ವಿಧಾನ ಪರಿಷತ್ ಉಪಚುನಾವಣೆ: ಬಿಜೆಪಿಯಿಂದ ಪುತ್ತೂರಿನ ಕಿಶೋರ್ ಕುಮಾರ್, ಕಾಂಗ್ರೆಸ್‌ನಿಂದ ಬೈಂದೂರಿನ ರಾಜು ಪೂಜಾರಿ ಕಣಕ್ಕೆ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನೂತನ ಸದಸ್ಯನ ಆಯ್ಕೆಗಾಗಿ ಅ.೨೧ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪುತ್ತೂರಿನ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಉಡುಪಿ ಬೈಂದೂರಿನ ರಾಜು ಎಸ್. ಪೂಜಾರಿ ಮತ್ತು ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಅನ್ವರ್ ಸಾದತ್ ಕಣಕ್ಕಿಳಿಯಲಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿರುವ ಅ.೩ರಂದು ಇವರು ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಈ ಕ್ಷೇತ್ರದ ಸದಸ್ಯರಾಗಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಚುನಾಯಿತರಾದ ಬಳಿಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದ್ದು ಅ.೨೪ರಂದು ಮತ ಎಣಿಕೆ ನಡೆಯಲಿದೆ.
ಕಿಶೋರ್ ಕುಮಾರ್ ಬೊಟ್ಯಾಡಿ ಪರಿಚಯ: ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಎರಡು ಬಾರಿ ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಎಬಿವಿಪಿ ಪುತ್ತೂರು ತಾಲೂಕು ಪ್ರಮುಖ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಕಿಶೋರ್ ಕುಮಾರ್ ಅವರು ಮಂಗಳೂರು ಯುನಿವರ್ಸಿಟಿ ಸೆನೆಟ್ ಪ್ರತಿನಿಧಿಯಾಗಿ, ಮಂಗಳೂರು, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ವಿಭಾಗದ ಬಜರಂಗದಳ ಸಂಚಾಲಕರಾಗಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಸೌತ್ ಕೆನರಾ ಆರ್‌ಟಿಐ ಆಕ್ಟಿವಿಸ್ಟ್ ಗ್ರೂಪ್‌ನ ಅಧ್ಯಕ್ಷರಾಗಿ, ಪುತ್ತೂರು ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾಗಿ, ದ.ಕ.ಜಿಲ್ಲಾ ಬಿಲ್ಡಿಂಗ್ ಮೆಟೀರಿಯಲ್ ಸಪ್ಲಯರ‍್ಸ್ ಯೂನಿಯನ್‌ನ ಗೌರವಾಧ್ಯಕ್ಷರಾಗಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಇವರು ಸಕ್ರಿಯರಾಗಿ ತೊಡಗಿಸಿಕೊಂಡವರು. ೨೦೨೧ರಿಂದ ೨೦೨೩ರ ತನಕ ಮೆಸ್ಕಾಂ ನಿರ್ದೇಶಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು. ವಿಧಾನಸಭಾ ಚುನಾವಣೆ ಸಂದರ್ಭ ಬಂದಾಗಲೆಲ್ಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಂಭಾವ್ಯ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಅವರ ಹೆಸರು ಎರಡು ಬಾರಿ ಮುನ್ನೆಲೆಗೆ ಬಂದಿತ್ತು. ಆದರೆ ಕೊನೇಯ ಕ್ಷಣದಲ್ಲಿ ಅವರ ಕೈತಪ್ಪಿ ಹೋಗಿತ್ತು.
ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಉಚಿತ ಔಷಧಿ ವಿತರಣೆಯ ದ.ಕ ಜಿಲ್ಲಾ ನೇತೃತ್ವವನ್ನು ವಹಿಸಿಕೊಂಡಿದ್ದ ಕಿಶೋರ್ ಕುಮಾರ್ ಅವರು ಉತ್ತಮ ಕಾರ್ಯ ನಿರ್ವಹಣೆ ಮೂಲಕ ಮೆಚ್ಚುಗೆ ಗಳಿಸಿದ್ದರು. ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾಗಿ, ಪುತ್ತೂರಿನಲ್ಲಿ ನಡೆದ ಹಿಂದು ಶೌರ್ಯ ಸಂಗಮ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ಪುತ್ತೂರಿನಲ್ಲಿ ನಡೆದ ಶ್ರೀರಾಮಕಥಾ ವೈಭವದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಸೇರಿದಂತೆ ಪುತ್ತೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯರಾಗಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ರಾಜ್ಯ ಸರಕಾರದ ವಿರುದ್ಧ ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರುಗೆ ನಡೆದ ಬಿಜೆಪಿ ಪಾದಯಾತ್ರೆಯಲ್ಲಿಯೂ ಇವರು ಮುಂಚೂಣಿಯಲ್ಲಿದ್ದರು.
ಆರ್‌ಎಸ್‌ಎಸ್ ತರಬೇತುದಾರ: ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಆರ್‌ಎಸ್‌ಎಸ್ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಕಲ್ಪಣೆ ಶಾಖೆಯ ಆರ್‌ಎಸ್‌ಎಸ್ ಮುಖ್ಯ ತರಬೇತುದಾರರಾಗಿದ್ದ ಇವರು ನರಿಮೊಗ್ರು ವಿಭಾಗದ ಆರ್‌ಎಸ್‌ಎಸ್ ಮಂಡಲ ಪ್ರವಾಸಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ೨೦೦೦ರಿಂದ ೨೦೦೪ರ ತನಕ ಸಕ್ರಿಯರಾಗಿದ್ದರು.
ಕಬಡ್ಡಿ ಪಟು: ಉತ್ತಮ ಕಬಡ್ಡಿ ಪಟುವಾಗಿಯೂ ಗುರುತಿಸಿಕೊಂಡಿರುವ ಕಿಶೋರ್ ಕುಮಾರ್ ಅವರು ವಿವಿಧ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿದ್ದರು. ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು ಖುಷಿ ಅಸೋಸಿಯೇಟ್ಸ್‌ನ ಮಾಲಕರಾಗಿದ್ದಾರೆ. ಇವರು ಸರ್ವೆ ಗ್ರಾಮದ ಬೊಟ್ಯಾಡಿ ದಿ.ರಾಮಣ್ಣ ಭಂಡಾರಿ ಹಾಗೂ ಸುಶೀಲ ದಂಪತಿಯ ಪುತ್ರ.
ಎಂಎ ಪದವೀಧರ: ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಸರ್ವೆ ಎಸ್‌ಜಿಎಂ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಮಂಗಳೂರು ವಿವಿಯಲ್ಲಿ ಪೊಲಿಟಿಕಲ್ ಸೈನ್ಸ್‌ನಲ್ಲಿ ಇವರು ಎಂ.ಎ.ಪದವಿ ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖಾ ಸೇವೆಯಲ್ಲಿರುವ ಚೇತನ್ ಕುಮಾರ್ ಬೊಟ್ಯಾಡಿ ಇವರು ಕಿಶೋರ್ ಕುಮಾರ್ ಅವರ ಸಹೋದರನಾಗಿದ್ದು ಕಿರಣ್ ಕುಮಾರ್ ಬೊಟ್ಯಾಡಿ ಇನ್ನೋರ್ವ ಸಹೋದರ. ಸೌಮ್ಯಾ ಹಾಗೂ ರಚನಾ ಸಹೋದರಿಯರಾಗಿದ್ದಾರೆ. ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಪತ್ನಿ ಪ್ರೀತಿ, ಪುತ್ರಿ ಆರಾಧ್ಯ ಜೊತೆ ಪ್ರಸ್ತುತ ಮಂಗಳೂರು ಬಿಜೈಯಲ್ಲಿ ವಾಸವಾಗಿದ್ದಾರೆ.
ರಾಜು ಎಸ್. ಪೂಜಾರಿ ಪರಿಚಯ: ಉಡುಪಿ ಜಿಲ್ಲೆಯ ಬೈಂದೂರಿನ ಕಾಂಗ್ರೆಸ್ ನಾಯಕರಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಸಹಕಾರಿ ಧುರೀಣ, ಸಮಾಜ ಸೇವಕ ರಾಜು ಎಸ್. ಪೂಜಾರಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಜಕೀಯ, ಸಹಕಾರಿ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಬಿಕಾಂ ಪದವೀಧರರಾಗಿರುವ ಇವರು ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ರಾಜು ಪೂಜಾರಿಯವರು ಮಾಜಿ ಶಾಸಕ ಗೋಪಾಲ ಪೂಜಾರಿಯವರ ನಿಕಟವರ್ತಿಯಾಗಿ ಗುರುತಿಸಿಕೊಂಡವರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿರುವ ರಾಜು ಪೂಜಾರಿ ಅವರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕರಾಗಿದ್ದು ಬಡಾಕೆರೆ ಸೇವಾ ಸಹಕಾರಿ ಸಂಘ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಸ್‌ಡಿಪಿಐ ಅಭ್ಯರ್ಥಿ ಅನ್ವರ್ ಸಾದತ್ ಬಜತ್ತೂರು: ವಿಧಾನಪರಿಷತ್ ಉಪಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು ಅ.೩ರಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾಹಿತಿ ನೀಡಿದ್ದಾರೆ.
ಸ್ವತಂತ್ರ ಅಭ್ಯರ್ಥಿ ದಿನಕರ್ ಉಳ್ಳಾಲ್ ನಾಮಪತ್ರ: ಸ್ವತಂತ್ರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ್ ಅವರು ಅ.೧ರಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನಾಮಪತ್ರ ಸ್ವೀಕರಿಸಿದರು.

ಅಚ್ಚರಿಯ ಆಯ್ಕೆ
ವಿಧಾನಪರಿಷತ್ ಉಪ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ದ.ಕ.ಕ್ಷೇತ್ರದ ಮಾಜಿ ಸಂಸದರಾದ ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಉಡುಪಿಯ ಉದಯ ಶೆಟ್ಟಿ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆಗಳ ಮುಂದಾಳು ಅರುಣ್ ಕುಮಾರ್ ಪುತ್ತಿಲ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ ಕಿಶೋರ್ ಕುಮಾರ್‌ಗೆ ಅದೃಷ್ಟ ಒಲಿದಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರ ಹೆಸರು ರೇಸ್‌ನಲ್ಲಿತ್ತು ಇದೀಗ ಅಚ್ಚರಿಯ ಅಭ್ಯರ್ಥಿಯಾಗಿ ರಾಜು ಎಸ್. ಪೂಜಾರಿಯವರ ಹೆಸರು ಘೋಷಣೆಯಾಗಿದೆ. ಎಸ್.ಡಿ.ಪಿ.ಐ. ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿತ್ತು. ಇಲ್ಲಿಯೂ ಅನ್ವರ್ ಸಾದತ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

p>

LEAVE A REPLY

Please enter your comment!
Please enter your name here