ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ವಾಣಿಜ್ಯ ಸಂಘ ಮತ್ತು ಐಕ್ಯುಎಸಿ ವತಿಯಿಂದ ಇಂದು ಹಳ್ಳಿ ಸಂತೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರಾಘವ ಎನ್ ಉದ್ಘಾಟಿಸಿದರು.
ಹಳ್ಳಿ ಸಂತೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಮಾಡಿದ ವಸ್ತುಗಳು ಹಾಗೂ ಸ್ಥಳೀಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವ ತರಕಾರಿ ಸೊಪ್ಪುಗಳ ತಿಂಡಿ ತಿನಿಸುಗಳ ಮಾರಾಟವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ ಒಂದು ವ್ಯವಹಾರವನ್ನು ನಡೆಸಲು ಬೇಕಾಗುವ ಉದ್ಯಮಶೀಲತ್ವವನ್ನು ಬೆಳೆಸುವ ದೃಷ್ಟಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಸುಬ್ರಹ್ಮಣ್ಯ ಕೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ ನಿಕಟ ಪೂರ್ವ ಪ್ರಾಂಶುಪಾಲ ಡಾ.ಶರತ್ ಕುಮಾರ್ ಟಿ.ಕೆ., ಹಾಗೂ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಪದ್ಮನಾಭ ಇವರು ಸ್ವಾಗತಿಸಿ, ಪ್ರೊಫೆಸರ್ ಸುರೇಶ್ ವಿ ಇವರು ವಂದನಾರ್ಪಣೆ ಮಾಡಿದರು.