ಧರ್ಮಸ್ಥಳ ಪ್ರಾ. ಕೃ.ಪ.ಸ.ಸಂಘದ ಸಿಇಓ ರವೀಂದ್ರನ್ ಆತ್ಮಹತ್ಯೆ ಪ್ರಕರಣ: ಸ್ವರ್ಣಗೌರಿ, ಜಯರಾಮ ಭಂಡಾರಿ, ರಘುಚಂದ್ರ ರಾವ್, ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್

0

ಬೆಳ್ತಂಗಡಿ: ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಡಿ ಸಂಘದ ಸಿಬ್ಬಂದಿಯಾಗಿರುವ ಧರ್ಮಸ್ಥಳ ಜೋಡುಸ್ಥಾನದ ಲಕ್ಷ್ಮೀನಾರಾಯಣ ರಾವ್‌ರವರ ಪತ್ನಿ ಸ್ವರ್ಣಗೌರಿ, ನಿರ್ದೇಶಕರಾದ ಅಜಿಕುರಿ ನೇತ್ರಾವತಿ ಸಾನಿಧ್ಯ ಬಳಿಯ ಎಂ.ತಿಮ್ಮಪ್ಪ ಭಂಡಾರಿಯವರ ಪುತ್ರ ಎಂ. ಜಯರಾಮ ಭಂಡಾರಿ ಮತ್ತು ಕಲ್ಲೇರಿಯ ಸುಬ್ಬರಾವ್‌ರವರ ಪುತ್ರ ಪಿ. ರಘುಚಂದ್ರ ರಾವ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಈರ್ವರ ವಿರುದ್ಧ ಎಫ್‌ಐಆರ್-ಮತ್ತೊಂದು ಹೆಸರು ಸೇರ್ಪಡೆ: ೨೦೨೧ರ ಮೇ ೩ರಂದು ಸಂಘದ ಕಚೇರಿಯಲ್ಲಿಯೇ ರವೀಂದ್ರನ್ ಡಿ. ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದಡಿ ಸಂಘದ ನಿರ್ದೇಶಕರಾದ ಜಯರಾಮ ಭಂಡಾರಿ ಮತ್ತು ರಘುಚಂದ್ರ ರಾವ್ ವಿರುದ್ಧ ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಎಫ್‌ಐಆರ್‌ಗೆ ಹೆಚ್ಚುವರಿ ಆರೋಪಿಯಾಗಿ ಸಂಘದ ಸಿಬ್ಬಂದಿ ಸ್ವರ್ಣಗೌರಿ ಅವರ ಹೆಸರನ್ನು ಸೇರಿಸಲಾಗಿತ್ತು. ಬಳಿಕ ಮೂವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದನ್ನು ಪ್ರಶ್ನಿಸಿ ಮೂವರೂ ಹಿರಿಯ ನ್ಯಾಯವಾದಿ ಪಿ.ಪಿ.ಹೆಗ್ಡೆ ಅವರ ಮೂಲಕ ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆ ಮತ್ತು ಮೃತ ರವೀಂದ್ರನ್ ಅವರ ಪತ್ನಿ ಉಷಾ ಎಂ.ಕೆ. ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್‌ರವರು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣ: ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿ ರವೀಂದ್ರನ್ ಡಿ. ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ರವೀಂದ್ರನ್ ಅವರ ಪತ್ನಿ, ಧರ್ಮಸ್ಥಳ ನೇರ್ತನೆಯ ನಿವಾಸಿ ಉಷಾ ಎಂ.ಕೆ. ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ೨೦೨೧ರ ಮೇ ೩ರಂದು ಪ್ರಕರಣ ದಾಖಲಿಸಿದ್ದರು. ನಾನು ಸುಮಾರು ೧೧ ವರ್ಷಗಳಿಂದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಠೇವಣಿ ಸಂಗ್ರಹಗಾರಳಾಗಿ ಕರ್ತವ್ಯ ನಿರ್ವಹಿಸಿಕೊಂಡಿzನೆ. ನನ್ನ ಗಂಡ ರವೀಂದ್ರನ್ ಡಿ. ಅವರು ಸುಮಾರು ೪೦ ವರ್ಷಗಳಿಂದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸುಮಾರು ೩ ವರ್ಷಗಳಿಂದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕಿನಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ದಿನಾಂಕ: ೦೩-೦೫-೨೦೨೧ರಂದು ನನ್ನ ಗಂಡ ಬೆಳಿಗ್ಗೆ ೭.೪೫ ಗಂಟೆ ಸಮಯಕ್ಕೆ ಮನೆಯಿಂದ ಹೊರಟು ಬ್ಯಾಂಕಿನ ಕೆಲಸದ ನಿಮಿತ್ತ ಹೋಗಿದ್ದು ಬೆಳಿಗ್ಗೆ ಸುಮಾರು ೯ ಗಂಟೆ ಸಮಯಕ್ಕೆ ದೂರವಾಣಿ ಮೂಲಕ ಕರೆಮಾಡಿ ನಾನು ಮನೆಗೆ ಬರುವುದಿಲ್ಲ. ಹೋಟೆಲ್‌ನಲ್ಲಿ ಚಹಾ ಕುಡಿಯುತ್ತೇನೆ. ಬ್ಯಾಂಕಿನಿಂದ ಯಾರಾದರೂ ಮನೆಗೆ ಬಂದರೆ ಬ್ಯಾಂಕಿನ ಡ್ರಾಯರ್‌ನ ಕೀಯನ್ನು ಕೊಟ್ಟು ಕಳುಹಿಸು ಎಂದು ತಿಳಿಸಿದ್ದರು. ಮನೆಗೆ ಯಾರು ಬಾರದೇ ಇದ್ದುದ್ದರಿಂದ ನನ್ನ ತಮ್ಮ ಸಚಿನ್ ಮನೆಗೆ ಬಂದಾಗ ಬ್ಯಾಂಕಿನ ಡ್ರಾಯರ್‌ನ ಕೀಯನ್ನು ಅವನಲ್ಲಿ ಕೊಟ್ಟು ಕಳುಹಿಸಿರುತ್ತೇನೆ. ನಾನು ಹಲವು ಬಾರಿ ಗಂಡನಿಗೆ ಕರೆ ಮಾಡಿದರೂ ಸ್ವೀಕರಿಸದೇ ಇದ್ದುದ್ದರಿಂದ ಸಂಶಯಗೊಂಡು ಬ್ಯಾಂಕಿನ ಸಿಬ್ಬಂದಿ ಶಶಿಧರ ಎಂಬವರಿಗೆ ಕರೆ ಮಾಡಿ ಗಂಡನ ಬಗ್ಗೆ ವಿಚಾರಿಸಿದಾಗ ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದರು. ಬಳಿಕ ಆತನು ನನಗೆ ಕರೆ ಮಾಡಿ ಯಾವುದೇ ಕರೆಯನ್ನು ಸ್ವೀಕರಿಸಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಸಂಜೆ ೦೪.೩೦ ಗಂಟೆ ಸಮಯಕ್ಕೆ ಬ್ಯಾಂಕಿನ ಸಿಬ್ಬಂದಿಗಳು ನನಗೆ ಕರೆ ಮಾಡಿ ನಿಮ್ಮ ಗಂಡ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದ್ದರು. ನಾನು ಬ್ಯಾಂಕಿಗೆ ಬಂದು ಮೇಲ್ಬಾಗದ ಹಾಲ್‌ಗೆ ಬಂದು ನೋಡಿದಾಗ ಹಾಲ್‌ನ ಗೋಡೆಗೆ ಆಳವಡಿಸಿರುವ ಕಬ್ಬಿಣದ ರಾಡ್‌ಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅಂತ್ಯ ಸಂಸ್ಕಾರ ಕ್ರಮಗಳನ್ನು ನಡೆಸಿದ ಬಳಿಕ ನನ್ನ ಗಂಡನ ಮೊಬೈಲ್ ಪೋನ್ ಪರಿಶೀಲಿಸಿದಾಗ ಸದ್ರಿ ಮೊಬೈಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಧ್ಯಕ್ಷರನ್ನು ನಾನು ಸೋಲಲು ಬಿಡುವುದಿಲ್ಲ. ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಸಂಘದ ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸುವುದಿಲ್ಲ. ನನ್ನ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯ ಕಾಲದಲ್ಲಿ ಮುಟ್ಟಾಳರಿಂದ ಅವಮಾನಿತನಾಗಲು ಬಯಸುವುದಿಲ್ಲ ಎಂಬಿತ್ಯಾದಿಯಾಗಿ ಡೆತ್‌ನೋಟ್ ಬರೆದಿರುವುದು ಕಂಡು ಬಂದಿದೆ. ಯಾವುದೋ ಕಾರಣಕ್ಕೆ ಜಯರಾಮ ಭಂಡಾರಿ ಮತ್ತು ರಘುಚಂದ್ರರವರು ಸೇರಿ ನನ್ನ ಗಂಡನಿಗೆ ಕಿರುಕುಳ ನೀಡಿ ಅವಮಾನ ಉಂಟು ಮಾಡಿರುವುದು ಕಂಡು ಬರುತ್ತಿರುವುದರಿಂದ ನನ್ನ ಗಂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತದೆ ಹಾಗೂ ಈ ಇಬ್ಬರ ಕಿರುಕುಳದ ಬಗ್ಗೆ ಹಲವು ದಿನಗಳ ಹಿಂದೆ ನನ್ನ ಗಮನಕ್ಕೆ ತಂದಿರುತ್ತಾರೆ. ಆದ್ದರಿಂದ ಜಯರಾಮ ಭಂಡಾರಿ ಮತ್ತು ರಘುಚಂದ್ರರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಉಷಾ ಎಂ.ಕೆ. ಅವರು ನೀಡಿದ್ದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಂಘದ ನಿರ್ದೇಶಕರಾದ ಜಯರಾಮ ಭಂಡಾರಿ ಮತ್ತು ರಘುಚಂದ್ರರವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಇದೇ ಎಫ್‌ಐಆರ್‌ಗೆ ಸಂಘದ ಸಿಬ್ಬಂದಿ ಸ್ವರ್ಣಗೌರಿ ಅವರ ಹೆಸರನ್ನು ಹೆಚ್ಚುವರಿ ಆರೋಪಿಯಾಗಿ ಹೆಸರಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ನಂತರ ಜಯರಾಮ ಭಂಡಾರಿ, ರಘುಚಂದ್ರ ಮತ್ತು ಸ್ವರ್ಣಗೌರಿ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಭಾರೀ ಕುತೂಹಲ ಕೆರಳಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳೂ ಪ್ರತ್ಯೇಕವಾಗಿ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ವಾದ ಪ್ರತಿವಾದ ಮುಕ್ತಾಯಗೊಳಿಸಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ-ಕರ್ತವ್ಯ ನಿಭಾಯಿಸಿದ್ದಾರೆ ಅಷ್ಟೇ: ಹಿರಿಯ ನ್ಯಾಯವಾದಿ ಪಿ.ಪಿ.ಹೆಗ್ಡೆ ವಾದ ಮಂಡನೆ: ರವೀಂದ್ರನ್ ಡಿ. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಸ್ವರ್ಣಗೌರಿ, ಜಯರಾಮ ಭಂಡಾರಿ ಮತ್ತು ರಘುಚಂದ್ರ ಅವರ ಪರವಾಗಿ ಹೈಕೋರ್ಟ್ನಲ್ಲಿ ಹಿರಿಯ ನ್ಯಾಯವಾದಿ ಪಿ.ಪಿ.ಹೆಗ್ಡೆ ವಾದ ಮಂಡಿಸಿದ್ದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ. ಅವರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಾಡಿರುವ ತಪ್ಪುಗಳ ಬಗ್ಗೆ ಆಡಳಿತ ಮಂಡಳಿಯವರು ನೊಟೀಸ್ ಜಾರಿ ಮಾಡಿದ್ದರು. ಆಡಳಿತ ಮಂಡಳಿ ಅಸ್ತಿತ್ವದಲ್ಲಿರುವಾಗ ಅವರ ಗಮನಕ್ಕೆ ತಾರದೇ ನಿರ್ಣಯ ಅಂಗೀಕರಿಸಿದ್ದಕ್ಕೆ ನಿರ್ದೇಶಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಮೂಲಕ ನಿರ್ದೇಶಕರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಹೊರತು ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ. ನೊಟೀಸ್ ಜಾರಿಯಾಗಿರುವುದು ಎಲ್ಲರಿಗೂ ಗೊತ್ತಾಗಿರುವುದರಿಂದ ನಾನು ತಪ್ಪು ಮಾಡಿರುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದೇ ಹೊರತು ಇಲ್ಲಿ ಕಿರುಕುಳದ ಪ್ರಶ್ನೆ ಬರುವುದಿಲ್ಲ. ನಿರ್ದೇಶಕರು ಸಂಘದಲ್ಲಿ ನಡೆದಿರುವ ತಪ್ಪುಗಳನ್ನು ಸರಿ ಪಡಿಸಲು ಪ್ರಯತ್ನಿಸಿ ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆ ಹೊರತು ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ. ಓರ್ವ ಆರೋಪಿ ಸ್ವರ್ಣಗೌರಿ ಸಂಘದ ಸಿಬ್ಬಂದಿಯಾಗಿದ್ದು ಅವರ ಹೆಸರು ಆರಂಭದ ಎಫ್‌ಐಆರ್‌ನಲ್ಲಿ ಇರಲಿಲ್ಲ. ಬಳಿಕ ಸೇರ್ಪಡೆಗೊಳಿಸಲಾಗಿದೆ. ಈ ಮೂವರು ಸಿಇಓ ಅವರ ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕಿರುಕುಳ ನೀಡಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ. ಒಟ್ಟು ಪೊಲೀಸರು ಇವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಕ್ರಮವೇ ಸರಿ ಅಲ್ಲ. ಕ್ರಮಬದ್ಧವೇ ಆಗಿರದ ಎಫ್‌ಐಆರ್‌ನ ತನಿಖೆಯೇ ಅಗತ್ಯ ಇಲ್ಲ ಎಂದು ಪಿ.ಪಿ.ಹೆಗ್ಡೆ ಅವರು ನ್ಯಾಯಪೀಠದ ಗಮನ ಸೆಳೆದಿದ್ದರು. ಇವರ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶಿಸಿದೆ.

ರವೀಂದ್ರನ್‌ರಿಗೆ ಬ್ಯಾಂಕ್‌ನಿಂದ ಶೋಕಾಸ್ ನೊಟೀಸ್ ನೀಡಲಾಗಿತ್ತು: ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಅವರಿಗೆ ಸಂಘದಿಂದ ಕಳುಹಿಸಿದ್ದ ಶೋಕಾಸ್ ನೋಟೀಸ್ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ಧರ್ಮಸ್ಥಳ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರು ೨೦೨೧ರ ಮಾರ್ಚ್ ೧೯ರಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ. ಅವರಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ದಿನಾಂಕ ೦೯-೦೩-೨೦೨೧ರಂದು ನಮ್ಮ ಸಂಘದ ಆಡಳಿತ ಮಂಡಳಿಯ ಸಭೆಯನ್ನು ನಡೆಸುತ್ತಿದ್ದ ಸಂದರ್ಭ ಆಡಳಿತ ಮಂಡಳಿಯ ಸದಸ್ಯರು ನಿರ್ಣಯ ಪುಸ್ತಕವನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ನಿರ್ಣಯ ಪುಸ್ತಕದ ದಿನಾಂಕ ೦೮-೧೦-೨೦೨೦ರಂದು ಮಾಡಲಾಗಿರುವ ನಿರ್ಣಯ ನಂಬ್ರ ೧೨೬ರಲ್ಲಿ ಸಿಬ್ಬಂದಿ ಗ್ರಾಚುವಿಟಿ ಮಿತಿಯನ್ನು ೩೦ ತಿಂಗಳಿಗೆ ಹೆಚ್ಚಿಸಿ ಮಂಜೂರು ಮಾಡಲಾಯಿತು ಎಂದು ಬರೆಯಲಾಗಿರುವುದು ನಮ್ಮ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು ಈ ವಿಷಯವು ಸದ್ರಿ ದಿನದ ಮೀಟಿಂಗಿನ ಅಜೆಂಡಾದಲ್ಲಿ ನಮೂದಾಗಿರುವುದಿಲ್ಲ ಎಂದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ನಿರ್ಣಯವು ಸಹಕಾರಿ ಸಂಘಗಳ ನಿಯಮಗಳಿಗೆ ಹಾಗೂ ಸರಕಾರದ ನಿರ್ದೇಶನಗಳಿಗೆ ವಿರುದ್ಧವಾಗಿದ್ದು ನಮ್ಮ ಸಂಘದ ಆರ್ಥಿಕ ವ್ಯವಸ್ಥೆಗೂ ಮಾರಕವಾದ ರೀತಿಯಲ್ಲಿ ಇರುತ್ತದೆ ಎಂದು ನಮಗೆ ತಿಳಿದು ಬಂದಿರುತ್ತದೆ. ಹಾಗೂ ಈ ವಿಷಯವು ದಿನಾಂಕ ೦೮-೧೦-೨೦೨೦ರ ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟಿರುವುದಿಲ್ಲ, ವಿಷಯ ಸೂಚಿಯಲ್ಲೂ ನಮೂದಿಸಲ್ಪಟ್ಟಿರುವುದಿಲ್ಲ. ಹಾಗೂ ಅಧ್ಯಕ್ಷರ ಅನುಮತಿಯೊಂದಿಗೂ ಸಭೆಯಲ್ಲಿ ಮಂಡಿಸಲ್ಪಟ್ಟಿರುವುದಿಲ್ಲ ಎಂದು ತಮಗೆ ತಿಳಿಯಪಡಿಸಲಾಗಿದೆ. ಸಂಘದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಈ ಪ್ರಮುಖವಾದ ವಿಷಯವನ್ನು ಮೀಟಿಂಗಿನ ಕಾರ್ಯ ಸೂಚಿಯಲ್ಲಿಯೂ ನಮೂದಿಸದೆ ಆ ಬಗ್ಗೆ ವಿಸ್ತತವಾದ ಚರ್ಚೆಯಾಗದೆ ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆ ಕಾನೂನಿಗೆ ವ್ಯತಿರಿಕ್ತವಾದ ನಿರ್ಣಯವನ್ನು ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಯಾಕಾಗಿ ನಿರ್ಣಯ ಪುಸ್ತಕದಲ್ಲಿ ನಮೂದಿಸಿರುತ್ತೀರಿ ಎಂದು ಈ ನೋಟೀಸು ತಲುಪಿದ ೭ ದಿನಗಳ ಒಳಗಾಗಿ ತಿಳಿಯಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು. ಇದೇ ಪತ್ರದ ವಿಚಾರದಲ್ಲಿ ನೊಂದು ರವೀಂದ್ರನ್ ಡಿ. ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.

p>

LEAVE A REPLY

Please enter your comment!
Please enter your name here