ರಾ ಕನ್‌ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಮೂಡಬಿದ್ರೆ ಇವರೆಲ್ಲರೂ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರೊಂದಿಗೆ ಸೇರಿ ಮಾಡಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸಲ್ಲಿಸಿರುವ ದೂರಿನನ್ವಯ ಸದರಿ ಪ್ರಕರಣದ ಕುರಿತು ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಕೋರಿರುವ ಮೇರೆಗೆ ಲೋಕೋಪಯೋಗಿ ಇಲಾಖೆಯ ಸಚಿವರು ಸದರಿ ದೂರಿನ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುತ್ತಾರೆ. ಸದರಿ ದೂರಿನಲ್ಲಿನ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಕಾಮಗಾರಿ ನಡೆದ ಸ್ಥಳ ಪರಿವೀಕ್ಷಣೆ ಮಾಡಿ ಸದರಿ ಪ್ರಕರಣದ ಕುರಿತು ಸತ್ಯಾಸತ್ಯತೆಗಳನ್ನೊಳಗೊಂಡ ಒಂದು ವಸ್ತುನಿಷ್ಠ ವರದಿಯನ್ನು ಹಾಗೂ ಆರೋಪ ಸಾಬೀತಾದಲ್ಲಿ ಸದರಿ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಎಲ್ಲಾ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವ ಸಂಬಂಧ ಸೂಕ್ತ ಪ್ರಸ್ತಾವನೆಯೊಂದಿಗೆ ಪೂರಕ ದಾಖಲೆಗಳನ್ನು/ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿ ಮುರಳೀಧರ ಎಸ್. ತಳ್ಳಿಕೇರಿ ಅವರು ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿ ಕೇಳಿದ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್: ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಕುರಿತು ವಿಶೇಷಾ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮನವಿ ಮಾಡಿರುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿರುವ ಲೋಕೋಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಕಾರಿಯ ಬಗ್ಗೆ ತುರ್ತಾಗಿ ವರದಿ ನೀಡುವಂತೆ ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಕೋರಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯ ಬಗ್ಗೆ ನೀಡಿರುವ ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಸಚಿವರ ಸಮ್ಮುಖದಲ್ಲಿ ಚರ್ಚಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವುಗಳು ಅವಶ್ಯವಿರುವ ಮಾಹಿತಿಗಳನ್ನು ಕೂಡಲೇ ಕಛೇರಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಪತ್ರದ ಮೂಲಕ ಕೋರಿದ್ದಾರೆ. ರೂ.೪.೯೫ ಕೋಟಿಯ ಹಾಗೂ ರೂ. ೨.೦೦ ಕೋಟಿಯ ಅನುಮೋದಿತ ಅಂದಾಜು ಪಟ್ಟಿಯ ಪ್ರತಿ ಸಲ್ಲಿಸಬೇಕು, ಎರಡು ಪ್ಯಾಕೇಜ್ ಟೆಂಡರ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪಡೆದಿರುವ ಬಗ್ಗೆ ವಿವರವಾದ ವರದಿಯನ್ನು ನೀಡಬೇಕು, ಮೊದಲನೇ ಮತ್ತು ಎರಡನೇ ಅಂದಾಜು ಪಟ್ಟಿಯಲ್ಲಿ ಹಾಗೂ ನಿರ್ವಹಿಸಿರುವ ಅಂಶಗಳ ಮತ್ತು ಪರಿಮಾಣಗಳ ಕುರಿತು ಪುನರಾವರ್ತನೆಯಾಗಿಲ್ಲದ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರವರು ದೃಢೀಕರಣ ನೀಡಬೇಕು, ರೂ.೪.೭೬ ಕೋಟಿ ಕಾಮಗಾರಿಯ ಪ್ರಗತಿಯ ಬಗ್ಗೆ ವಿವರ ಮತ್ತು ಅಂತಿಮ ಬಿಲ್ಲಿನ ಪ್ರತಿ ಸಲ್ಲಿಸಬೇಕು, ರೂ.೨.೦೦ ಕೋಟಿ ಕಾಮಗಾರಿಯಲ್ಲಿ ಈಗಾಗಲೇ ರೂ.೧೪೯,೬೧,೬೦೨.೧೩ ಮೊತ್ತದ ಕಾಮಗಾರಿ ನಿರ್ವಹಿಸಲಾಗಿದೆ ಎಂದು ವರದಿ ಮಾಡಿದ್ದು ಈ ಬಗ್ಗೆ ಅಳತೆ ಪುಸ್ತಕದ ಪ್ರತಿ ಮತ್ತು ಬಿಲ್ಲುಗಳ ಪ್ರತಿಗಳನ್ನು ದೃಢೀಕರಿಸಿ ನೀಡಬೇಕು, ಪುರಾತತ್ವ ಇಲಾಖೆಯಿಂದ ಸದರಿ ಕಟ್ಟಡವನ್ನು ಕೆಡವಲು ಅನುಮತಿ ಪಡೆಯದ ಬಗ್ಗೆ ಸಮಜಾಯಿಷಿ ನೀಡಬೇಕು, ಎರಡೂ ಕಾಮಗಾರಿಗಳ ವಿವಿಧ ಹಂತದ ಮತ್ತು ಅಂಶಗಳ ಛಾಯಾಚಿತ್ರಗಳು (ನಿರ್ವಹಿಸಿರುವ ಮತ್ತು ಪೂರ್ಣಗೊಂಡಿರುವ) ಸದರಿ ಪ್ರಕರಣದ ಬಗ್ಗೆ ಸಚಿವರಿಗೆ ಮಾಹಿತಿ ನೀಡಬೇಕಾಗಿರುವುದರಿಂದ ವರದಿಯನ್ನು ತುರ್ತಾಗಿ ನೀಡಬೇಕು ಎಂದು ಲೋP ಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಕೋರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ನಾಗಮೋಹನ್‌ದಾಸ್ ಆಯೋಗಕ್ಕೆ ದೂರು ನೀಡಿದ್ದ ರಕ್ಷಿತ್ ಶಿವರಾಂ: ದಿನಾಂಕ ೧೩-೦೭-೨೦೨೪ರಂದು ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗದ ಕಾರ್ಯಪಾಲಕ ಅಭಿಯಂತರರು ಬಿಮಲ್ ಇನ್ಫ್ರಾ ಕನ್‌ಸ್ಟ್ರಕ್ಷನ್ಸ್ ಪ್ರೈವೆಟ್ ಲಿಮಿಟೆಡ್ ಮೂಡಬಿದ್ರೆ ಇವರಿಗೆ ಬೆಳ್ತಂಗಡಿಯ ಉzಶಿತ ಪ್ರವಾಸಿ ಮಂದಿರ ನಿರ್ಮಾಣದ ಕುರಿತು ನಾಲ್ಕು ಕೋಟಿ ಎಪ್ಪತ್ತಾರು ಲಕ್ಷದ ಐವತ್ತೊಂಬತ್ತು ಸಾವಿರದ ಇನ್ನೂರು ಮೊತ್ತಕ್ಕೆ ಪ್ರವಾಸಿ ಮಂದಿರದ ಕಾಮಗಾರಿಯನ್ನು ೧೮ ತಿಂಗಳಲ್ಲಿ ಮುಕ್ತಾಯಗೊಳಿಸುವಂತೆ ಕೆಲಸದ ಆದೇಶ ನೀಡಿರುತ್ತಾರೆ. ದಿನಾಂಕ ೩೧-೦೩-೨೦೨೨ರಂದು ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ ಇವರ ಪತ್ರ ಸಂಖ್ಯೆ ಲೋ.ಇ.ಮಂ.ವಿ. ಎ೨ಬೆಐಬಿ ತೆರವು ೨೦೨೧-೨೨ರಂತೆ ಬೆಳ್ತಂಗಡಿ ಉಪವಿಭಾಗದ ಬೆಳ್ತಂಗಡಿ ನಗರದಲ್ಲಿ ಹೊಸ ಪ್ರವಾಸಿ ಮಂದಿರದ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ೧೯೧೩ನೇ ಸಾಲಿನಲ್ಲಿ ನಿರ್ಮಾಣಗೊಂಡಿರುವ ಹಳೆಯ ಪ್ರವಾಸಿ ಮಂದಿರ ಕಟ್ಟಡವನ್ನು ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯದೇ ನೆಲಸಮಗೊಳಿಸುವ ಕಾಮಗಾರಿಯನ್ನು ಪ್ರಾರಂಭಿಸಿರುತ್ತಾರೆ. ಈ ಪತ್ರದ ಅನ್ವಯ ಇಷ್ಟು ದೊಡ್ಡ ವಿಸ್ತೀರ್ಣದ ಹಳೆಯ ಕಟ್ಟಡಕ್ಕೆ ಮೂಲ ಬೆಲೆ ತೊಂಬತ್ತೆರಡು ಸಾವಿರ ರೂಪಾಯಿ ಎಂದು ಯಾವುದೇ ಮಾನದಂಡ ಇಲ್ಲದೆ ನಿಗದಿಪಡಿಸಿರುತ್ತಾರೆ. ಕಟ್ಟಡ ಕೆಡವಿದ ನಂತರ ದೊರಕುವ ಸಾಮಾಗ್ರಗಳ ಮೌಲ್ಯ ಒಂದು ಲಕ್ಷದ ಅರುವತ್ತು ಸಾವಿರ ಎಂದು ಯಾವುದೇ ಮಾನದಂಡ ಇಲ್ಲದೆ ನಿಗದಿಪಡಿಸಿರುತ್ತಾರೆ. ಕಟ್ಟಡ ಕೆಡವಲು ತಗಲುವ ವೆಚ್ಚ ೯೦ ಸಾವಿರ ರೂಪಾಯಿಯನ್ನು ಅಂತಿಮ ರೀ ವಾಲ್ಯುವೇಶನ್ ಮೊತ್ತಕ್ಕೆ ಪಾರಂಪರಿಕ ಇತಿಹಾಸ ಸಾರುವ ಕಟ್ಟಡವನ್ನು ಕೆಡವಿರುತ್ತಾರೆ ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ದೂರು ನೀಡಿದ್ದರು.

p>

LEAVE A REPLY

Please enter your comment!
Please enter your name here