ಲಾಯಿಲ: ಗ್ರಾಮದ ಆಯಿಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕದ್ಪಾಜೆಯ ಬಳಿ ಕಾಂಕ್ರೀಟ್ ರಸ್ತೆಯ ಅಡಿಭಾಗ ಕುಸಿದಿದ್ದು, ಪಕ್ಕದಲ್ಲಿ ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರಸ್ತೆಯಲ್ಲಿ ಆಟೋ, ಓಮ್ನಿಯಲ್ಲಿ ಮಕ್ಕಳು ಆತಂಕದಿಂದಲೇ ಶಾಲೆಗೆ ಹೋಗುತ್ತಿದ್ದಾರೆ. ಹೀಗೆ ರಸ್ತೆ ಕುಸಿದು ವರ್ಷವೇ ಕಳೆದರೂ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ. ಸ್ಥಳೀಯರ ಕರೆಯ ಮೇಲೆ ಸುದ್ದಿ ನ್ಯೂಸ್ ಸ್ಥಳಕ್ಕೆ ತೆರಳಿ ವರದಿ ಮಾಡಿದ ನಂತರ ಎಲ್ಲರೂ ಭೇಟಿ ನೀಡಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ರಸ್ತೆ ಕುಸಿತಕ್ಕೆ ಕಾರಣವೇನು?: ಕದ್ಪಾಜೆ ರಸ್ತೆ ಕುಸಿಯಲು ಅದರ ಕೆಳಭಾಗದಲ್ಲಿ ಜಮೀನು ಹೊಂದಿರುವ ಬೆಂಜಮಿನ್ ಎಂಬವರ ಕುಟುಂಬ ಕಾರಣ ಎಂಬುದು ಸ್ಥಳೀಯರ ಆರೋಪ. ರಸ್ತೆಯ ಪಕ್ಕ ಅಗೆಯಬಾರದು ಎಂದು ಹಿಂದೆ ಗ್ರಾಮ ಪಂಚಾಯತ್‌ನವರೆದುರೇ ತಿಳಿಸಲಾಗಿತ್ತು. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ನಂತರ ಅಗೆದ ಕಾರಣ ರಸ್ತೆ ಜರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ದಿ ವರದಿ ನಂತರ ಎಚ್ಚೆತ್ತ ಅಧಿಕಾರಿಗಳು: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಯಿಲ ಬೈಲು, ಮುದ್ರಾಜೆ, ಅಲೆಕ್ಕಿ, ಬೈಲಬರಿ, ಕಂಬಳದಡ್ಡ ಮುಂತಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿರುವ ಬಗ್ಗೆ ಸುದ್ದಿ ನ್ಯೂಸ್ ಮಾಡಿರುವ ವರದಿಯ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಇದಾದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜ ಕೂಡ ಸ್ಥಳಕ್ಕೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಯ ಕೆಳಭಾಗದಲ್ಲಿರುವ ಜಮೀನಿನವರಿಗೆ ಕೂಡಲೇ ನೋಟಿಸ್ ಜಾರಿಗೊಳಿಸಬೇಕು. ಅವರು ರಸ್ತೆಗೆ ಆಗಿರುವ ಅಪಾಯವನ್ನು ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಸರ್ಕಾರಿ ಸ್ವತ್ತು ನಾಶ ಮಾಡಿರುವ ಬಗ್ಗೆ ದೂರು ದಾಖಲಿಸುವಂತೆ ಜಿ.ಪಂ. ಇಂಜಿನಿಯರಿಂಗ್ ಕಚೇರಿಯ ಅಧಿಕಾರಿಗೆ ಸೂಚಿಸಿದರು. ಮೂರು ದಿನದೊಳಗೆ ಈ ಕೆಲಸ ಆಗದಿದ್ದರೆ, ತಹಸೀಲ್ದಾರ್ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳೇ ಕಾರಣವಾಗುತ್ತಾರೆಂದು ಎಚ್ಚರಿಸಿದರು.
ಶಾಸಕರು ಭರವಸೆ ನೀಡಿದ್ದಾರೆ: ಸುದ್ದಿ ವರದಿಯ ಮರುದಿನವೇ ಇಂಜಿನಿಯರ್‌ಗಳು ಭೇಟಿ ನೀಡಿದ್ದಾರೆ. ಇದಕ್ಕೆ ೧೦ರಿಂದ ೧೫ ಲಕ್ಷ ರೂ. ಬೇಕಾಗಬಹುದು. ನಮ್ಮಿಂದ ಆಗುವ ಪ್ರಯತ್ನ ಮಾಡುತ್ತೇವೆ. ಅನುದಾನ ತರುವುದು ಕಷ್ಟ. ಶಾಸಕರ ಜೊತೆ ಮಾತನಾಡಿ ಆದಷ್ಟು ಬೇಗ ಪರಿಹಾರ ಮಾಡಿ ಕೊಡುತ್ತೇವೆಂದು ಹೇಳಿದ್ದಾರೆ. ಶಾಸಕರು ಭೇಟಿ ನೀಡಿದಾಗ ಅವರಿಗೂ ಸಮಸ್ಯೆ ವಿವರಿಸಿzವೆ. ಪಂಚಾಯತ್‌ನವರು ಸಂಬಂಧಪಟ್ಟವರ ಮೇಲೆ ಮೂರು ದಿನದ ಒಳಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಶಾಸಕರು ಹೇಳಿದ್ದಾರೆ. ಅದಕ್ಕಾಗಿ ಕಾಯುತ್ತಿದ್ದೇವೆ. – ಭೋಜ ಮಲೆಕುಡಿಯ
ಕುಸಿಯಲು ನಾವು ಕಾರಣವಲ್ಲ, ತಡೆಗೋಡೆ ಕಟ್ಟಲು ಸಾಧ್ಯವಿಲ್ಲ: ರಸ್ತೆ ಕುಸಿದಿರುವುದಕ್ಕೆ ನಾವು ಕಾರಣರಲ್ಲ. ೧೫ ವರ್ಷಗಳ ಹಿಂದೆ ನಾವು ಕೆಲಸ ಮಾಡಿದ್ದೆವು. ಕುಸಿದ ಪ್ರದೇಶದಲ್ಲಿ ನಾವು ಯಾವುದೇ ರೀತಿಯ ಜೆಸಿಬಿ ಕೆಲಸ ಮಾಡಿಲ್ಲ. ನಾವು ಜೆಸಿಬಿ ಕೆಲಸ ಮಾಡಿದ್ದು ನಮ್ಮ ಮನೆ ಮತ್ತು ಅಂಗಳದ ಸಮೀಪ ಮಾತ್ರ. ನಾವು ತಡೆಗೋಡೆ ಕಟ್ಟಿ ಕೊಡಲು ಸಾಧ್ಯವಿಲ್ಲ. ಅಲ್ಲೊಂದು ದೊಡ್ಡ ಮರವಿತ್ತು. ಅದು ಬಿದ್ದು ನಮ್ಮ ೨೫ಕ್ಕೂ ಹೆಚ್ಚು ಅಡಿಕೆ ಗಿಡಗಳು ಹೋಗಿವೆ. ರಸ್ತೆಯ ನೀರು ಬಂದು ಅದು ಕುಸಿದಿರುವುದು. ಈ ಬಗ್ಗೆ ಈಗ ನಮಗೆ ಯಾರೂ ಏನೂ ಸೂಚನೆ ನೀಡಿಲ್ಲ.- ಥೆರೆಸಾ, ಜಮೀನಿನ ಮಾಲೀಕ ಬೆಂಜಮಿನ್‌ರ ಪತ್ನಿ
ಒಂದು ವರ್ಷವಾದ್ರೂ ಕ್ರಮ ಆಗಿಲ್ಲ: ಕೆಳಗಿನ ಜಮೀನಿನವರು ಅಗೆದಾಗ ನಾವು ಪಂಚಾಯತ್‌ಗೆ ದೂರು ನೀಡಿದ್ದೆವು. ಆಗ ಅವರು ಅಗೆಯುವುದಿಲ್ಲ ಅಂತ ಒಪ್ಪಿಕೊಂಡಿದ್ದರು. ಆದರೆ ರಾತ್ರೋರಾತ್ರಿ ಮತ್ತೆ ಅಗೆದಿದ್ದರಿಂದ ಹೀಗಾಗಿದೆ. ಈ ರಸ್ತೆ ಕುಸಿದ ನಂತರ ಲಾಯಿಲ ಗ್ರಾಮ ಪಂಚಾಯತ್‌ನವರು ಒಂದು ಹಗ್ಗ ಕಟ್ಟಿ ಹೋಗಿದ್ದರು. ನಂತರ ಘನವಾಹನಕ್ಕೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಿದ್ದಾರೆ. ಆ ಜಮೀನಿನವರು ಒಂದು ವೇಳೆ ಗುಡ್ಡ ಜರಿದರೆ ನಾವು ಕಟ್ಟಿಕೊಡುತ್ತೇವೆ ಎಂದಿದ್ದರು. ಪಂಚಾಯತ್‌ನಲ್ಲಿ ಬರೆದು ಕೊಟ್ಟಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಈಗ ಅವರು ನಾವು ಅಗೆದೇ ಇಲ್ಲ ಅಂತ ಹೇಳುತ್ತಿದ್ದಾರೆ. – ರಮೇಶ್ ಎಂ.ಕೆ, ಸ್ಥಳೀಯರು
ರಸ್ತೆಯ ಕೆಳಭಾಗದ ಗುಡ್ಡ ಅಗೆದವರ ವಿರುದ್ಧ ಕ್ರಮ: ಹರೀಶ್ ಪೂಂಜ- ಲಾಯಿಲದ ಸವಣಾಲು ಸಂಪರ್ಕ ರಸ್ತೆ ಮತ್ತು ಪರಿಶಿಷ್ಟ ಕಾಲೋನಿ ರಸ್ತೆಯಲ್ಲಿ ಎಸ್.ಸಿ. ಫಂಡ್ ಮತ್ತು ಎಂಪಿ ಫಂಡ್ ಮೂಲಕ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ. 40 ವರ್ಷಗಳಿಂದ ಇದು ಕಚ್ಚಾ ರಸ್ತೆ ಆಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಿತ್ತು. ಇಲ್ಲಿ ಒಬ್ಬ ವ್ಯಕ್ತಿ ತಮ್ಮ ಪಟ್ಟಾ ಜಾಗವೆಂದು ಹೇಳಿಕೊಂಡು ರಸ್ತೆಯ ಬದಿಯವರೆಗೂ ಅತಿಕ್ರಮಣ ಮಾಡಿ ಗುಡ್ಡ ಅಗೆದ ಪರಿಣಾಮ ರಸ್ತೆ ಕುಸಿಯುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ವರ್ಷದ ಹಿಂದೆ ನೋಟಿಸ್ ಕೊಟ್ಟಿದೇವೆ ಅಂತ ಹೇಳಿದ್ದಾರೆ. ತಹಶೀಲ್ದಾರ್ ಕೂಡ ಸ್ಥಳ ಭೇಟಿ ಮಾಡಿದ್ದಾರೆ. ಗುಡ್ಡವನ್ನು ಅಗೆದವರಿಂದಲೇ ತಡೆಗೋಡೆ ನಿರ್ಮಾಣ ಮಾಡಿಸಬೇಕು, ಚರಂಡಿ ವ್ಯವಸ್ಥೆ ಮಾಡಿಸಬೇಕು. ಮಾಡದಿದ್ದರೆ ಸಾರ್ವಜನಿಕ ಆಸ್ತಿ ನಷ್ಟವೆಂದು ಅವರ ಮೇಲೆ ಮೊಕದ್ದಮೆ ದಾಖಲು ಮಾಡಬೇಕೆಂದು ಸೂಚಿಸಿzನೆ. ಮೊದಲು ನೋಟಿಸ್ ನೀಡಬೇಕು. ನಿಗದಿನ ದಿನದೊಳಗೆ ತಡೆಗೋಡೆ ನಿರ್ಮಿಸದಿದ್ದರೆ ಎಫ್‌ಐಆರ್ ಮಾಡಬೇಕು. ಸಾರ್ವಜನಿಕರು, ಈ ಭಾಗದ ಎಸ್‌ಸಿ ಸಮುದಾಯದವರಿಗೆ ಅನುಕೂಲ ಆಗುವಂತೆ ಪಂಚಾಯತ್‌ನಿಂದ ಅಥವಾ ಸಂಬಂಧಪಟ್ಟಂತೆ ಯಾವ ಅನುದಾನ ಲಭ್ಯವಿದೆ ಗಮನಿಸಿ ಕಾಮಗಾರಿ ಮಾಡಿಸುವ ಸೂಚನೆ ಕೊಟ್ಟಿದ್ದೇನೆ. ತಹಶೀಲ್ದಾರ್ ಜತೆ ಮಾತಾಡುತ್ತೇನೆ. -ಹರೀಶ್ ಪೂಂಜ, ಶಾಸಕ
ದಯವಿಟ್ಟು ಸರಿಪಡಿಸಿ ಕೊಡಿ– ನಮಗೆ ತುಂಬಾ ಭಯವಾಗುತ್ತದೆ. ಇಲ್ಲಿ ವಾಹನಗಳಿಗೆ ಸೈಡ್ ಕೊಡಲು ಆಗುವುದಿಲ್ಲ. ಮಕ್ಕಳು ಶಾಲೆಗೆ ವ್ಯಾನ್‌ನಲ್ಲಿ ಹೋಗುತ್ತಾರೆ. ಅವರು ಹೋಗಿ ಬರುವವರೆಗೆ ಭಯವಾಗುತ್ತದೆ. ಅನಾರೋಗ್ಯ ಆದರೂ ಕೂಡ ಇಲ್ಲಿ ಓಡಾಟ ಕಷ್ಟ. ಎಲ್ಲರೂ ಸೇರಿ ಇದನ್ನು ಸರಿಪಡಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ. – ಸರಸ್ವತಿ, ಸ್ಥಳೀಯರು
ತಕ್ಷಣ ತಾತ್ಕಾಲಿಕ ಪರಿಹಾರ: ಕುಸಿತಕ್ಕೊಳಗಾದ ರಸ್ತೆಯನ್ನು ಶಾಸಕರು ವೀಕ್ಷಿಸಿದ್ದು, ಮೂರು ದಿನದೊಳಗೆ ಕೆಳಗಿನ ಗುಡ್ಡ ಅಗೆದವರ ಮೇಲೆ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಅವರ ಉತ್ತರ ಬಂದ ಮೇಲೆ ಪಂಚಾಯತ್‌ನಿಂದ ತಾತ್ಕಾಲಿಕ ಪರಿಹಾರ ಏನು ಮಾಡಲು ಸಾಧ್ಯವೆಂದು ಪರಿಶೀಲಿಸುತ್ತೇವೆ. -ಜಯಂತಿ ಎಂ.ಕೆ. ಗ್ರಾ.ಪಂ. ಅಧ್ಯಕ್ಷೆ
ನಮಗೆ ಯಾರಲ್ಲಿ ಹೇಳುವುದು ಗೊತ್ತಿಲ್ಲ: ಹಿಂದೆ ಕಚ್ಚಾ ರಸ್ತೆಯಿತ್ತು. ಲಾಯಿಲ ಪಂಚಾಯತ್‌ನಿಂದ ಮೇಲಂತಬೆಟ್ಟು ಪಂಚಾಯತ್‌ನ ವ್ಯಾಪ್ತಿಗೆ ಸೇರುತ್ತದೆ. ತಾಲೂಕು ಪಂಚಾಯತ್ ಮಾಜಿ ಸದಸ್ ಬಾಲಕೃಷ್ಣ ಶೆಟ್ಟಿಯವರ ಮುತುವರ್ಜಿ, ಶಾಸಕ ಪೂಂಜರ ಮುತುವರ್ಜಿಯಿಂದ ೪೦ ಲಕ್ಷ ರೂ. ವೆಚ್ಚ, ಸಂಸದರ ಅನುದಾನದಲ್ಲಿ ೧೦ ಲಕ್ಷ ರೂ. ಖರ್ಚಾಗಿತ್ತು. ನಮಗೆ ಈಗ ಯಾರಲ್ಲಿ ಕೇಳುವುದು ಅಂತ ಅರ್ಥವಾಗುತ್ತಿಲ್ಲ. ಒಂದು ಕಡೆ ಈ ರಸ್ತೆಯ ಜಾಗ ಯಾರಿಗೆ ಸೇರಿದ್ದು ಗೊತ್ತಿಲ್ಲ. – ದಿನೇಶ್ ಶೆಟ್ಟಿ, ಸ್ಥಳೀಯರು