ಕಾಶಿಪಟ್ಣ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು, ದುಶ್ಚಟಗಳಿಂದ ದೂರವಿದ್ದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಧನಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವಂತಾಗಬೇಕು, ಆ ಮೂಲಕ ನಾವೆಲ್ಲರೂ ನಮ್ಮ ಹೆತ್ತವರ ಕಣ್ಣೀರನ್ನು ಬರಿಸುವ ಮಕ್ಕಳಾಗಬಾರದು, ನಾವೆಲ್ಲ ನಮ್ಮ ಹೆತ್ತವರ ಕಣ್ಣೀರನ್ನು ಒರೆಸಿ ಆನಂದ ಬಾಷ್ಪ ತರಿಸುವ ಮಕ್ಕಳಾಗಬೇಕು ಎಂದು ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಶೈಲ.ಡಿ.ಮುರುಗೋಡುರವರು ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಪ್ರೌಢಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಕರೆ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿಕೊಂಡ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ಕ್ರೀಡೆ ಬಹುಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ನಾವೆಲ್ಲರೂ ಸೇರಿ ಮಕ್ಕಳ ಕ್ರೀಡಾಮನೋಭಾವವನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶಶಿಧರ್ ಕೆ ಸರ್ವರನ್ನು ಸ್ವಾಗತಿಸಿದರು. ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದ ಶಾಲಾ ಶಿಕ್ಷಕಿ ಸೌಮ್ಯ ಇವರನ್ನು ಗೌರವಿಸಲಾಯಿತು. ಶಿಕ್ಷಕಿ ಹರಿಣಾಕ್ಷಿ ಸನ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ರವೀಂದ್ರ ಡಿ, ಜಿತೇಂದ್ರ ಸಾಲಿಯಾನ್ ಅಧ್ಯಕ್ಷರು ಗರಡಿ ಫ್ರೆಂಡ್ಸ್, ಶೈಲೇಶ್ ಅಧ್ಯಕ್ಷರು ಶಾರದೋತ್ಸವ ಸಮಿತಿ , ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಯಶೋಧರ ಪೂಜಾರಿ ನಲ್ಲರಬೆಟ್ಟು, ದಾಮೋದರ ಶೆಟ್ಟಿಗಾರ್, ಎಸ್.ಡಿ.ಎಂ.ಸಿ ಸದಸ್ಯರು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್, ಶಾಲಾ ಸ್ಥಾಪಕ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್ ಪಿಂಟೊ, ಕೊಡುಗೈ ದಾನಿ ಅಖ್ತರ್ ಹಾಸ್ಕೊ, ನಿವೃತ್ತ ಅರಣ್ಯ ಅಧಿಕಾರಿ ಶ್ರೀಧರ್ ಪೂಜಾರಿ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲೋಶಿತಾ ಮತ್ತು ತಂಡ ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕ ದೇವುದಾಸ್ ನಾಯಕ್ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಊರ ಹಿರಿಯರಾದ ರಾಜು ಪೂಜಾರಿ ಮಿತ್ತೊಟ್ಟು ಗುತ್ತು ಬಹುಮಾನಗಳನ್ನು ವಿತರಿಸಿದರು.ಪಂದ್ಯಾಟದ ಪ್ರಥಮ ಸ್ಥಾನವನ್ನು ಸೈಂಟ್ ಪೀಟರ್ ಪ್ರೌಢಶಾಲೆ ಅಳದಂಗಡಿ ಬಾಲಕರು ಮತ್ತು ದ್ವಿತೀಯ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಕಾಶಿಪಟ್ಣದ ಬಾಲಕರು ಗೆದ್ದುಕೊಂಡರು. ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಕ್ರೀಡಾಕೂಟಕ್ಕೆ ಸಹಕರಿಸಿದವರನ್ನು ಪ್ರಶಂಶಿಸಿದರು.ವೇದಿಕೆಯಲ್ಲಿ ಶಾಲಾ ಈ ಹಿಂದಿನ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ವಲಯ ಕ್ರೀಡಾ ಸಂಯೋಜಕ ಶೇಖರ್ ಅಳದಂಗಡಿ ಪ್ರೌಢಶಾಲೆ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು. ಹರಿಣಾಕ್ಷಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಶಶಿಧರ್ ಕೆ ವಂದಿಸಿದರು.ಶಿಕ್ಷಕಿ ಸರೀನ್ ತಾಜ್ ನಿರೂಪಿಸಿದರು. ಊರ ವಿದ್ಯಾ ಅಭಿಮಾನಿಗಳ ಪೋಷಕರ ಮತ್ತು ಎಸ್ ಡಿ ಎಂ ಸಿ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಪಂದ್ಯಾಟ ಯಶಸ್ವಿಯಾಗಿ ನೆರವೇರಿತು.