ವಿಕ್ರಂಗೌಡ ನೇತೃತ್ವದಲ್ಲಿ ಶರಣಾಗತಿಗೆ ಸಿದ್ಧತೆ: ನಕ್ಸಲ್ ಮುಕ್ತ ತಾಲೂಕು ಆಗುವತ್ತ ಬೆಳ್ತಂಗಡಿ?

0

ಬೆಳ್ತಂಗಡಿ: ನಾಡಿನಿಂದ ಕಾಡಿಗೆ ತೆರಳಿರುವ ಪ್ರಮುಖ ನಕ್ಸಲರು ಶರಣಾಗತಿಯಾಗಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಬೆಳ್ತಂಗಡಿ ತಾಲೂಕಿನ ಜನರೂ ನಿಟ್ಟುಸಿರು ಬಿಡುವಂತಾಗಲಿದೆ ಎಂಬ ಮಹತ್ವದ ಸುದ್ದಿಯೊಂದು ಸದ್ದು ಮಾಡುತ್ತಿದೆ. ಶಂಕಿತ ನಕ್ಸಲ್ ನಾಯಕ ವಿಕ್ರಂಗೌಡ ನೇತೃತ್ವದ ೬ ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಸತ್ಯವೇ ಹೌದಾದರೆ ನಕ್ಸಲ್ ಪೀಡಿತ ಪ್ರದೇಶ ಎಂದು ಕುಖ್ಯಾತಿ ಪಡೆದಿರುವ ಬೆಳ್ತಂಗಡಿ ತಾಲೂಕು ಈ ಕಳಂಕದಿಂದ ಮುಕ್ತವಾಗುವ ನಿರೀಕ್ಷೆಯಿದೆ.
ವಿಕ್ರಂಗೌಡ ನೇತೃತ್ವದಲ್ಲಿ ಶರಣಾಗತಿ?: ನಕ್ಸಲರ ಪೈಕಿ ನಟೋರಿಯಸ್ ಎಂದೇ ಬಣ್ಣಿಸಲ್ಪಡುವ ವಿಕ್ರಂಗೌಡ ನೇತೃತ್ವದಲ್ಲಿಯೇ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಇಲಾಖೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪಶ್ಚಿಮ ಘಟ್ಟದ ಅರಣ್ಯದಂಚಿನಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಶಂಕಿತ ನಕ್ಸಲರು ತಪ್ಪಲು ಭಾಗದಲ್ಲೇ ತಳವೂರಿಕೊಂಡಿರುವ ಶಂಕೆಯಿದೆ. ಅಲ್ಲಿ ನಿಯೋಜಿಸಿದ ಎನ್‌ಎನ್‌ಎಫ್ ಯೋಧರ ತಂಡ ಈಗಲೂ ಆ ಭಾಗದಲ್ಲಿ ಕಾರ್ಯನಿರತವಾಗಿದೆ.
ಶರಣಾಗತಿಗೆ ಕಾರಣಗಳೇನು?: ಸರಕಾರ ಈ ಹಿಂದೆ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಫಲಕದಲ್ಲಿ ೨೨ ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಇನ್ನು ಕೆಲವರು ಶರಣಾಗಿದ್ದಾರೆ. ಈಗ ಇವರ ಸಂಖ್ಯೆ ಸುಮಾರು ೧೨ಕ್ಕೆ ಇಳಿದಿದ್ದು ೬ರಿಂದ ೮ ಮಂದಿ ಸಕ್ರಿಯರಾಗಿದ್ದಾರೆ. ಅವರಲ್ಲಿ ಬೆರಳೆಣಿಕೆಯ ಮಂದಿ ಕರ್ನಾಟಕ ರಾಜ್ಯದವರು. ಕೇರಳ, ಝಾರ್ಖಂಡ್ ಮತ್ತು ಛತ್ತೀಸ್‌ಘಡದಲ್ಲಿ ಸರಕಾರಗಳು ನಕ್ಸಲರನ್ನು ನಿಗ್ರಹಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್ ಗುಂಪಿನ ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿತ ಮುಂತಾದ ಕಾರಣದಿಂದ ಶರಣಾಗತಿಗೆ ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ೧೪ ಮಂದಿ ಶರಣು: ರಾಜ್ಯದಲ್ಲಿ ಈವರೆಗೆ ೧೪ ಮಂದಿ ನಕ್ಸಲರು ಶರಣಾಗಿದ್ದಾರೆ. ಅಂಥವರಿಗೆ ಸರಕಾರ ಪ್ಯಾಕೇಜ್ ಘೋಷಿಸಿದೆ. ೨೦೧೦ರಲ್ಲಿ ವೆಂಕಟೇಶ್, ಜಯಾ, ಸರೋಜಾ, ಮಲ್ಲಿಕಾ, ೨೦೧೪ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಫಿಕರ್, ೨೦೧೬ರಲ್ಲಿ ಭಾರತಿ, ಫಾತಿಮಾ, ಪದ್ಮನಾಭ್, ಪರಶುರಾಮ್, ೨೦೧೭ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಅವರು ಜಿಲ್ಲಾಡಳಿತದ ಮೂಲಕ ಶರಣಾಗಿದ್ದರು. ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಕಡಿವಾಣ ಬಿದ್ದಿತ್ತು.
ಚುನಾವಣೆ ವೇಳೆ ಪ್ರತ್ಯಕ್ಷರಾಗಿದ್ದರು: ಕಳೆದ ಬಾರಿ ಸಾರ್ವತ್ರಿಕ ಲೋಕಸಭೆ ಚುನಾವಣೆ ಘೋಷಣೆ ಸಂದರ್ಭ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪಶ್ಚಿಮಘಟ್ಟ ತಪ್ಪಲಿನಲ್ಲಿ ೪ರಿಂದ ೬ ಮಂದಿ ನಕ್ಸಲರ ಚಲನವಲನ ಕಾಣಿಸಿಕೊಂಡಿತ್ತು. ಬಳಿಕ ಬಿಗಿ ಭದ್ರತೆ, ಶೋಧ ಕಾರ್ಯಾಚರಣೆಯ ಕಾರಣ ಈ ಭಾಗದಿಂದ ಸುರಕ್ಷಿತ ಕಡೆಗೆ ತೆರಳಿರಬಹುದು ಎಂದು ಶಂಕಿಸಲಾಗಿತ್ತು. ಮೂಲಗಳ ಪ್ರಕಾರ ಶಂಕಿತ ನಕ್ಸಲರ ಪೈಕಿ ವಿಕ್ರಂಗೌಡ, ಲತಾ, ದಿಶಾ ಹಾಗೂ ಸಂತೋಷ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿತ್ತು. ಇದರಲ್ಲಿ ದಿಶಾ ಹಾಗೂ ಸಂತೋಷ ತಮಿಳುನಾಡಿನವರೆನ್ನಲಾಗುತ್ತಿದೆ. ಉಡುಪಿ ಜಿಲ್ಲೆ ಹೆಬ್ರಿ ಮೂಲದ ಕೂಡ್ಲು ನಾಡಾಲು ನಿವಾಸಿ ವಿಕ್ರಂಗೌಡ ಅಲಿಯಾಸ್ ಶ್ರೀಕಾಂತ್ ಕೇರಳದ ವಯನಾಡ್, ಕಲ್ಲಿಕೋಟೆಯಲ್ಲಿ ಸಕ್ರಿಯವಾಗಿರುವ ಕಬಿನಿ ದಳದ ಮುಖ್ಯಸ್ಥೆ ಲತಾ ಅಲಿಯಾಸ್ ಲೋಕಮ್ಮ ಅಲಿಯಾಸ್ ಶ್ಯಾಮಲಾ ಸಹಿತ ೬ ಮಂದಿ ನಕ್ಸಲರು ಈಗ ಶರಣಾಗತಿ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಬ್ರಹ್ಮಣ್ಯ ಸಮೀಪದ ಐನೆಕಿದುವಿನ ಮನೆಯೊಂದಕ್ಕೆ ನಾಲ್ವರು ನಕ್ಸಲರು ಭೇಟಿ ನೀಡಿದ್ದ ವೇಳೆ ಪೊಲೀಸರು ಮತ್ತು ಎನ್‌ಎನ್‌ಎಫ್‌ಗೆ ಮಾಹಿತಿ ಹೋಗಿತ್ತು. ತುರ್ತು ಕಾರ್ಯಾಚರಣೆ ನಡೆಸಿದರೂ ನಕ್ಸಲರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಅನುಕಂಪದ ಅಲೆ: ದಶಕದ ಹಿಂದೆ ನಕ್ಸಲರಿಗೆ ಮಲೆನಾಡಿನ ಸಮಸ್ಯೆಗಳೇ ರತ್ನಗಂಬಳಿ ಹಾಸಿದ್ದವು. ರಾಜ್ಯದ ಪಶ್ಚಿಮಘಟ್ಟ ಶ್ರೇಣಿಯಲ್ಲಿ ನಕ್ಸಲರಿದ್ದಾರೆ ಎಂಬುದು ಗೊತ್ತಾಗಿದ್ದು ೨೦೦೨ರ ಆಸುಪಾಸಿನಲ್ಲಿ. ಅಲ್ಲಿಂದಾಚೆಗೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿ ನಕ್ಸಲರು ಪ್ರಥಮ ಹಂತದಲ್ಲಿ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಒಕ್ಕಲೆಬ್ಬಿಸುವುದು, ಜಲ ವಿದ್ಯುತ್ ಯೋಜನೆ, ಎತ್ತಿನಹೊಳೆ ಯೋಜನೆ, ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ, ಪರಿಸರ ಅತೀ ಸೂಕ್ಷ್ಮ ವಲಯದ ಪರಿಸರ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ, ಪುಷ್ಪಗಿರಿ ವನ್ಯಜೀವಿ ವಿರುದ್ಧದ ಅಪಸ್ವರ-ವಿರೋಧಗಳು ಇದಕ್ಕೆ ನೆಲೆಯಾಗಿದ್ದವು. ಇದೀಗ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಶಸ್ತ್ರ ತ್ಯಜಿಸಿ ಬರುವವರಿಗೆ ವಿವಿಧ ಕೆಟಗರಿಯಿಡಿ ೭.೫ ಲಕ್ಷ ರೂ.ವರೆಗೂ ಪ್ಯಾಕೇಜ್ ನೀಡಲಾಗುತ್ತಿದೆ.

ಶಿಶಿಲ, ಶಿಬಾಜೆಯಲ್ಲಿ ಕೂಂಬಿಂಗ್
ಬೆಳ್ತಂಗಡಿ ತಾಲೂಕಿನ ಕುತ್ಲೂರು, ನಾರಾವಿ ಮುಂತಾದ ಪ್ರದೇಶದಲ್ಲಿ ನಕ್ಸಲರ ಚಲನವಲನ ಈ ಹಿಂದೆ ಕಂಡು ಬಂದಿತ್ತು. ಗಡಿಭಾಗವಾದ ಕಾರ್ಕಳ ತಾಲೂಕಿನ ಈದು ಪ್ರದೇಶದಲ್ಲಿ ನಕ್ಸಲರ ಚಟುವಟಿಕೆ ಹೆಚ್ಚಿತ್ತು. ಎನ್‌ಕೌಂಟರ್ ಮೂಲಕ ನಕ್ಸಲರನ್ನು ಮಟ್ಟ ಹಾಕಲಾಗಿತ್ತು. ಮೂಲಭೂತ ಸೌಕರ್ಯಗಳನ್ನು ಪಡೆಯುವುದಕ್ಕಾಗಿ ನಾಡಿನಲ್ಲಿದ್ದ ವಿದ್ಯಾವಂತರೂ ಕಾಡಿನತ್ತ ಹೆಜ್ಜೆ ಹಾಕಿ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಿದ್ದಾರೆ, ಪ್ರಮುಖ ನಕ್ಸಲ್ ನಾಯಕರೊಂದಿಗೆ ಬೆಳ್ತಂಗಡಿ ತಾಲೂಕಿನ ಕೆಲವು ಯುವಕರು ಕಾನೂನು ಬಾಹಿರ ಕೃತ್ಯದಲ್ಲಿ ಕೈ ಜೋಡಿಸಿದ್ದಾರೆ ಎಂದು ಇಲಾಖೆ ಮಾಹಿತಿ ಸಂಗ್ರಹ ನಡೆಸಿತ್ತು. ೨೦೨೦೪ರ ಲೋಕಸಭಾ ಚುನಾವಣೆಯ ವೇಳೆ ಶಿಶಿಲ ಗ್ರಾಮದ ಕಲ್ಲಾಜೆ ಮತ್ತು ಶಿಬಾಜೆ ಗ್ರಾಮದ ಅಜಿರಡ್ಕದಲ್ಲಿ ನಕ್ಸಲರ ಪತ್ತೆಗಾಗಿ ನಕ್ಸಲ್ ನಿಗ್ರಹ ಪಡೆ ಕೂಂಬಿಗ್ ನಡೆಸಿತ್ತು. ಚುನಾವಣೆ ವೇಳೆ ಸುಳ್ಯ ತಾಲೂಕಿನಲ್ಲಿ ಕಂಡು ಬಂದಿದ್ದ ನಕ್ಸಲರು ಶಿರಾಡಿ, ಉದನೆ ಕಾಡಿನ ಮೂಲಕ ಬೆಳ್ತಂಗಡಿಗೆ ಬರುತ್ತಾರೆ ಎಂಬ ಶಂಕೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ನಕ್ಸಲರು ಪತ್ತೆಯಾಗಿರಲಿಲ್ಲ. ಕೆಲವೆಡೆ ನಕ್ಸಲರಿಗೆ ಊರವರ ಬೆಂಬಲ ಕೊಡುತ್ತಾರೆ ಎಂಬ ಶಂಕೆ ಇಲಾಖೆಯದ್ದಾಗಿದೆ. ಇದಕ್ಕಾಗಿಯೇ ಎಎನ್‌ಎಫ್ ತೀವ್ರ ಶೋಧಕ್ಕೆ ಮುಂದಾಗಿದೆ. ಇದೀಗ ನಕ್ಸಲರು ಶರಣಾಗುತ್ತಾರೆ ಎಂಬ ಪಾಸಿಟಿವ್ ಸುದ್ದಿ ಜನರಿಗೆ ನೆಮ್ಮದಿ ನೀಡುವ ನಿರೀಕ್ಷೆ ಇದೆ.

p>

LEAVE A REPLY

Please enter your comment!
Please enter your name here