ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಿಂದಿಸಿ ಬೆದರಿಸಿದ ಆರೋಪದಡಿ ಎರಡು ಪ್ರತ್ಯೇಕ ಕ್ರಿಮಿನಲ್ ಕೇಸ್‌ಗೆ ಒಳಗಾಗಿರುವ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತಿತರರಿಗೆ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರಥಮ ಕೇಸ್‌ನಲ್ಲಿ 28 ಮಂದಿ ಮತ್ತು ೨ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರ ಎದುರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈ ಮಧ್ಯೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಬೇಕೆಂದು ಕೋರಿ ಹರೀಶ್ ಪೂಂಜ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಜೂನ್ ೨೮ರಂದು ನಡೆಯಲಿದ್ದು ಅಂದು ನ್ಯಾಯಮೂರ್ತಿಗಳು ನೀಡುವ ತೀರ್ಪಿನ ಮೇಲೆ ಮುಂದಿನ ಬೆಳವಣಿಗೆ ನಡೆಯಲಿದೆ.
ಸಮನ್ಸ್ ಜಾರಿ: ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಆಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ 18ರಂದು ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಮೇ 20ರಂದು ತಾಲೂಕು ಆಡಳಿತ ಸೌಧದ ಎದುರು ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋಪದಡಿ ಶಾಸಕ ಹರೀಶ್ ಪೂಂಜ ಮತ್ತು ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಕ್ರಿಮಿನಲ್ ಕೇಸ್‌ಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿದ್ದ ಪ್ರಕರಣದ ತನಿಖಾಧಿಕಾರಿಯಾಗಿರುವ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರು ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಆರಂಭಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಹರೀಶ್ ಪೂಂಜ ಮತ್ತಿತರರಿಗೆ ಜುಲೈ 10ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಎಲ್ಲರ ಚಿತ್ತ ಹೈಕೋರ್ಟ್‌ನತ್ತ: ಎರಡು ಪ್ರಕರಣಗಳಿಗೆ ಸಂಬಂಧಿಸಿ ಜುಲೈ 10ರಂದು ನ್ಯಾಯಾಲಯಕ್ಕೆ ಹಾಜರಾಗಲು ಶಾಸಕ ಹರೀಶ್ ಪೂಂಜ ಮತ್ತು ಇತರರಿಗೆ ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಬೆನ್ನಿಗೇ ಎಲ್ಲರ ಚಿತ್ತ ಹೈಕೋರ್ಟ್‌ನತ್ತ ಹರಿದಿದೆ. ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ಹರೀಶ್ ಪೂಂಜ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಜೂನ್ 28ರಂದು ನಡೆಯಲಿರುವುದು ಇದಕ್ಕೆ ಕಾರಣವಾಗಿದೆ. ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಆಕ್ರಮ ದಾಸ್ತಾನು ಮಾಡಿದ್ದ ಆರೋಪದಡಿ ಬಂಧಿತರಾಗಿದ್ದ ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ 18ರಂದು ರಾತ್ರಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಮೇ 20ರಂದು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋಪದಡಿ ತನ್ನ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಶಾಸಕ ಹರೀಶ್ ಪೂಂಜ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೇ 31ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶಾಸಕ ಹರೀಶ್ ಪೂಂಜ ಅವರ ವರ್ತನೆಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತಲ್ಲದೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು. ಜೂನ್ 7ರಂದು ಎರಡನೇ ಬಾರಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ಅರ್ಜಿಯ ವಿಚಾರಣೆ ನಡೆಸಿದ್ದ ವೇಳೆ ಶಾಸಕ ಹರೀಶ್ ಪೂಂಜ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಅವರು ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಕಕ್ಷಿದಾರರಿಗೆ ಅನಗತ್ಯ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹೆಚ್ಚುವರಿ ಸರಕಾರಿ ಅಭಿಯೋಜಕರು ಪ್ರಕರಣದಲ್ಲಿ ಅರ್ಜಿದಾರ ಆರೋಪಿಯನ್ನು ವಿಚಾರಣೆಗಾಗಿ ಮತ್ತು ಸಾಕ್ಷಿ ಸಂಗ್ರಹಕ್ಕಾಗಿ ಪೊಲೀಸರು ಠಾಣೆಗೆ ಕರೆದಿದ್ದಾರೆ ಹೊರತು ಬೇರೆ ಯಾವುದೇ ದುರುದ್ದೇಶ ಇಲ್ಲ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿದಾರರನ್ನು ಬಂಧಿಸುವ ಅಥವಾ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಮಾಡದಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿದ್ದರು. ಜೂನ್ ೨೮ರಂದು ನ್ಯಾಯಮೂರ್ತಿಗಳು ನೀಡುವ ತೀರ್ಪು ಮುಂದಿನ ಬೆಳವಣಿಗೆಯನ್ನು ನಿರ್ಧರಿಸಲಿದೆ.
ಸಮನ್ಸ್ ಜಾರಿಯಾದವರ ಹೆಸರು: ಮೇ 18ರಂದು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಇತರರ ವಿರುದ್ಧ ಐಪಿಸಿ 143, 147, 341, 353, 506ರಡಿ ಕೇಸ್ ದಾಖಲಾಗಿ ಚಾರ್ಚ್‌ಶೀಟ್‌ನಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿರುವ ಹರೀಶ್ ಪೂಂಜ ಗರ್ಡಾಡಿ, ರಾಜೇಶ್ ಎಂ.ಕೆ. ನಿಡ್ಡಾಜೆ ಕಳೆಂಜ, ಜಗದೀಶ ಕನ್ನಾಜೆ ಲಾಯಿಲ, ಚಂದ್ರಹಾಸ ದಾಸ್ ಬದ್ಯಾರು ಕುವೆಟ್ಟು, ಪ್ರಕಾಶ್ ಆಚಾರಿ ಕೈಪುಲೋಡಿ ಲಾಯಿಲ, ಸಂದೀಪ್ ರೈ ಮುಂಡ್ರುಪ್ಪಾಡಿ ಧರ್ಮಸ್ಥಳ, ನಿತೇಶ್ ಶೆಟ್ಟಿ ಕೆಂಚೊಟ್ಟು ಓಡಿಲ್ನಾಳ, ಪವನ್ ಶೆಟ್ಟಿ ಅಜಿತ್ ನಗರ ಉಜಿರೆ, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಪ್ರದೀಪ್ ಶೆಟ್ಟಿ ಪಾಡ್ಯಾರ ಮಜಲು ಬರಾಯ ಕುವೆಟ್ಟು, ರಂಜಿತ್ ಶೆಟ್ಟಿ ಮದ್ದಡ್ಕ, ರಿಜೇಶ್ ಮಂದಾರಗಿರಿ ಶಿವಾಜಿನಗರ ಕುವೆಟ್ಟು, ಅವಿನಾಶ್ ಮಂದಾರಗಿರಿ ಶಿವಾಜಿನಗರ ಕುವೆಟ್ಟು, ಸೂರ್ಯಚಂದ್ರ ಪ್ರಸಾದ್ ಯಾನೆ ಚಂದನ್ ಕಾಮತ್ ಅಜಕುರಿ ಧರ್ಮಸ್ಥಳ, ಸಂತೋಷ್ ಕುಮಾರ್ ಜೈನ್ ಕನ್ನಡಿಕಟ್ಟೆ ಪಡಂಗಡಿ, ಪುಷ್ಪರಾಜ್ ಶೆಟ್ಟಿ ಶಕ್ತಿನಗರ ಕುವೆಟ್ಟು, ಶ್ರೀನಿವಾಸ ರಾವ್ ದೊಂಡೋಳೆ ಧರ್ಮಸ್ಥಳ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೆಲು, ಗಣೇಶ್ ಲಾಯಿಲ, ವಾಸು ಪಡ್ಲಾಡಿ, ವಿಠಲ ಆಚಾರ್ಯ ಬರಾಯ ಕುವೆಟ್ಟು, ಗಣೇಶ್ ಕೆ.ಕೊಡಪತ್ತಾಯ ಸಾಮೆದಕಲಪು ಪುದುವೆಟ್ಟು, ವಿಕಾಸ್ ಶೆಟ್ಟಿ ಗುರುವಾಯನಕೆರೆ ಕುವೆಟ್ಟು, ರವಿನಂದನ್ ನಟ್ಟಿಬೈಲು, ಉಪ್ಪಿನಂಗಡಿ, ಸುಖೇಶ್ ಪುದ್ದ ಕಡಿಯೇಲು, ಮೇಲಂತಬೆಟ್ಟು, ನವೀನ್ ಕುಲಾಲ್ ಶಿವಾಜಿನಗರ ಗುರುವಾಯನಕೆರೆ ಕುವೆಟ್ಟು, ಪದ್ಮನಾಭ ಶೆಟ್ಟಿ ಹಲ್ಲಂದೋಡಿ ಪಡಂಗಡಿ ಮತ್ತು ಶಂಕರ ಸಪಲ್ಯ ಗುಂಪಲಾಜೆ ದರ್ಕಾಸು ಪಣೆಜಾಲು ಎಂಬವರಿಗೆ ಸಮನ್ಸ್ ಜಾರಿಯಾಗಿದೆ.
ಮೇ ೨೦ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಮತ್ತು ಇತರರ ವಿರುದ್ಧ ೧೪೩, ೧೪೭, ೩೪೧, ೫೦೪, ೫೦೬ರಡಿ ಕೇಸ್ ದಾಖಲಾಗಿ ಚಾರ್ಚ್‌ಶೀಟ್‌ನಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿರುವ ಹರೀಶ್ ಪೂಂಜ ಗರ್ಡಾಡಿ, ಜಯಾನಂದ ಗೌಡ ಕುತ್ಯಾರು, ರಾಜೇಶ್ ಎಂ.ಕೆ. ಕಳೆಂಜ, ನವೀನ್ ನೆರಿಯ, ಚಂದ್ರಹಾಸ ಕಾವು, ಜಗದೀಶ್ ಲಾಯಿಲ, ಗಿರೀಶ್ ಡೊಂಗ್ರೆ ಲಾಯಿಲ, ಉಮೇಶ್ ಕುಲಾಲ್ ಕುವೆಟ್ಟು, ಯಶವಂತ ಗೌಡ ಬೆಳಾಲು, ದಿನೇಶ್ ಪೂಜಾರಿ ಚಾರ್ಮಾಡಿ, ಶಶಿಧರ್ ಕಲ್ಮಂಜ, ಗಣೇಶ್ ಕೆ.ಪುದುವೆಟ್ಟು, ರವಿನಂದನ್ ನಟ್ಟಿಬೈಲು ಉಪ್ಪಿನಂಗಡಿ, ರಂಜಿತ್ ಶೆಟ್ಟಿ ಮದ್ದಡ್ಕ, ಅವಿನಾಶ್ ಗುರುವಾಯನಕೆರೆ, ರಿಜೇಶ್ ಗುರುವಾಯನಕೆರೆ, ಸುಧೀರ್ ಚಾರ್ಮಾಡಿ, ಪದ್ಮನಾಭ ಶೆಟ್ಟಿ ಪಡಂಗಡಿ, ಶಂಕರ ಸಪಲ್ಯ ಗುಂಪಲಾಜೆ, ಸುಖೇಶ್ ಮೇಲಂತಬೆಟ್ಟು, ನವೀನ್ ಕುಲಾಲ್ ಗುರುವಾಯನಕೆರೆ, ವಿಕಾಸ್ ಶೆಟ್ಟಿ ಗುರುವಾಯನಕೆರೆ, ಸಂತೋಷ್ ಕುಮಾರ್ ಕನ್ನಡಿಕಟ್ಟೆ, ಸೂರ್ಯಚಂದ್ರ ಧರ್ಮಸ್ಥಳ, ಪ್ರದೀಪ್ ಶೆಟ್ಟಿ ಕುವೆಟ್ಟು, ಪುಷ್ಪರಾಜ್ ಶೆಟ್ಟಿ ಶಕ್ತಿನಗರ, ರಾಜ್ ಪ್ರಕಾಶ್ ಶೆಟ್ಟಿ ಓಡಿಲ್ನಾಳ, ವಿಠಲ ಆಚಾರ್ಯ ಕುವೆಟ್ಟು, ಶ್ರೀನಿವಾಸ ರಾವ್ ಧರ್ಮಸ್ಥಳ, ಗಣೇಶ್ ಲಾಯಿಲ, ರಂಜಿತ್ ಶೆಟ್ಟಿ ಮಲವಂತಿಗೆ, ರತನ್ ಶೆಟ್ಟಿ ಮಲವಂತಿಗೆ, ಪ್ರಕಾಶ್ ಆಚಾರಿ ಲಾಯಿಲ, ನಿತೇಶ್ ಶೆಟ್ಟಿ ಓಡಿಲ್ನಾಳ, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಸಂದೀಪ್ ರೈ ಧರ್ಮಸ್ಥಳ, ಪವನ್ ಶೆಟ್ಟಿ ಉಜಿರೆ, ಶ್ರೀರಾಜ್ ಶೆಟ್ಟಿ ಗುರುವಾಯನಕೆರೆ ಮತ್ತು ಭರತ್ ಶೆಟ್ಟಿ ಅರಸಿನಮಕ್ಕಿ ಎಂಬವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.