ತಾ.ಪಂ. ಮತ್ತು ಗ್ರಾಮ ಪಂಚಾಯತಿಗಳಿಗೆ ನಿಯಮಬಾಹಿರವಾಗಿ ಕಾನೂನು ಸಲಹೆಗಾರರಾಗಿ ಶೈಲೇಶ್ ಠೋಸರ್ ನೇಮಕ: ಜಿ.ಪಂ. ಸಿಇಓಗೆ ವಕೀಲ ಸುರೇಶ್ ದೂರು- ತಾ.ಪಂ ಸಾಮಾನ್ಯ ಸಭೆಯ ನಿರ್ಣಯದಂತೆ ನನ್ನ ನೇಮಕವಾಗಿದೆ-ಶೈಲೇಶ್ ಠೋಸರ್ ಸ್ಪಷ್ಟನೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್ ಮತ್ತು ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ನಿಯಮ ಬಾಹಿರವಾಗಿ ನೇಮಕಗೊಂಡಿರುವ ಕಾನೂನು ಸಲಹೆಗಾರರ ಆಯ್ಕೆಯನ್ನು ರದ್ದುಗೊಳಿಸಿ ಹೊಸ ಕಾನೂನು ಸಲಹೆಗಾರರ ತಂಡವನ್ನು ನೇಮಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಬೆಳ್ತಂಗಡಿಯ ವಕೀಲ ಸುರೇಶ್ ವಿ. ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಪಂಚಾಯತ್ ಮತ್ತು ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಕಾನೂನು ಬಾಹಿರವಾಗಿ ಸರಕಾರದ ನಿಯಮ, ನಿಬಂಧನೆಗಳನ್ನು ಪಾಲಿಸದೆ ಬೆಳ್ತಂಗಡಿಯ ವಕೀಲರಾದ ಶೈಲೇಶ್ ಠೋಸರ್ ಅವರನ್ನು ಕಾನೂನು ಸಲಹೆಗಾರರನ್ನಾಗಿ/ನ್ಯಾಯವಾದಿಯನ್ನಾಗಿ ನೇಮಿಸಲಾಗಿದೆ. ಸರಕಾರದ ನಿಯಮದಂತೆ ಕಾನೂನು ಸಲಹೆಗಾರರ ನುರಿತ ವಕೀಲರ ತಂಡವನ್ನು ನೇಮಿಸದೆ ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ನೇಮಿಸಲಾಗಿದೆ. ಆಯ್ಕೆಯ ಸಮಯ ಪಾಲಿಸಬೇಕೆಂದು ಸರಕಾರ ಸೂಚಿಸಿರುವ ಕ್ರಮವನ್ನು ಕೈಬಿಟ್ಟು ಶೈಲೇಶ್ ಠೋಸರ್ ಎಂಬ ಒಬ್ಬರು ವಕೀಲರನ್ನು ಮಾತ್ರ ನಿಯಮ ಬಾಹಿರವಾಗಿ ಗೌಪ್ಯವಾಗಿ ನೇಮಿಸಲಾಗಿದೆ. ಬೆಳ್ತಂಗಡಿ ತಾಲೂಕು ಪಂಚಾಯತ್ ಮತ್ತು ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಈ ಹಿಂದೆ ನಿಯಮಬಾಹಿರವಾಗಿ ನೇಮಕಗೊಂಡಿರುವ ಕಾನೂನು ಸಲಹೆಗಾರರಾದ ನ್ಯಾಯವಾದಿ ಶೈಲೇಶ್ ಠೋಸರ್ ಅವರ ಆಯ್ಕೆಯನ್ನು ರದ್ದುಗೊಳಿಸಿ ಹೊಸ ಕಾನೂನು ಸಲಹೆಗಾರ/ನ್ಯಾಯವಾದಿಗಳ ತಂಡವನ್ನು ನೇಮಿಸಬೇಕೆಂದು ಬೆಳ್ತಂಗಡಿಯ ವಕೀಲ ಸುರೇಶ್ ವಿ.ಅವರು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶೈಲೇಶ್ ಠೋಸರ್ ಅವರ ಆಯ್ಕೆಯ ಸಮಯ ಸರಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಲಾಗಿರುವುದಿಲ್ಲ ಎಂದು ಮಾಹಿತಿ ಹಕ್ಕು ಅಡಿ ತಾಲೂಕು ಪಂಚಾಯತ್ ನಿಂದ ಪಡೆದ ದಾಖಲೆಗಳಿಂದ ತಿಳಿದು ಬಂದಿದೆ ಎಂದು ವಕೀಲ ಸುರೇಶ್ ತಿಳಿಸಿದ್ದಾರೆ.
ತಾ.ಪಂ ಸಾಮಾನ್ಯ ಸಭೆಯ ನಿರ್ಣಯದಂತೆ ನನ್ನ ನೇಮಕವಾಗಿದೆ-ಶೈಲೇಶ್ ಠೋಸರ್ ಸ್ಪಷ್ಟನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸುತ್ತೋಲೆಯ ಮೇರೆಗೆ ಬೆಳ್ತಂಗಡಿ ತಾಲೂಕು ಪಂಚಾಯತಿನ ಸಾಮಾನ್ಯ ಸಭೆಯ ನಿರ್ಣಯದಂತೆ ದಿನಾಂಕ ೧೪-೨-೨೦೧೮ರಂದು ನನ್ನನ್ನು ತಾಲೂಕು ಪಂಚಾಯತ್ ಹಾಗೂ ಬೆಳ್ತಂಗಡಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಯಿತು. ಈ ಬಗ್ಗೆ ಅಧಿಕೃತ ಆದೇಶವನ್ನು ಕಾರ್ಯನಿರ್ವಾಹಣಾ ಅಧಿಕಾರಿ ತಾಲೂಕು ಪಂಚಾಯತ್ ಬೆಳ್ತಂಗಡಿ ಅವರು ನೀಡಿರುತ್ತಾರೆ.
ನೇಮಕಗೊಂಡ ಬಳಿಕ ಇಂದಿನವರೆಗೆ ಗ್ರಾಮ ಪಂಚಾಯತಿಗಳ ಹಾಗೂ ತಾಲೂಕ ಪಂಚಾಯತಿನ ಹಲವಾರು ಪ್ರಕರಣಗಳಲ್ಲಿ ಗ್ರಾಮ ಪಂಚಾಯತ್ ನ್ನು ಪ್ರತಿನಿಧಿಸಿ ಕಾನೂನು ಸಲಹೆಗಳನ್ನು ನೀಡಿ ಹಲವಾರು ಪ್ರಕರಣಗಳನ್ನು ಬಗೆಹರಿಸಲಾಗಿದೆ.
ನಾನು ನೀಡಿದ ಸಲಹೆ ವಿರುದ್ಧ ಯಾವುದೇ ಆದೇಶಗಳು, ಮೇಲ್ಮನವಿ ನ್ಯಾಯಾಲಯಗಳಲ್ಲಿ ಬಂದಿರುವುದಿಲ್ಲ.
ಇದರಿಂದಾಗಿ ಹೆಚ್ಚಿನ ಗ್ರಾಮ ಪಂಚಾಯಿತಿಗಳು ನನ್ನ ಸಲಹೆಯನ್ನು ಪಡೆಯುತ್ತಿದ್ದರು. ಕೆಲವೊಂದು ಪ್ರಕರಣಗಳಲ್ಲಿ ಗ್ರಾಮ ಪಂಚಾಯತ್ ಹಾಗೂ ಕಂದಾಯ ಇಲಾಖೆಯನ್ನು ಕೂಡ ಪಕ್ಷಕಾರ್ಯನ್ನಾಗಿ ಮಾಡಿರುವಾಗ ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಸದರಿ ಪ್ರಕರಣದ ಬಗ್ಗೆ ನನ್ನ ಸಲಹೆಯನ್ನು ಪಡೆಯುತ್ತಿದ್ದರು.ಆದರೆ ಕೆಲ ವ್ಯಕ್ತಿಗಳು ತಮ್ಮ ಪರವಾಗಿ ಕಾನೂನಿನ ವಿರುದ್ಧವಾಗಿ ಕಾನೂನು ಸಲಹೆಯನ್ನು ನೀಡದೆ ಇರುವ ಕಾರಣ ನನ್ನ ಮೇಲೆ ದೂರನ್ನು ದಾಖಲಿಸಿರುತ್ತಾರೆ. ವಕೀಲರ ವೃತ್ತಿಯಲ್ಲಿ ಅಸೂಯೆಯನ್ನು ತೋರಿಸದೆ ಬೌದ್ಧಿಕ ಮಟ್ಟದಲ್ಲಿ ಸ್ಪರ್ಧೆಯನ್ನು ನೀಡುವುದು ವಕೀಲರ ವೃತ್ತಿ ಗೌರವವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಯವಾದಿ ಶೈಲೇಶ್ ಠೋಸರ್ ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here