ಕಸ್ತೂರಿರಂಗನ್ ವರದಿ ತಿರಸ್ಕಾರ ರಾಜ್ಯ ಸಂಪುಟ ಸಭೆ ಮಹತ್ವದ ತೀರ್ಮಾನ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ ಮತ್ತು ರೆಖ್ಯಾ ಗ್ರಾಮಗಳಲ್ಲಿ ಆತಂಕ ಸೃಷ್ಠಿಸಿರುವ ಹಾಗೂ ರಾಜ್ಯಾದ್ಯಂತ ಸಾರ್ವಜನಿಕರಿಂದ ಬಹಳಷ್ಟು ವಿರೋಧ ವ್ಯಕ್ತವಾಗಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ|ಕೆ.ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ತೀರ್ಮಾನ ಕೈಗೊಳ್ಳಲಾಗಿದೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಂಪುಟ ಸಭೆ ತೀರ್ಮಾನ:
ಕೇಂದ್ರ ಸರಕಾರವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕಳೆದ ಜು.೩೧ರಂದು ಐದನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ ೬೦ ದಿನಗಳೊಳಗೆ ಸಲ್ಲಿಸಲು ತಿಳಿಸಿತ್ತು. ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ೨೦,೬೬೮ ಚ.ಕಿಮೀ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು ೧೯,೨೫೨.೭೦ ಚ.ಕೀ.ಮೀ ಆಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ ೧೬,೦೩೬.೭೨ ಚ.ಕಿ.ಮೀ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದರು.
ಮಾನವನ ಹಸ್ತಕ್ಷೇಪದಿಂದಾಗಿ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಆ ಮೂಲಕ ಜೀವ ಸಂಕುಲಕ್ಕೂ ಅಪಾಯ ಎದುರಾಗಲಿದೆ ಎನ್ನುವುದು ಪರಿಸರ ತಜ್ಞರ ಆತಂಕಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಭಾರೀ ವಿರೋಧದ ಹಿನ್ನೆಲೆಯಲ್ಲಿ ವರದಿಯನ್ನು ಸಂಪೂರ್ಣ ತಿರಸ್ಕಾರ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಇತ್ತೀಚೆಗೆ ಜನಪ್ರತಿನಿಧಿಗಳ ಸಭೆಯಲ್ಲಿ ಸಮ್ಮತಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಹೇಳಿದ್ದರು.ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಉzಶದಿಂದಾಗಿ ಪರಿಸರ ತಜ್ಞ ಮಾಧವ ಗಾಡ್ಗಿಲ್ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಅವರು ೨೦೧೧ರ ಆಗಸ್ಟ್ ೩೧ರಂದು ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದ್ದರು.
ಕಸ್ತೂರಿ ರಂಗನ್ ಸಮಿತಿ ವರದಿ ಹೀಗಿದೆ: ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮ ಘಟ್ಟ ವ್ಯಾಪ್ತಿಯ ೫೯,೯೪೯ ಚದರ ಕಿ.ಮೀ.ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ ೩೬.೪ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ ಎಂದು ಗುರುತಿಸಿದೆ.ಈ ಪ್ರದೇಶಗಳಲ್ಲಿ ಗಣಿಗಾರಿಕೆ, ಜಲವಿದ್ಯುತ್, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು.೨೦,೦೦೦ ಚ,ಮೀ.ಗಿಂತ ಬೃಹತ್ ಆದ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ.ಇಎಸ್‌ಎನಿಂದ ೧೦ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಾದರೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು.ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಯಾವುದೇ ಅವಕಾಶವಿಲ್ಲ.
ಒಂದು ವೇಳೆ ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆ ಆಗುತ್ತದೆ.ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ.ಇಡೀ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗುತ್ತದೆ.ಆಗ ಅಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಬೇಕಾಗುತ್ತದೆ.ಹಾಗಾಗಿ ಈ ಎಲ್ಲಾ ವಿಚಾರಗಳಿಂದ ಕಸ್ತೂರಿ ರಂಗನ್ ವರದಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

p>

LEAVE A REPLY

Please enter your comment!
Please enter your name here