ಬೆಳ್ತಂಗಡಿ: ‘ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ಪರೋಪಕಾರ ಮಾಡುವ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಮೂಡಿದರೆ ಮುಂದಕ್ಕೆ ಅವರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಖಂಡಿತ ಸಾಧ್ಯ’ವೆಂದು ಶಾಲಾ ಸಂಚಾಲಕ ವಂ. ಫಾ. ಅಬೆಲ್ ಲೋಬೊ ಹೇಳಿದರು.
ಅವರು ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ”ಪರೋಪಕಾರ ಸಪ್ತಾಹ”ದ ಮೂಲಕ ಮಕ್ಕಳಿಂದ ಸಂಗ್ರಹಿಸಿದ ವಿವಿಧ ಜನೋಪಯೋಗಿ ವಸ್ತುಗಳ ವಿತರಣೆಗೆ ಹಸಿರು ನಿಶಾನೆಯನ್ನು ತೋರಿಸಿ ಸಂಗ್ರಹಿಸಿದ ವಸ್ತುಗಳನ್ನು ಅನಾಥಶ್ರಮದ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಶಾಲಾ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ಕಲ್ಪನೆಯಂತೆ, ಪಾಲಕ ಪೋಷಕರ ಸಹಕಾರದೊಂದಿಗೆ ಅನಾಥರಿಗೆ ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡಲು ತಾವು ತಂದಿರುವ ಅಕ್ಕಿ, ಹೆಸರು, ಬೇಳೆಕಾಳುಗಳು, ಸಕ್ಕರೆ, ಚಾ ಹುಡಿ, ಮೆಣಸು, ಬೆಳ್ಳುಳ್ಳಿ, ಸಾಬೂನು, ಪೇಸ್ಟ್ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಿ ಸಂಬಂಧಿಸಿದವರಿಗೆ ವಿತರಿಸಲು ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಗಳು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ, ಗಂಡಿಬಾಗಿಲು ಸಿಯೋನ್ ಆಶ್ರಮ, ಬೆಳ್ತಂಗಡಿ ದಯಾ ಸ್ಪೆಶಲ್ ಸ್ಕೂಲ್, ವೇಣೂರು ನವೆಚೇತನ ಸ್ಪೆಶಲ್ ಸ್ಕೂಲ್ ಈ ಸಂಸ್ಥೆಗಳಿಗೆ ವಿತರಿಸಲಾಯಿತು.