ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ‘ಕಲೆಕ್ಷನ್ ಮಾಸ್ಟರ್’ ಎಂದು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣದ ಪೊಲೀಸ್ ತನಿಖೆ ಮುಂದುವರಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್.ಐ. ಮುರಳೀಧರ ನಾಯ್ಕರವರು ಹರೀಶ್ ಪೂಂಜ ಅವರು ಈ ಕೇಸ್‌ಗೆ ಸಂಬಂಧಿಸಿ ಏನೆಲ್ಲಾ ಪೋಸ್ಟ್ ಮಾಡಿದ್ದಾರೆ, ಏನೆಲ್ಲಾ ಕಂಟೆಂಟ್‌ಗಳಿದೆ, ಯಾವ ಭಾವಚಿತ್ರಗಳನ್ನು ಪ್ರಕಟ ಮಾಡಿದ್ದಾರೆ, ಯಾವ ದಿನಾಂಕ ಮತ್ತು ಸಮಯದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿ ಕೇಳಿ ಘಟನೆಯ ವಿವರ ದಾಖಲಿಸಿ ಫೇಸ್‌ಬುಕ್ ಕಂಪನಿಗೆ ನೊಟೀಸ್ ಕಳುಹಿಸಿ ಮಾಹಿತಿ ಕೋರಿದ್ದಾರೆ. ಅಲ್ಲದೆ ಈ ಬರಹವನ್ನು ಮತ್ತು ಭಾವಚಿತ್ರಗಳನ್ನು ಫೇಸ್‌ಬುಕ್‌ಗೆ ಯಾವ ಮೊಬೈಲ್ ಫೋನ್, ಯಾವ ನಂಬರ್ ಅಥವಾ ಕಂಪ್ಯೂಟರ್‌ನಿಂದ ಅಪ್ಲೋಡ್ ಮಾಡಲಾಗಿದೆ ಎಂಬಿತ್ಯಾದಿ ವಿಚಾರಗಳ ತನಿಖೆ ನಡೆಸುವುದಕ್ಕಾಗಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಶಾಸಕ ಹರೀಶ್ ಪೂಂಜ ಅವರಿಗೆ ತನಿಖಾಧಿಕಾರಿ ಮುರಳೀಧರ ನಾಯ್ಕ್ ನೊಟೀಸ್ ಜಾರಿಗೊಳಿಸಿದ್ದಾರೆ. ಹರೀಶ್ ಪೂಂಜ ಅವರು ನೊಟೀಸ್ ಸ್ವೀಕರಿಸಿದ್ದಾರೆ. ಆದರೆ ಅವರು ಯಾವ ದಿನಾಂಕದಂದು ವಿಚಾರಣೆಗೆ ಹಾಜರಾಗುವುದಾಗಿ ಇನ್ನೂ ಎಸ್.ಐ.ಯವರಿಗೆ ತಿಳಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದು ಕಿಚಾಯಿಸಿ ಅವರ ಭಾವಚಿತ್ರ ಹಾಗೂ ಅವರ ಕಚೇರಿ ಮತ್ತು ಮನೆಯ ಭಾವಚಿತ್ರದೊಂದಿಗೆ ಶಾಸಕ ಹರೀಶ್ ಪೂಂಜರವರು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಮಾಜಿ ಸದಸ್ಯರಾದ ಕಾಂಗ್ರೆಸ್ ಮುಖಂಡ ಶೇಖರ್ ಕುಕ್ಕೇಡಿ ಅವರು ನೀಡಿದ್ದ ದೂರಿನಂತೆ ೨೬-೧೦-೨೦೨೩ರಂದು ಶಾಸಕ ಹರೀಶ್ ಪೂಂಜ ವಿರುದ್ಧ ಐಪಿಸಿ ೫೦೪ ಮತ್ತು ೫೦೫(೨)ರಡಿ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಬಳಿಕ ನಿಧಾನಗತಿಯಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಇದೀಗ ಈ ಕೇಸ್‌ನ ತನಿಖೆ ಮತ್ತೆ ಮುನ್ನೆಲೆಗೆ ಬಂದಿದ್ದು ತನಿಖೆ ಬಿರುಸುಗೊಂಡಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ. ಮುರಳೀಧರ ನಾಯ್ಕ ಅವರು ಹರೀಶ್ ಪೂಂಜರ ವಿರುದ್ಧದ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸುತ್ತಿದ್ದಾರೆ. ಅಲ್ಲದೆ ಫೇಸ್‌ಬುಕ್‌ನಲ್ಲಿ ಹರೀಶ್ ಪೂಂಜ ಅವರು ಅಪ್ಲೋಡ್ ಮಾಡಿರುವ ಬರಹ ಹಾಗೂ ಭಾವಚಿತ್ರಗಳ ಕುರಿತು ಮಾಹಿತಿ ನೀಡುವಂತೆ ಇಡೀ ಕೇಸ್‌ನ ವಿವರ ನಮೂದಿಸಿ ಫೇಸ್‌ಬುಕ್ ಕಂಪನಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೆ ಶಾಸಕ ಹರೀಶ್ ಪೂಂಜ ಅವರಿಗೂ ತನಿಖೆಗೆ ಹಾಜರಾಗುವಂತೆ ನೊಟೀಸ್ ಜಾರಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದ್ದರೂ ಹರೀಶ್ ಪೂಂಜ ಅವರು ಇನ್ನೂ ಜಾಮೀನು ಪಡೆದುಕೊಂಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ಶಾಸಕರ ವಿರುದ್ಧ ಈಗಾಗಲೇ ೩ ಚಾರ್ಜ್‌ಶೀಟ್ ಸಲ್ಲಿಕೆ: ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಈಗಾಗಲೇ ೩ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೇ ೧೮ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ(ಐಪಿಸಿ ೧೪೩, ೧೪೭, ೩೪೧,೩೫೩, ೫೦೬) ಮತ್ತು ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ ೨೦ರಂದು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋಪ(ಐಪಿಸಿ ೧೪೩, ೧೪೭, ೩೪೧,೫೦೪ ಮತ್ತು ೫೦೬) ಹಾಗೂ ಕಳೆಂಜದಲ್ಲಿ ಲೋಲಾಕ್ಷ ಎಂಬವರು ನಿರ್ಮಿಸಿದ್ದ ಮನೆಯನ್ನು ಅರಣ್ಯ ಇಲಾಖೆಯವರು ತೆರವು ಮಾಡಲು ಮುಂದಾಗಿದ್ದಾಗ ಅದರ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕೆ.ಕೆ. ಜಯಪ್ರಕಾಶ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್(ಐಪಿಸಿ ೧೪೩, ೩೫೩, ೫೦೪ ಮತ್ತು ೧೪೯)ಗೆ ಸಂಬಂಧಿಸಿ ಈಗಾಗಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ.
ಚಾರ್ಚ್‌ಶೀಟ್ ಸಲ್ಲಿಕೆ ಆಗಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದು ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೂ ಶಾಸಕ ಹರೀಶ್ ಪೂಂಜ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಿಲ್ಲ. ತನಿಖೆಗಾಗಿ ಫೇಸ್‌ಬುಕ್ ಕಂಪನಿ ಮತ್ತು ಶಾಸಕ ಹರೀಶ್ ಪೂಂಜ ಅವರಿಗೆ ನೊಟೀಸ್ ಜಾರಿಗೊಳಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿದ ಪೊಲೀಸರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹರೀಶ್ ಪೂಂಜ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ವಿವಿಧ ವೆಬ್‌ಸೈಟ್ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ಸೆ.೧೭ರಂದು ಹಾಗೂ ರಾಜ್ಯಮಟ್ಟದ ಎರಡು ಪತ್ರಿಕೆಗಳಲ್ಲಿ ಸೆ.೧೮ರಂದು ವರದಿ ಪ್ರಕಟವಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿದ್ದು ಚಾರ್ಚ್‌ಶೀಟ್ ಸಲ್ಲಿಕೆ ಮಾಡಿಲ್ಲ. ಚಾರ್ಚ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಲಾಗಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.