ಬೆಳ್ತಂಗಡಿ: ಜೂನ್ ೩ರಂದು ನಡೆಯಲಿರುವ ನೈರುತ್ಯ ಪದವೀಧರರ ಮತ್ತ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬೆಳ್ತಂಗಡಿ ಸಜ್ಜುಗೊಂಡಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ೧೦ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೮ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಜೂನ್ ೩ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿಯ ಮೂರು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಪದವೀಧರರಿಗೆ ಎರಡು ಮತಗಟ್ಟೆ ಹಾಗೂ ಶಿಕ್ಷಕರಿಗೆ ಒಂದು ಮತಗಟ್ಟೆಯ ವ್ಯವಸ್ಥೆ ಮಾಡಲಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿ ೬೮೬ ಪುರುಷರು ಮತ್ತು ೮೫೭ ಮಹಿಳೆಯರು ಸೇರಿದಂತೆ ಒಟ್ಟು ೧೫೪೩ ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ೩೭೦ ಪುರುಷರು ಮತ್ತು ೫೦೮ ಮಹಿಳೆಯರು ಸೇರಿದಂತೆ ಒಟ್ಟು ೮೭೮ ಮತದಾರರಿದ್ದಾರೆ. ಪೊಲೀಸ್ ಬಂದೋಬಸ್ತ್ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದೆ. ಜೂನ್ ೬ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಘೋಷಣೆಯಾಗಲಿದೆ.
ಬಿಜೆಪಿ, ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಬಂಡಾಯ ಅಭ್ಯರ್ಥಿಗಳು: ವಿಧಾನಪರಿಷತ್ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಇದು ಪ್ರತಿಷ್ಠೆಯ ಕಣವಾಗಿದೆ. ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಆಡಳಿತ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಶಕಗಳಿಂದ ಬಿಜೆಪಿಯ ಭದ್ರಕೋಟೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಸತತ ೫ ಬಾರಿ ಜಯ ಸಾಧಿಸಿದ್ದರು. ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ಆಯನೂರು ಮಂಜುನಾಥ್ ಈಗ ಪಕ್ಷ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವಮೊಗ್ಗದ ಎಸ್.ಪಿ.ದಿನೇಶ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಆಯನೂರು ಮಂಜುನಾಥ್‌ಗೆ ಮಣೆ ಹಾಕಿದೆ. ಪಕ್ಷಾಂತರ ಮಾಡಿದವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಎಸ್.ಪಿ. ದಿನೇಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದು ಕಾಂಗ್ರೆಸ್‌ಗೆ ಸವಾಲಾಗಿದೆ. ಬಿಜೆಪಿಯಿಂದ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ. ಇದನ್ನು ವಿರೋಧಿಸಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯದ ಕಹಳೆ ಮೊಳಗಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭ ಪರಿಷತ್ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ನಾಯಕರು ಈಗ ವಂಚನೆ ಮಾಡಿದ್ದಾರೆ ಎನ್ನುವುದು ರಘುಪತಿ ಭಟ್ ಅವರ ಆರೋಪವಾಗಿದೆ. ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ತಮ್ಮ ಪಕ್ಷದಿಂದ ಉಚ್ಛಾಟಿಸಿದೆ.
ಶಿಕ್ಷಕರ ಕ್ಷೇತ್ರದಲ್ಲೂ ಬಂಡಾಯ: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೊಡಗಿನ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ವರ್ಷದಿಂದ ಸಿದ್ಧತೆ ನಡೆಸಿದ್ದ ಚಿಕ್ಕಮಗಳೂರಿನ ನಂಜೇಶ್ ಬೆನ್ನೂರ್ ತೀವ್ರ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೊಡಗಿನ ಕೆ.ಕೆ.ಮಂಜುನಾಥ್ ಕುಮಾರ್ ಎನ್ನುವವರು ಪಕ್ಷೇತರ ಅಭ್ಯರ್ಥಿಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೂ ಅದೇ ಹೆಸರು ಇರುವ ಕಾರಣ ಗೊಂದಲಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲೂ ಒಳಗೆ ಸಣ್ಣಪುಟ್ಟ ಅಸಮಾಧಾನಗಳಿವೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರಿನ ಡಾ.ಎಸ್.ಆರ್. ಹರೀಶ್ ಆಚಾರ್ಯ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೯೯೪ ಮತ್ತು ೨೦೦೦ ಚುನಾವಣೆಯಲ್ಲಿ ಬಿಜೆಪಿಯ ಕೆ.ಬಾಲಕೃಷ್ಣ ಭಟ್, ೨೦೦೬ ಮತ್ತು ೨೦೧೨ರ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಜಯಭೇರಿ ಬಾರಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ಕೈ ತಪ್ಪಿತು. ಗಣೇಶ್ ಕಾರ್ಣಿಕ್ ವಿರುದ್ಧ ಜೆಡಿಎಸ್‌ನ ಎಸ್. ಎಲ್.ಭೋಜೇಗೌಡ ಜಯ ಸಾಧಿಸಿದ್ದರು. ಈ ಬಾರಿಯೂ ಅವರೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅವಕಾಶ ಪಡೆದಿದ್ದಾರೆ. ಮೈತ್ರಿಯಿಂದಾಗಿ ಬಿಜೆಪಿಯಲ್ಲಿದ್ದ ಆಕಾಂಕ್ಷಿಗಳು ನಿರಾಸೆ ಹೊಂದುವಂತಾಗಿದೆ.
ಬಿಜೆಪಿ-ಕಾಂಗ್ರೆಸ್ ಪೈಪೋಟಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರಾದ ಶಿವಮೊಗ್ಗ ವಿನೋಭನಗರ ಬನಶಂಕರಿ ನಿಲಯದ ಡಾ.ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗದ ಆಯನೂರು ಮಂಜುನಾಥ್, ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ಬಿಜೆಪಿಯ ರಘುಪತಿ ಭಟ್ ಸೇರಿದಂತೆ ೧೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ, ಹಾಲಿ ಪರಿಷತ್ ಸದಸ್ಯರಾಗಿರುವ ಚಿಕ್ಕಮಗಳೂರು ಹೊಸಮನೆ ಬಡಾವಣೆಯ ಎಸ್.ಎಲ್. ಬೋಜೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಕೂಡ್ಲಾರು ನಿವಾಸಿ ಕೆ.ಕೆ.ಮಂಜುನಾಥ ಕುಮಾರ್ ಹಾಗೂ ಬಿಜೆಪಿಯಿಂದ ಅವಕಾಶ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಂಗಳೂರು ನಾಗುರಿಯ ಡಾ|ಎಸ್.ಆರ್.ಹರೀಶ್ ಆಚಾರ್ಯ ಸೇರಿದಂತೆ ೮ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಎರಡೂ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ೪೩,೭೨೦ ಪುರುಷರು ಮತ್ತು ೪೧,೩೬೯ ಮಹಿಳೆಯರು ಹಾಗೂ ಓರ್ವ ಇತರ ಸೇರಿದಂತೆ ಒಟ್ಟು ೮೫,೦೯೦ ಮತದಾರರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೦,೪೮೭ ಪುರುಷರು ಮತ್ತು ೧೨,೯೧೫ ಮಹಿಳೆಯರು ಸೇರಿ ಒಟ್ಟು ೨೩,೪೦೨ ಮತದಾರರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡದಲ್ಲಿ ೧೬, ಕೊಡಗು-೫, ಚಿಕ್ಕಮಗಳೂರು-೧೨, ಉಡುಪಿ-೧೦, ಶಿವಮೊಗ್ಗ-೩೨ ಹಾಗೂ ದಾವಣಗೆರೆ-೪ ಸೇರಿದಂತೆ ೭೯ ಮತಟ್ಟೆಗಳನ್ನು ಸ್ಥಾಪಿಸಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡ-೨೪, ಚಿಕ್ಕಮಗಳೂರು-೧೩, ದಾವಣಗೆರೆ-೮, ಕೊಡಗು-೬, ಶಿವಮೊಗ್ಗ-೩೮, ಉಡುಪಿ-೧೯ ಸೇರಿದಂತೆ ಒಟ್ಟು ೧೦೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜೂನ್ ೧೩: ಮೇಲ್ಮನೆ ಚುನಾವಣೆ: ರಾಜ್ಯ ವಿಧಾನಸಭೆಯಿಂದ ಮೇಲ್ಮನೆಯ ೧೧ ಸ್ಥಾನಗಳ ದ್ವೈ ವಾರ್ಷಿಕ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು ಮೇ ೨೭ರಂದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಜೂ.೩ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.೪ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ ೧೩ರಂದು ಮತದಾನ ನಡೆಯಲಿದ್ದು ಅದೇ ದಿನ ಸಂಜೆ ೫ ಗಂಟೆಗೆ ಮತ ಎಣಿಕೆ ನಡೆಯಲಿದೆ. ಈ ಚುನಾವಣೆಯಲ್ಲಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧರಿಸಿ ಆಡಳಿತಾರೂಢ ಕಾಂಗ್ರೆಸ್‌ಗೆ ೭, ಪ್ರತಿಪಕ್ಷ ಬಿಜೆಪಿಗೆ ೩ ಹಾಗೂ ಜೆಡಿಎಸ್‌ಗೆ ೧ ಸ್ಥಾನ ನಿರಾಯಾಸವಾಗಿ ಸಿಗುವ ನಿರೀಕ್ಷೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಇದುವರೆಗೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ.