ಬೆಳ್ತಂಗಡಿ: ಕಾರ್ಕಳ- ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಲ್ಲೂರಿನ ಪಾಜಗುಡ್ಡೆ ಎಂಬಲ್ಲಿ ಕ್ಯಾಂಟರ್ ಲಾರಿ-ಬೈಕ್ ಅಪಘಾತದಲ್ಲಿ ವೇಣೂರು ಕರಿಮಣೇಲುವಿನ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸೆ.30ರಂದು ಸಂಭವಿಸಿದೆ.
ಮೂಲತಃ ಕಾರ್ಕಳದ ನಲ್ಲೂರು ಕೊಡಪಟ್ಯ ನಿವಾಸಿಯಾಗಿರುವ ಸುರೇಶ ಆಚಾರ್ಯ (೩೫), ಮಕ್ಕಳಾದ ಸುಮೀಕ್ಷಾ (೭), ಸುಶ್ಮಿತಾ (೫) ಹಾಗೂ ಸುಶಾಂತ್ (೨) ಮೃತಪಟ್ಟವರು. ಪತ್ನಿ ಮೀನಾಕ್ಷಿ (೩೨) ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಕುಟುಂಬವು ವೇಣೂರಿನಿಂದ ನಲ್ಲೂರು ಕಡೆಗೆ ಡಿಸ್ಕವರಿ ಬೈಕಿನಲ್ಲಿ ತೆರಳುತ್ತಿದ್ದಾಗ ಗುರುವಾಯನಕೆರೆ ಕಡೆ ಸಾಗುತ್ತಿದ್ದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಸವಾರ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ನವರಾತ್ರಿ ಪೂಜೆಗೆ ಬರುತ್ತಿದ್ದಾಗ ಘಟನೆ:
ನಲ್ಲೂರು ಕೊಡಪಟ್ಯ ನಿವಾಸಿ ಸಂಕ್ರಾಯ ವಸಂತಿ ದಂಪತಿಯ ೩ ಪುತ್ರಿಯರು ಹಾಗೂ ಮೂವರು ಪುತ್ರರಲ್ಲಿ ಓರ್ವರಾಗಿದ್ದ ಸುರೇಶ ಆಚಾರ್ಯ ಅವರು ವೇಣೂರಿನ ಗಾಂಧಿನಗರದ ಮೀನಾಕ್ಷಿ ಅವರನ್ನು ೧೫ ವರ್ಷಗಳ ಹಿಂದೆ ವಿವಾಹವಾಗಿ ವೇಣೂರಿನ ಕರಿಮಣೇಲಿನ ಗಾಂಧಿನಗರದಲ್ಲಿ ನೆಲೆಸಿದ್ದರು. ಸುರೇಶ್ ಆಚಾರ್ಯ ಮರದ ಕೆಲಸ ವೃತ್ತಿ ನಡೆಸುತ್ತಿದ್ದರು. ಪತ್ನಿ ಗೃಹಿಣಿಯಾಗಿದ್ದು, ಮಕ್ಕಳು ವೇಣೂರಿನಲ್ಲೇ ಶಾಲೆಗೆ ಹೋಗುತ್ತಿದ್ದರು. ಮಕ್ಕಳಿಗೆ ದಸರಾ ರಜೆ ಸಿಕ್ಕಿದ್ದು, ಅದೇ ಖುಷಿಯಿಂದ ನಲ್ಲೂರಿನ ಮೂಲ ಮನೆಯಲ್ಲಿ ಅ.೨ರಂದು ನವರಾತ್ರಿ ವಿಶೇಷ ಪೂಜೆ ಇದ್ದ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ತೆರಳುತ್ತಿದ್ದರು.
ಅಂಗಲಾಚಿದ ತಾಯಿ:
ಮೀನಾಕ್ಷಿಯವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಮಕ್ಕಳ ಸ್ಥಿತಿ ಕಂಡು ತಾಯಿ ರೋದಿಸುತ್ತಿದ್ದುದು ಕಲ್ಲೆದೆಯನ್ನೂ ಕರಗಿಸುವಂತಿತ್ತು. ಮಕ್ಕಳ ದೇಹಕ್ಕೆ ಹಾಕಿದ್ದ ಬಟ್ಟೆಗಳನ್ನು ಸರಿಸಿದ ತಾಯಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ನೆಲಕ್ಕೊರಗಿದ್ದಾರೆ. ಅವರನ್ನು ಆಂಬುಲೆನ್ಸ್ ಮೂಲಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆರವಿಗೆ ಧಾವಿಸಿದ ಸುಮಿತ್ ನಲ್ಲೂರು ತಂಡ:
ಶವ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕಾರ್ಕಳದ ೧೦೮ ಆಂಬುಲೆನ್ಸ್ ಕರೆಸಲಾಯಿತು. ಸ್ಥಳೀಯರಾದ ಸುಮಿತ್ ನಲ್ಲೂರು ತಮ್ಮ ತಂಡದೊಂದಿಗೆ ಅಲ್ಲಿದ್ದವರ ಸಹಾಯ ಪಡೆದು ಬಿದ್ದಿದ್ದವರನ್ನು ಎತ್ತಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತಂದರು. ಈ ಪೈಕಿ ಸುಮೀಕ್ಷಾ ಉಸಿರಾಡುತಿದ್ದಳು. ನಗರದ ರೋಟರಿ ಕೆಎಂಸಿ ಆಸ್ಪತ್ರೆಗೆ ಕರೆತಂದ ವೇಳೆ ಅಲ್ಲಿ ಏಳು ವೈದ್ಯರು ಸೇರಿ ಮಗುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಕನಿಷ್ಠ ಒಂದು ಮಗುವನ್ನಾದರೂ ಉಳಿಸಲು ಕೊನೆಯದಾಗಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ ಎಂದು ಸುಮಿತ್ ನಲ್ಲೂರು ವಿಷಾದ ವ್ಯಕ್ತಪಡಿಸಿದ್ದಾರೆ. ಮೃತ ಸುರೇಶ್ ಅವರು ಸುಮಿತ್ ಸಹಪಾಠಿಯೂ ಆಗಿದ್ದರು.
ಚಾಲಕ ವಶಕ್ಕೆ:
ಕ್ಯಾಂಟರ್ ಚಾಲಕ ಹೇಮಂತ್ನನ್ನು ವಶಕ್ಕೆ ಪಡೆಯಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸುದ್ದಿ ತಿಳಿದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಹಿಂದೂ ಸಂಘಟನೆಯ ಮುಖಂಡರು ಸಹಿತ ಆಸ್ಪತ್ರೆಗೆ ಧಾವಿಸಿ ಬಂದರು. ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿ ಬಂದರು.
ಕುಟುಂಬಕ್ಕೆ ಸುರೇಶನೇ ಆಧಾರ
ಸುರೇಶ್ ಪತ್ನಿ ಮೀನಾಕ್ಷಿಯವರ ಮನೆಯಲ್ಲೇ ನೆಲೆಸಿದ್ದರು. ಮೀನಾಕ್ಷಿಯವರ ತಂದೆ-ತಾಯಿ ಅನಾರೋಗ್ಯದಿಂದ ಇದ್ದು, ಅವರನ್ನು ಸಲಹುತ್ತಿದ್ದರು. ಇಡೀ ಕುಟುಂಬಕ್ಕೆ ಸುರೇಶ್ರೇ ಆಧಾರವಾಗಿದ್ದರು.
(((ಬಾಕ್ಸ್)))
ಕಲ್ಲೆದೆ ಕರಗಿಸುವ ಸನ್ನಿವೇಶ:
ಬೈಕ್ನಲ್ಲಿ ಸವಾರನ ಎದುರು ಇಬ್ಬರು ಮಕ್ಕಳು, ಹಿಂದೆ ಪತ್ನಿ ಜತೆಯಲ್ಲಿ ಒಂದು ಮಗು ಇತ್ತು ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಬೈಕಿನಿಂದ ಎಸೆಯಲ್ಪಟ್ಟ ಎಲ್ಲರ ತಲೆಗಳು ಲಾರಿಗೆ ಬಡಿದಿದ್ದು, ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದರು. ಮಕ್ಕಳ ಮಿದುಳಿನ ಭಾಗಗಳು ಲಾರಿಗೆ ಅಂಟಿಕೊಂಡಿದ್ದವು. ಮಕ್ಕಳ ದೇಹಗಳ ಸ್ಥಿತಿ ಮನಕಲಕುವಂತಿತ್ತು. ಅಪಘಾತ ಸ್ಥಳದಲ್ಲಿ ಜನರು ವಾಹನ ನಿಲ್ಲಿಸಿ ನೋಡುತ್ತಿದ್ದು, ಕೋಟಿ ಚೆನ್ನಯ ತೀರ್ಥಸ್ಥಳದ ಪಕ್ಕದಲ್ಲೇ ಬಿದ್ದಿರುವ ಮಕ್ಕಳ ಚಪ್ಪಲಿ, ಅದರಲ್ಲೂ ಎರಡು ವರ್ಷದ ಮಗುವಿನ ಪುಟಾಣಿ ಚಪ್ಪಲಿಯನ್ನು ನೋಡಿ ಜನರು ಕಣ್ಣೀರು ಹಾಕುತ್ತಿದ್ದಾರೆ.
——————
ನಲ್ಲೂರಿನಲ್ಲಿ ಅಂತ್ಯಕ್ರಿಯೆ
ಅಕ್ಟೋಬರ್ 1ರಂದು ಸಂಜೆ ನಾಲ್ಕು ಮೃತದೇಹಗಳ ಅಂತ್ಯಸಂಸ್ಕಾರ ನಲ್ಲೂರಿನ ಸುರೇಶ್ ಮನೆಯ ಜಮೀನಿನಲ್ಲಿ ನಡೆಯಿತು. ಈ ವೇಳೆ ಗಾಯಾಳು ಮೀನಾಕ್ಷಿ, ಸಂಬಂಧಿಕರು, ಸ್ನೇಹಿತರು, ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಭಾರಿ ಮಳೆಯಿಂದಾಗಿ ಅಂತ್ಯಕ್ರಿಯೆಗೂ ಕೊಂಚ ಅಡ್ಡಿಪಡಿಸಿತ್ತು. ನಾಲ್ಕು ಮೃತದೇಹಗಳನ್ನು ನಾಲ್ಕು ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನಡೆಸಿದ ದೃಶ್ಯ ಮನಕಲಕುವಂತಿತ್ತು.
————
ಗಾಯಾಳು ಮೀನಾಕ್ಷಿ ಮತ್ತೆ ಆಸ್ಪತ್ರೆಗೆ:
ಅಪಘಾತದಲ್ಲಿ ತನ್ನ ಗಂಡ ಹಾಗೂ ಮೂವರು ಮಕ್ಕಳನ್ನು ಕಳೆದುಕೊಂಡಿರುವ ಗಾಯಾಳು ಮೀನಾಕ್ಷಿಯವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತದೇಹಗಳ ಅಂತ್ಯಕ್ರಿಯೆ ವೇಳೆ ಕರೆದುಕೊಂಡು ಬಂದಾಗ ನಾಲ್ವರು ಮೃತರಾದ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದರು. ಅಪಘಾತದಲ್ಲಿ ಗಾಯಗೊಂಡು, ಗಂಡ ಮಕ್ಕಳ ಸಾವಿನ ಸುದ್ದಿ ಕೇಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
———–
ಫೋಟೋ- ವಿಡಿಯೋ ತೆಗೆಯುತ್ತಿದ್ದರು,
ಮನಸ್ಸು ಮಾಡಿದ್ದರೆ ಬದುಕಿಸಬಹುದಿತ್ತು!
ಪಾಜಗುಡ್ಡೆಯಲ್ಲಿ ಅಪಘಾತ ನಡೆದ ಜಾಗದಲ್ಲಿ ಕ್ಷಣ ಮಾತ್ರದಲ್ಲಿ ಜನರು ಸೇರಿದ್ದರು. ಒಬ್ಬರು ನನ್ನ ಸ್ನೇಹಿತರು ಗಾಯಗೊಂಡು ಮಕ್ಕಳನ್ನು ನೋಡುತ್ತಾ ರೋದಿಸಿ ಬಿದ್ದಿದ್ದ ಮೀನಾಕ್ಷಿಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಕೆರ್ವಾಶೆಯಲ್ಲಿದ್ದೆ. ಅಲ್ಲಿಂದ ಆಂಬ್ಯುಲೆನ್ಸ್ನಲ್ಲಿ ಸ್ಥಳಕ್ಕೆ ಬರುವಾಗ ಕನಿಷ್ಠ 30 ನಿಮಿಷವಾಗಿದೆ. ಈ ವೇಳೆ ಜನಸಾಗರ ಇತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಯಾರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿಲ್ಲ. ನಾವು ಬಂದು ನೋಡುವಾಗ ಒಬ್ಬಳು ಬಾಲಕಿ ಉಸಿರಾಡುತ್ತಿದ್ದಳು. ನಾವು ಆಂಬ್ಯುಲೆನ್ಸ್ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಸಾಗಿಸುವವರೆಗೆ ಆಕೆ ಜೀವಂತವಾಗಿದ್ದಳು. ಆದರೆ, ಅವಳನ್ನು ಅಲ್ಲಿದ್ದವರು ಮನಸ್ಸು ಮಾಡಿದರೆ ಕನಿಷ್ಠ 20 ನಿಮಿಷ ಬೇಗ ಆಸ್ಪತ್ರೆ ಸೇರಿಸಬಹುದಿತ್ತು. ಬದಲಾಗಿ ಫೋಟೋ -ವಿಡಿಯೋ ತೆಗೆಯುತ್ತಿದ್ದುದು ನೋಡಿ ಬೇಸರವಾಯಿತು. ಸುರೇಶ್ ನನ್ನ ಕ್ಲಾಸ್ಮೇಟ್. ಈ ಮಕ್ಕಳ ಪರಿಸ್ಥಿತಿ ಯಾರಿಗೂ ಬರಬಾರದು. ಅಪಘಾತದಲ್ಲಿ ಗಾಯಗೊಂಡವರು ಬಿದ್ದಿದ್ದಾಗ ಕಾರು, ಕಾರಿನ ಕುಶನ್ ಬಗ್ಗೆ ಯೋಚಿಸದೆ ಅವರ ಜೀವ ಉಳಿಸುವುದಕ್ಕೆ ಮುಂದಾಗಬೇಕು. ಅರಣ್ಯ ಇಲಾಖೆಯವರು ಈ ಪಾಜಗುಡ್ಡೆ ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು.
– ಸುಮಿತ್ ನಲ್ಲೂರು, ಸ್ಥಳೀಯರು
——————
ಸಂಚಾರ ನಿಯಮ ಪಾಲಿಸುತ್ತಿದ್ದರೆ
ಇಷ್ಟು ಜೀವ ಹಾನಿಯಾಗುತ್ತಿರಲಿಲ್ಲ:
ಪಾಜೆಗುಡ್ಡೆ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ ಅನ್ನುವಂತಾಗಿದೆ. ಹಿಂದಿಗಿಂತ ಈಗ ರಸ್ತೆ ಅಗಲವಾಗಿದ್ದರೂ ತಿರುವುಗಳಿಂದ ಕೂಡಿದೆ. ಇದು ನೇರವಾಗಲೇಬೇಕಿದೆ. ಇಲ್ಲವಾದರೆ ಮತ್ತಷ್ಟು ಜೀವಹಾನಿಗೆ ಕಾರಣವಾಗುತ್ತದೆ. ಇದರ ನಡುವೆ, ಬೈಕ್ ಸವಾರ ಸುರೇಶ್ ಸಂಚಾರ ನಿಯಮಗಳನ್ನು ಪಾಲಿಸದಿರುವುದೂ ಚರ್ಚೆಯಾಗುತ್ತಿದೆ. ಸವಾರ ಸುರೇಶ್ ಇಬ್ಬರು ಮಕ್ಕಳನ್ನು ಎದುರು ಕೂರಿಸಿಕೊಂಡಿದ್ದರು. ಹಿಂಬದಿಯಲ್ಲಿ ಒಂದು ಮಗು, ಪತ್ನಿ ಕುಳಿತಿದ್ದರು. ಅಲ್ಲದೆ, ಬ್ಯಾಗುಗಳೂ ಇದ್ದವು. ಮಕ್ಕಳಲ್ಲಿ ಹೆಲ್ಮೆಟ್ ಕೂಡ ಇರಲಿಲ್ಲ. ಈ ಕುರಿತು ಟ್ವೀಟ್ ಮಾಡಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳದ ನಲ್ಲೂರು ಸಮೀಪ ದ್ವಿಚಕ್ರ ವಾಹನನಕ್ಕೆ ಲಾರಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ವಿಚಾರ ತಿಳಿದು ಮನಸ್ಸಿಗೆ ಬಹಳ ನೋವುಂಟಾಯಿತು. ದಯವಿಟ್ಟು ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿ. ನಮ್ಮನ್ನು ನಂಬಿಕೊಂಡು ಕುಟುಂಬ ಜೀವನ ಸಾಗಿಸುತ್ತಿರುತ್ತದೆ ಎಂಬುದನ್ನು ನಾವು ನೆನಪಿಲ್ಲಿಡಬೇಕು ಎಂದು ತಿಳಿಸಿದ್ದಾರೆ.
————
ತಮ್ಮ ನನ್ನ ಕರೆ ಸ್ವೀಕರಿಸ್ತಿದ್ರೆ ಹೀಗಾಗುತ್ತಿರಲಿಲ್ಲ:
ಮೃತ ಸುರೇಶ್ ನನ್ನ ತಮ್ಮ. ಆತ ನನ್ನ ಜೊತೆಗೆ ಕಾರ್ಕಳದಲ್ಲಿ ಮರದ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಕೆಲಸಕ್ಕೆ ಬೇಗ ಬರಲು ಹೇಳಲು ಕರೆ ಮಾಡಿದ್ದೆ. ಆದರೆ ಆತ ಕರೆ ಸ್ವೀಕರಿಸಲಿಲ್ಲ. ಕರೆ ಸ್ವೀಕರಿಸುತ್ತಿದ್ದರೆ ಕೆಲಸಕ್ಕೆ ಬರುತ್ತಿದ್ದ, ಈ ಘಟನೆ ನಡೆಯುತ್ತಿರಲಿಲ್ಲ. ಅಂದು ಮನೆಯಲ್ಲೇ ಇದ್ದ. ನಲ್ಲೂರಿನ ಮನೆಯಲ್ಲಿ ನವರಾತ್ರಿಯ ಮೊದಲ ದಿನದ ವಿಶೇಷ ಪೂಜೆ ಇರುವುದರಿಂದ ಮಧ್ಯಾಹ್ನದ ಹೊತ್ತಿಗೆ ಮಕ್ಕಳನ್ನು ಕರೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಮಕ್ಕಳು ನನ್ನನ್ನು ದೊಡ್ಡಪ್ಪ ಅಂತ ಕರೆಯುತ್ತಾ ಆಟವಾಡುತ್ತಿದ್ದರು. ಆದರೆ ಅವರನ್ನು ನಾನು ಕಳೆದುಕೊಂಡಿದ್ದೇನೆ. ನಮ್ಮ ಬದುಕೇ ಕತ್ತಲಾಗಿದೆ.
– ಸತೀಶ್, ಮೃತ ಸುರೇಶ್ ಸಹೋದರ
————-
ಹೆಲ್ಮೆಟ್ ಹಾಕುತ್ತಿದ್ದರೆ ಜೀವಗಳು ಉಳಿಯುತ್ತಿದ್ದವು:
ನಾನು ಬಹಳ ನೋವಿನಲ್ಲೇ ನಾಲ್ಕು ಪಾರ್ಥಿವ ಶರೀರಗಳ ಪೋಸ್ಟ್ಮಾರ್ಟಂ ಮಾಡಬೇಕಾಯಿತು. ಸಾವನ್ನಪ್ಪಿದವರಲ್ಲಿ ಮೂವರು ಮಕ್ಕಳಿಗೂ ತಲೆಗೆ ಗಂಭೀರ ಗಾಯಗಳಾಗಿವೆ. ಒಂದು ವೇಳೆ ಮಕ್ಕಳಿಗೆ ಹೆಲ್ಮೆಟ್ ತೊಡಿಸುತ್ತಿದ್ದರೆ, ಅವರ ಜೀವ ಉಳಿಯುತ್ತಿತ್ತೋ ಏನೋ?
– ಸುಧಾಕರ್, ಪೋಸ್ಟ್ ಮಾರ್ಟಂ ಸಹಾಯಕ
ಕಾರ್ಕಳದ ನಲ್ಲೂರಿನಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಲಾರಿ-ಕರಿಮಣೇಲಿನ ಒಂದೇ ಕುಟುಂಬದ ನಾಲ್ವರು ಸಾವು
p>