ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವತಿಯಿಂದ ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ 69 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 15 .15 ಲಕ್ಷ ರೂ.ಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ನ.25ರಂದು ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ವಿದ್ಯಾರ್ಥಿಗಳು ವಿದ್ಯಾವಂತರಾಗಿ, ವಿಚಾರವಂತರಾಗಿ, ಆಚಾರವಂತರಾಗಿ ನಡೆಯುವ ಗುಣಗಳನ್ನು ಅರಿತುಕೊಂಡು ಮುಂದುವರಿದರೆ ಸಾರ್ಥಕತೆ ಮೂಡುತ್ತದೆ.ವಿದ್ಯೆಯ ಜತೆ ಪ್ರತಿಭೆಯೂ ಇರಬೇಕು.ಪ್ರತಿಯೊಬ್ಬರೂ ತಮ್ಮ ಕಾಲ ಮೇಲೆ ತಾವು ನಿಲ್ಲುವ ಪ್ರಯತ್ನ ಮಾಡಿ ಬೆಳೆಯಬೇಕು.ನಮ್ಮಲ್ಲಿರುವ ಪ್ರತಿಭೆಯ ಬಗ್ಗೆ ಕೀಳರಿಮೆ ಸಲ್ಲದು.ನಮ್ಮ ಪ್ರತಿಭೆ ಅನಾವರಣಗೊಂಡಾಗ ಅವಕಾಶಗಳು ಹೆಚ್ಚುತ್ತವೆ.ಯುವ ಜನತೆ ರಸ್ತೆ ಸಂಚಾರ ನಿಯಮಗಳನ್ನು ಅಗತ್ಯ ಪಾಲಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಪತ್ರಕರ್ತ ಲಕ್ಷ್ಮಿ ಮಚ್ಚಿನ ಮಾತನಾಡಿ ಶಿಕ್ಷಣದಷ್ಟೇ ಬದುಕಿನಲ್ಲಿ ಅನುಭವವೂ ಅಷ್ಟೇ ಮುಖ್ಯ. ವಿದ್ಯೆಯ ಪ್ರಮಾಣ ಪತ್ರಗಳಿಗಿಂತ ಗಳಿಸುವ ಅನುಭವವೂ ಮುಖ್ಯ.ಸ್ವಾರ್ಥವಿಲ್ಲದೆ ಕೆಲಸ ಮಾಡುವವರು ನಾಯಕರಾಗಿ ಇತರರಿಗೆ ಆದರ್ಶ ಮಾದರಿಯಾಗುತ್ತಾರೆ.ಪ್ರತಿಯೊಬ್ಬರ ಬದುಕಿಗೆ ಪ್ರೇರಣೆ ನೀಡುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜನೋಪಯೋಗಿ, ಜನೋಪಕಾರಿ ಸೇವಾ ಕ್ಷೇತ್ರಗಳ ವಿಸ್ತರಣೆ, ಯೋಚನೆ, ಯೋಜನೆಗಳು ಜನರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗುತ್ತಿವೆ,.ಪದವಿ ಪೂರ್ವ ಶಿಕ್ಷಣ ಜೀವನದಲ್ಲಿ ಮುಂದೆ ಏನಾಗಬೇಕೆಂದು ನಿರ್ಧರಿಸುವ ನಿರ್ಣಾಯಕ ಘಟ್ಟವಾಗಿದೆ ಎಂದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾ ರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಉಪಸ್ಥಿತರಿದ್ದರು. ಎಸ್.ಡಿ.ಎಂ.ಪ.ಪೂ. ಕಾಲೇಜು ಪ್ರಾಂಶುಪಾಲ ಪ್ರಮೋದ್ ಕುಮಾರ್ ಸ್ವಾಗತಿಸಿದರು.ಉಪಪ್ರಾಂಶುಪಾಲ ಡಾ.ರಾಜೇಶ್ ಬಿ. ವಂದಿಸಿದರು.ಜೀವಶಾಸ್ತ್ರ ಉಪನ್ಯಾಸಕ ದೀಕ್ಷಿತ್ ರೈ, ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಶೇ.95 ಕ್ಕಿಂತ ಅಧಿಕ ಅಂಕ ಪಡೆದು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 69 ವಿದ್ಯಾರ್ಥಿಗಳಿಗೆ ಒಟ್ಟು 15,15,100 ರೂ.ವಿದ್ಯಾರ್ಥಿವೇತನ ವಿತರಿಸಲಾಯಿತು.ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.