ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೈಸ್ಕೂಲ್ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಒಂದು ವಾರದ ಬೇಸಿಗೆ ಶಿಬಿರವು ಎಪ್ರೀಲ್ 15 ರಿಂದ ಆಯೋಜಿಸಿದ್ದು, ಇದರ ಉದ್ಘಾಟನೆಯನ್ನು ಯಸ್.ಡಿ.ಯಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಯಸ್ ಸತೀಶ್ಚಂದ್ರ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಯು ತನ್ನ ಸಾಮರ್ಥ್ಯ, ಬುದ್ಧಿಮತ್ತೆ, ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ತನ್ನ ಉನ್ನತ ಶಿಕ್ಷಣ ಆಯ್ಕೆ ಮಾಡಿದರೆ ಉತ್ತಮ ಭವಿಷ್ಯ ಸಾಧ್ಯ ಎಂದು ನುಡಿದರು.
ಇಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾದ್ಯಾಪಕರಾದ ಮಹೇಶ್ ಸ್ವಾಗತಿಸಿ, ಈ ಶಿಬಿರದಲ್ಲಿ ಕಂಪ್ಯೂಟರ್ ಅಸೆಂಬ್ಲಿಂಗ್,ಇಲೆಕ್ಟ್ರಾನಿಕ್ಸ್, ಸೌರಶಕ್ತಿ ಉತ್ಪಾದನೆ ಮುಂತಾದ ತಂತ್ರಜ್ಞಾನ ವಿಷಯಗಳೊಂದಿಗೆ ಬೌದ್ಧಿಕ ಮತ್ತು ಕೌಶಲ್ಯಾಭಿವೃದ್ದಿ ವಿಷಯಗಳು, ಐಡಿಯಾ ಜನರೇಶನ್,ಪ್ರಾಜೆಕ್ಟ್ ತಯಾರಿ, ಕಾರ್ಯಕ್ರಮ ನಿರ್ವಹಣೆ, ಕ್ರೀಡೆ, ಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ಉಪಸ್ಥಿತರಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾದ್ಯಾಪಕರಾದ ರಘುವೀರ್ ಪಂಡಿತ್ ಕೃತಜ್ಙತೆ ಸಲ್ಲಿಸುತ್ತಾ ಗೌರವಾನ್ವಿತ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್‌ರವರ ಶುಭಾಶಯಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.