ಉಜಿರೆ: ಪೆರ್ಲ ತಂಗಾಯಿ ಶ್ರೀ ವನದುರ್ಗ ಮಹೋತ್ಸವವು ಫೆ.4ರಂದು ಅನುವಂಶಿಕ ಆಡಳಿತ ಮೊಕ್ತೇಸರ ಪೆರ್ಲ ಲಕ್ಷ್ಮೀನಾರಾಯಣ ಒಪ್ಪಂತಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಹಾಗು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.
ಬೆಳಿಗ್ಗೆ ಪುಣ್ಯಾಹ, ಪ್ರಾರ್ಥನೆ, ಗಣಹೋಮ ಹಾಗು ವೇದಮೂರ್ತಿ ಈಶ್ವರ ಪರ್ಲತ್ತಾಯ ಅವರ ಪೌರೋಹಿತ್ಯದಲ್ಲಿ ಚಂಡಿಕಾ ಹೋಮ ನಡೆಯಿತು.
ಕೊಪ್ಪರಿಗೆ ಏರುವ ಮೂಲಕ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು.ಬೆಳಿಗ್ಗೆ ವೈದಿಕರಿಂದ ಸ್ತೋತ್ರ ಪಾರಾಯಣ, ವಿಶೇಷ ಪೂಜೆಗಳ ಸೇವೆ ಹಾಗು ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮದ್ಯಾಹ್ನ ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ ಹಾಗು ಸಾರ್ವಜನಿಕ ಅನ್ನಸಂತರ್ಪಣೆ, ಮಂತ್ರಾಕ್ಷತೆ ನಡೆಯಿತು.
ಸಂಜೆ ಶ್ರೀ ವನದುರ್ಗ ಸನ್ನಿಧಿಯಲ್ಲಿ ದೀಪಾರಾಧನೆ, ರಾತ್ರಿ ಪೂಜೆ ಹಾಗು ರಂಗಪೂಜೆ,ಬಟ್ಟಲು ಕಾಣಿಕೆ ಹಾಗು ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿತು.
ಪಿ.ಎಸ್.ಕೃಷ್ಣಮೂರ್ತಿ ಒಪ್ಪಂತಾಯ ಅವರ ನೇತೃತ್ವದಲ್ಲಿ ಭಕ್ತಾದಿಗಳಿಂದ ವಿವಿಧ ಸೇವೆಗಳು ನಡೆಯಿತು.
ಸುಂದರ ಪ್ರಕೃತಿ ಪರಿಸರದ ನಡುವೆ ನೆಲೆನಿಂತಿರುವ ಶ್ರೀ ವನದುರ್ಗ ದೇವಿಯ ವಾರ್ಷಿಕ ಮಹೋತ್ಸವ ದಲ್ಲಿ ಪರಿಸರದ ನೂರಾರು ಭಕ್ತಾದಿಗಳು ಭಕ್ತಿ,ಶ್ರದ್ಧೆಯಿಂದ ಭಾಗವಹಿಸಿ, ಪೂಜೆ, ಸೇವೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.ಶ್ರೀ ವನದುರ್ಗ ಸನ್ನಿಧಿಯನ್ನು ವಿಶೇಷವಾಗಿ ಪುಷ್ಪ ಹಾಗು ವಿದ್ಯುದ್ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು.