


ಮಡಂತ್ಯಾರು: ವಿದ್ಯಾರ್ಥಿಗಳಿಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.ಇವುಗಳನ್ನು ಬದಿಗಿಟ್ಟು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆಯಲು ಸಾಧ್ಯ.ದೈಹಿಕ ವ್ಯಾಯಾಮದಿಂದ ಸದೃಢರಾಗಲು ಸಹಕಾರಿ ಎಂದು ಅಂತಾರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ವಿಜೇತ ರೋಶನ್ ಫೆರಾವೊ ಹೇಳಿದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ 41ನೇ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಮುನ್ನುಗ್ಗಲು ವಿದ್ಯಾರ್ಥಿ ಜೀವನದ ಆಟೋಟ ಸ್ಪರ್ಧೆಗಳು ಅತೀ ಪ್ರಮುಖವಾದದ್ದು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ| ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿದ್ದರು.
ಅಂತಾರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತೆ ಸಿಲ್ವೇನಿಯಾ ಪಾಯ್ಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರುಗಳಾದ ಲಿಯೋ ರೋಡ್ರಿಗಸ್, ವಿನೋದ್ ರಾಕೇಶ್ ಡಿಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ವಂ|ಜೆರೊಮ್ ಡಿಸೋಜ ಸ್ವಾಗತಿಸಿ, ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮೋಹನ್ ನಾಯಕ್ ವಂದಿಸಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ರೋಶನ್ ಫೆರಾವೊ ಹಾಗೂ ಸಿಲ್ವೇನಿಯಾ ಪಾಯ್ಸ್ ಅವರನ್ನು ಸನ್ಮಾನಿಸಲಾಯಿತು.ಕ್ರೀಡಾ ಕಾರ್ಯದರ್ಶಿ ಮುರಳಿ ಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.ಉಪನ್ಯಾಸಕ ವಸಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.