ಉಜಿರೆ: ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಿರಿಯಾಡಿ ಸಂತೋಷ್ ಹೆಬ್ಬಾರ್ ಕೊಡುಗೆಯಾಗಿ ನಿರ್ಮಿಸಿರುವ ಕಿರಿಯಾಡಿ ವೃತ್ತ-ನಿನ್ನಿಕಲ್ಲು ಇದರ ಲೋಕಾರ್ಪಣೆ ಕಾರ್ಯಕ್ರಮವು ಅ.3ರಂದು ನಡೆಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅವಂಶಿಕ ಆಡಳಿತ ಮೋಕ್ತೆಸರ ಯು.ಶರತ್ ಕೃಷ್ಣ ಪಡ್ವೆಟನ್ನಾಯ ಉದ್ಘಾಟಿಸಿ ಶುಭ ಹಾರೈಸಿದರು.
ವೃತ್ತ ನಿರ್ಮಾಣದ ದಾನಿ ಸಂತೋಷ ಹೆಬ್ಬಾರ್ ಇವರನ್ನು ಭಜನಾ ಮಂಡಳಿ ಮತ್ತು ಊರವರ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ವಿಠ್ಠಲ ನಾಯ್ಕ ವಹಿಸಿದ್ದರು. ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಕೃಷ್ಣ ಹೊಳ್ಳ, ಭಜನಾ ಮಂಡಳಿಯ ಕಾರ್ಯದರ್ಶಿ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಕಾರ ನೀಡಿದ ಉಜಿರೆ ಗ್ರಾಮಪಂಚಾಯತ್ ಸದಸ್ಯರಾದ ಇಲಿಯಾಸ್ ಬಿ. ಎಂ, ಶಶಿಕಲಾ, ವೃತ್ತ ನಿರ್ಮಾಣ ಮಾಡಿದ ಮೇಸ್ತ್ರಿ ಪ್ರಶಾಂತ್ ಸವಣಾಲು ಇವರನ್ನು ಗೌರವಿಸಲಾಯಿತು.
ಸ್ಥಳೀಯರಾದ ಶ್ರೀ ಶಾಂತಾರಾಮ ಜುವೆಲ್ಲರ್ಸ್ ಆನಂದ ಆಚಾರ್ಯ, ಉಜಿರೆ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಚಾಮುಂಡಿ ನಗರ ಶ್ರೀ ವ್ಯಾಘ್ರ ಚಾಮುಂಡಿ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಉದ್ಯಮಿ ರವಿ ಚಕ್ಕಿತ್ತಾಯ, ಭಜನಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ ಕೊರಗಪ್ಪ ಗೌಡ, ಡೀಕಯ್ಯ ಪೂಜಾರಿ, ನಿವೃತ್ತ ಸೈನಿಕ ಸೂರಪ್ಪ ಗೌಡ, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರವರು ಹಾಜರಿದ್ದರು.
ಭಜನಾ ಮಂಡಳಿಯ ಗೌರವ ಸಲಹೆಗಾರ ಧರ್ಣಪ್ಪ ಗೌಡ ಧರಣಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ರಮೇಶ್ ಗೌಡ ವಂದಿಸಿದರು.