


ಮದ್ದಡ್ಕ: ಸುಮಾರು 24 ವರ್ಷ ಭೂಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಮಂಜುನಾಥ್ ನಾಯ್ಕ್ ಹಾಗೂ ರಾಜ್ಯದ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗುರುವಾಯನಕೆರೆಯ ಪ್ರೌಢಶಾಲೆಯ ಕಲಾ ಶಿಕ್ಷಕ ವಿಶ್ವನಾಥ್ ಕೆ. ವಿಟ್ಲರನ್ನು ನಾಗರಿಕ ಅಭಿನಂದನಾ ಸಮಿತಿ ಕುವೆಟ್ಟು ಓಡಿಲ್ನಾಳದ ವತಿಯಿಂದ ಅ.2ರಂದು ಮದ್ದಡ್ಕದಲ್ಲಿ ಸನ್ಮಾನಿಸಲಾಯಿತು.
ಉದ್ಯಮಿ, ಬರೋಡಾದ ತುಳುಕೂಟದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಭಾಷಣ ಮಾಡಿದ ಅಂಕಣಗಾರ, ಪ್ರಖರ ವಾಗ್ಮಿ ಆದರ್ಶ ಗೋಖಲೆ, ನಮಗೆಲ್ಲ ಸಿನಿಮಾದ ಹೀರೋಗಳು, ಹೀರೋಯಿನ್ಸ್ ಬದುಕಿನ ಹೀರೋಗಳಾಗಬಾರದು. ಬದಲಾಗಿ ಮೈನಸ್ 53 ಡಿಗ್ರಿಯಲ್ಲೂ ಮನೆ, ಮಠ, ಸಂಸಾರ ಎಲ್ಲವನ್ನೂ ಬಿಟ್ಟು ದೇಶಕ್ಕಾಗಿ ಗಡಿ ಕಾಯುವ ವೀರ ಯೋಧರು ಹೀರೋಗಳಾಗಬೇಕು. ಸೈನಿಕರಿಗೆ ಯಾವುದೇ ಹಬ್ಬ, ಹರಿದಿನ, ಗೌಜಿ, ಗಮ್ಮತ್ತುಗಳಿಲ್ಲ. ಅದರಲ್ಲೂ ಮಂಜುನಾಥ ನಾಯ್ಕ್ರ ಇಬ್ಬರು ಮಕ್ಕಳು ಹುಟ್ಟಿದಾಗಲೂ ಗಡಿಯಲ್ಲಿದ್ದರು. ಅವರ ತ್ಯಾಗ ನಿಜಕ್ಕೂ ಅಪೂರ್ವ. ಭಾರತದ ಭವ್ಯ ಭವಿಷ್ಯವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುವುದು ಶಿಕ್ಷಕ, ಅಂತಹ ಶಿಕ್ಷಕನನ್ನು ಸದಾ ಗೌರವಿಸಬೇಕು. ವಿ.ಕೆ.ವಿಟ್ಲರ ಸೇವೆ ಅನನ್ಯವಾದುದಾಗಿದೆ. ನಾವೆಲ್ಲ ನಮ್ಮ ಆಸೆ ಆಕಾಂಕ್ಷೆಗಳನ್ನು ಇವತ್ತು ಈಡೇರಿಸಿಕೊಳ್ಳುತ್ತಿದ್ದೇವೆ ಅಂದರೆ ಅದಕ್ಕೆ ಕಾರಣ ವಿದ್ಯೆ ಕೊಟ್ಟ ಶಿಕ್ಷಕ ಮತ್ತು ದೇಶ ಕಾಯುವ ಸೈನಿಕ. ಇವರಿಬ್ಬರನ್ನು ಗೌರವಿಸುವುದು ನಮ್ಮ ಜವಾಬ್ದಾರಿ. ಅದನ್ನು ನಾಗರಿಕ ಅಭಿನಂದನಾ ಸಮಿತಿ ಮಾಡಿದೆ, ಈ ಕಾರ್ಯಕ್ರಮ ಅನುಕರಣೀಯ ಎಂದರು.
ಮಾಜಿ ಶಾಸಕ ಪ್ರಭಾಕರ ಬಂಗೇರ, ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಸಮಿತಿಯ ಗೌರವ ಸಲಹೆಗಾರರಾದ ಸುಮಂತ್ ಕುಮಾರ್ ಜೈನ್, ಟಿ.ರಾಮ್ ಭಟ್, ಮಹಮ್ಮದ್ ರಫೀ, ಸುಕೇಶ್ ಕುಮಾರ್ ಕಡಂಬು, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸುಭಾಶ್ಚಂದ್ರ ಶೆಟ್ಟಿ, ಎಸ್.ಗಂಗಾಧರ ರಾವ್ ಕೆವುಡೇಲು, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಪ್ರಮುಖರಾದ ರಾಜ್ ಪ್ರಕಾಶ್ ಶೆಟ್ಟಿ, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಗಣೇಶ್, ಪ್ರದೀಪ್ ಶೆಟ್ಟಿ, ಗೌರವ ಸ್ವೀಕರಿಸಿದ ಶಿಕ್ಷಕ ವಿ.ಕೆ. ವಿಟ್ಲರ ಪತ್ನಿ ಆಶಾಕಿರಣ, ಮಗಳು ಜಿತಾ, ಗೌರವ ಸ್ವೀಕರಿಸಿದ ಸೈನಿಕ ಮಂಜುನಾಥ್ರ ಪತ್ನಿ ಪದ್ಮಾವತಿ, ಮಕ್ಕಳಾದ ಮನ್ವಿತ್, ಮನ್ವಿಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು. ಕುಮಾರಿ ಜಯಶ್ರೀ ಪ್ರಾರ್ಥನೆ ಮಾಡಿದರು. ನಾಗರಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಸ್ವಾಗತಿಸಿದರೆ, ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು.
ಲಾಯಿಲದಿಂದ ಮದ್ದಡ್ಕದವರೆಗೆ ಭವ್ಯ ಮೆರವಣಿಗೆ: ಮಂಜುನಾಥ್ ನಾಯ್ಕ್ ಮತ್ತು ವಿ.ಕೆ.ವಿಟ್ಲರನ್ನು ಲಾಯಿಲದಿಂದ ಮದ್ದಡ್ಕದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಈ ವೇಳೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು. ಸನ್ಮಾನಕ್ಕಿಂತ ಮೊದಲು ಎಲ್.ಇ.ಡಿ ಪರದೆಯಲ್ಲಿ ಸಾಧಕರ ಪರಿಚಯ ಮಾಡಲಾಯಿತು.