ಬೆಳ್ತಂಗಡಿ: ಕಣಿಯೂರು ಗ್ರಾಮದಲ್ಲಿ ಸರಕಾರಿ ಜಮೀನು ಕಬಳಿಸುವ ಭೂಮಾಫಿಯಾ ತಲೆ ಎತ್ತಿದೆಯೇ ಎಂದು ಸಾರ್ವಜನಿಕರಿಂದ ಪ್ರಶ್ನೆ ಎದುರಾಗಿದೆ. ತಾಲೂಕು ದಂಡಾಧಿಕಾರಿಯಾಗಿರುವ ತಹಶಿಲ್ದಾರರ ಸೂಚನೆಗೂ ಬೆಲೆ ಕೊಡದೆ ಅಕ್ರಮ ಕಾಮಗಾರಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಅಕ್ರಮ ಕಾಮಗಾರಿ ಕುರಿತು ದೂರು ನೀಡಿದವರ ಮನೆ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಕಣಿಯೂರು ಗ್ರಾಮದ ಸರ್ವೆ ನಂ.228ರಲ್ಲಿ ಸರಕಾರಿ ಜಾಗವನ್ನು ಸ್ನೇಹಲತಾ, ರೋಹಿತ್ ಶೆಟ್ಟಿ ಮತ್ತು ಜೆ.ಸಿ.ಬಿ. ಮಾಲಕ ಶರತ್ ಎಂಬವರು ಅತಿಕ್ರಮಿಸುತ್ತಿರುವುದನ್ನು ಕಂಡು ಸ್ಥಳೀಯರು ಬೆಳ್ತಂಗಡಿ ತಹಶೀಲ್ದಾರರಿಗೆ ದೂರು ನೀಡಿದ್ದರು.ಇದರಿಂದ ಆಕ್ರೋಶಗೊಂಡ ಅತಿಕ್ರಮಿಗಳು ದೂರುದಾರರ ಮನೆಗೆ ಹಲವು ವರ್ಷಗಳಿಂದ ಇದ್ದ ಸಂಪರ್ಕ ರಸ್ತೆಗೆ 2017 ರಿಂದ ಬೆಳ್ತಂಗಡಿ ನ್ಯಾಯಾಲಯದ ಯಥಾಸ್ಥಿತಿ ಆದೇಶ ನೀಡಿದ್ದರೂ ಕಾನೂನು ಬಾಹಿರವಾಗಿ ರಸ್ತೆಯನ್ನು ಅಗೆದು ಮಣ್ಣು ತುಂಬಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದೆ ಎಂದು ದೂರು ನೀಡಲಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮಣಿ, ಕಣಿಯೂರು ಗ್ರಾಮ ಆಡಳಿತಾಧಿಕಾರಿ ಉಷಾ, ಗ್ರಾಮ ಸಹಾಯಕ ಬಾಲಕೃಷ್ಣ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಜೇಶ್ ಮತ್ತು ಸಿಬ್ಬಂದಿಗಳು ರಸ್ತೆ ತಡೆ ಮಾಡಿರುವುದನ್ನು ತೆರವುಗೊಳಿಸಿದ್ದರು.ಆದರೆ ಇದೀಗ ಮತ್ತೆ ಇದೇ ಸ್ಥಳದಲ್ಲಿ ಅಕ್ರಮ ಕಾಮಗಾರಿ ಕಂಡು ಬಂದಿದೆ ಎಂದು ದೂರು ವ್ಯಕ್ತವಾಗಿದೆ.