ಬಜಿರೆಯ ಬಡಾರು ಕೊರಗಜ್ಜನ ಕಟ್ಟೆಯ ವಿವಾದ: ಡಿ.ಸಿ. ಮಧ್ಯಪ್ರವೇಶ

0

ಬೆಳ್ತಂಗಡಿ: ವೇಣೂರು ಹೋಬಳಿಯ ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿನಲ್ಲಿರುವ ಕೊರಗಜ್ಜನ ಕಟ್ಟೆಯ ವಿವಾದವನ್ನು ಪರಿಹರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ನ.೧೫ರಂದು ಬೆಳ್ತಂಗಡಿಯಲ್ಲಿ ವಿಶೇಷ ಸಭೆ ನಡೆಯಿತು. ಕೊರಗಲ್ಲುವಿನ ಕೊರಗಜ್ಜನ ಕಟ್ಟೆಯ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಡಿ.ಸಿ. ಮುಲೈ ಮುಗಿಲನ್ ಮತ್ತು ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ವಿವಾದಿತ ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಈ ಹಿಂದೆ ಬಾಡಾರು ಕುಟುಂಬಸ್ಥರು ಮತ್ತು ಸಾರ್ವಜನಿಕರು ಪೂಜಿಸುತ್ತಿದ್ದ ಸ್ಥಳಕ್ಕೆ ಮತ್ತು ಇತ್ತೀಚೆಗೆ ನಿರ್ಮಿಸಲಾದ ಮತ್ತೊಂದು ಕಟ್ಟೆಯ ಸ್ಥಳವನ್ನು ವೀಕ್ಷಣೆ ಮಾಡಿದರು. ಈ ವೇಳೆ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಬೆಳ್ತಂಗಡಿಯ ಆಡಳಿತ ಸೌಧದಲ್ಲಿರುವ ಸಭಾಂಗಣದಲ್ಲಿ ಆಯ್ದ ಜನರ ಸಭೆ ನಡೆಸಲು ನಿರ್ಧರಿಸಿದರು. ಅದರಂತೆ ಸಂಜೆ ಸಭೆ ನಡೆಯಿತು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಗಿರೀಶ್ ನಂದನ್, ತಹಶೀಲ್ದಾರ್ ಸುರೇಶ್ ಕುಮಾರ್, ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಪ್ರತಾಪಸಿಂಗ್ ತೋರಟ್, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಬಳಂಜ, ಡಾ. ರಾಜೇಶ್, ಕಾಂಗ್ರೆಸ್ ಮುಖಂಡರಾದ ಧರಣೇಂದ್ರ ಕುಮಾರ್, ನಿತೇಶ್ ವೇಣೂರು, ಪ್ರದೀಪ್ ಹೆಗ್ಡೆ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.

ಬಜಿರೆ ಗ್ರಾಮದವರಿಗೆ ಮಾತ್ರ ಸಭೆಗೆ ಅವಕಾಶ-ಸಭೆಯಿಂದ ಹೊರ ಹೋಗಲು ಮಾಧ್ಯಮದವರಿಗೆ ಮನವಿ: ಜಿಲ್ಲಾಧಿಕಾರಿಯವರ ಸೂಚನೆಯಂತೆ ಬಾಡಾರು ಕುಟುಂಬಸ್ಥರು ಮತ್ತು ಸಾರ್ವಜನಿಕರು ಬೆಳ್ತಂಗಡಿ ಆಡಳಿತ ಸೌಧದ ಸಭಾಂಗಣದಲ್ಲಿ ಸೇರಿದ್ದರು. ಈ ಸಭೆಗೆ ಆಗಮಿಸಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಈ ಸಭೆಯಲ್ಲಿ ಬಾಡಾರು ಕುಟುಂಬಸ್ಥರು ಮತ್ತು ಬಜಿರೆಯ ಗ್ರಾಮಸ್ಥರು ಮಾತ್ರ ಭಾಗಿಯಾಗಬೇಕು. ಉಳಿದವರು ಸಭಾಂಗಣದಿಂದ ಹೊರಗೆ ಹೋಗಬೇಕು. ನಂತರ ನಿಮ್ಮೆಲ್ಲರ ಮಾತು ಆಲಿಸುತ್ತೇನೆ ಎಂದರು. ಈ ವೇಳೆ ಕೊಂಚ ಗೊಂದಲ ಉಂಟಾದರೂ ಎರಡೂ ಕಡೆಯವರಿಂದ ಕೆಲವರು ಸಭಾಂಗಣದಿಂದ ಹೊರ ಬಂದರು. ಈ ವೇಳೆ ಮಾಧ್ಯಮದವರು ಕೂಡ ಸಭೆಯಿಂದ ಹೊರ ಹೋಗುವಂತೆ ಡಿ.ಸಿ. ಮನವಿ ಮಾಡಿದರು. ಬಳಿಕ ಮಾಧ್ಯಮದವರು ಹೊರ ಬಂದರು. ಸಭೆ ಮುಗಿದ ನಂತರ ಜಿಲ್ಲಾಧಿಕಾರಿಯವರು ಸಭೆಯಲ್ಲಿ ನಡೆದ ನಿರ್ಣಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಬಾಗಿಲು ಹಾಕಿ ೧ ಗಂಟೆಗೂ ಹೆಚ್ಚುಕಾಲ ನಡೆಯಿತು ಸಭೆ: ಎರಡೂ ಬಣದವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾಧಿಕಾರಿ ಸಭೆ ನಡೆಸಿದರು. ಯಾವುದೇ ಕಾರಣಕ್ಕೂ ತೊಂದರೆಗಳು ಆಗಬಾರದು, ಚರ್ಚೆ ಗೊಂದಲ ಉಂಟಾಗಬಾರದು ಎಂದು ಸಭಾಂಗಣದ ಬಾಗಿಲು ಹಾಕಿ ಡಿ.ಸಿ. ಸಭೆ ನಡೆಸಿದರು. ಎರಡೂ ಕಡೆಯವರ ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬಂದರು.
ಜನವರಿಯಲ್ಲಿ ನಡೆಯುವ ಜಾತ್ರೆಗಾಗಿ ತಹಶೀಲ್ದಾರ್ ನೇತೃತ್ವದ ಸಮಿತಿ: ಬಜಿರೆಯ ಕೊರಗಜ್ಜನ ಜಾತ್ರಾ ಮಹೋತ್ಸವ ಜನವರಿ ೫ ಮತ್ತು ೬ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ ಡಿ.ಸಿ.ಯವರು ಜಾತ್ರಾ ಮಹೋತ್ಸವದ ಆಯೋಜನೆಗಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚಿಸುವ ತೀರ್ಮಾನಕ್ಕೆ ಬಂದರು. ಇದಕ್ಕೆ ಬಾಡಾರು ಕುಟುಂಬಸ್ಥರು ಮತ್ತು ಸಾರ್ವಜನಿಕರು ಒಪ್ಪಿಗೆ ಸೂಚಿಸಿದರು. ಬಳಿಕ ಸಭೆ ಮುಕ್ತಾಯಗೊಳಿಸಲಾಯಿತು.
ಬಾಂಡ್ ಪಡೆದು ಎರಡೂ ಬಣದಿಂದ ತಲಾ ಇಬ್ಬರಿಗೆ ಸದಸ್ಯತ್ವ: ಯಾವುದೇ ಗೊಂದಲಗಳು ಉಂಟಾಗಬಾರದು. ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ತಹಶೀಲ್ದಾರ್ ನೇತೃತ್ವದ ತಾತ್ಕಾಲಿಕ ಸಮಿತಿಯಲ್ಲಿ ಸಾರ್ವಜನಿಕರ ಪರವಾಗಿ ಇಬ್ಬರು, ಬಾಡಾರು ಕುಟುಂಬಸ್ಥರ ಪರವಾಗಿ ಇಬ್ಬರ ಬಾಂಡ್ ಪಡೆದು ಸದಸ್ಯರನ್ನಾಗಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಗಿದ್ದು ಇದಕ್ಕೆ ಉಭಯ ಬಣದವರು ಒಪ್ಪಿಗೆ ಸೂಚಿಸಿದರು.
ತಹಶೀಲ್ದಾರ್‌ಗೆ ಡಿ.ಸಿ. ತರಾಟೆ: ಸಭಾಂಗಣದಲ್ಲಿ ಸೇರಿದ್ದವರನ್ನು ಚದುರಿಸುವ ಸಲುವಾಗಿ ತಹಶೀಲ್ದಾರ್ ಸುರೇಶ್ ಕುಮಾರ್ ಕೊಟ್ಟ ಸೂಚನೆಯ ಬಗ್ಗೆ ಅಸಮಾಧಾನಗೊಂಡ ಡಿಸಿ ಮುಲ್ಲೈ ಮುಗಿಲನ್ ಅವರು ತಹಶೀಲ್ದಾರ್‌ರವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಬಜಿರೆ ಗ್ರಾಮಸ್ಥರನ್ನು ಮಾತ್ರ ಸಭಾಂಗಣದಲ್ಲಿ ಇರುವಂತೆ ಸೂಚಿಸಿದ ಡಿ.ಸಿ. ಬಳಿಕ ಸಭೆ ನಡೆಸಿದರು.

ಕೌಂಟರ್ ಕೇಸ್ ದಾಖಲಾಗಿತ್ತು ಸರ್ವೆ ಕಾರ್ಯ ನಡೆದಿತ್ತು: ಬಜಿರೆ ಗ್ರಾಮದ ಬಡಾರು ಕೊರಗಲ್ಲುವಿನಲ್ಲಿರುವ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಈ ಹಿಂದೆ ಕೌಂಟರ್ ಕೇಸ್ ದಾಖಲಾಗಿತ್ತು. ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ದಾಖಲಾಗಿದ್ದ ಪ್ರಥಮ ಎಫ್‌ಐಆರ್‌ನಲ್ಲಿ ಐವರ ವಿರುದ್ಧ ಕೇಸು ದಾಖಲಿಸಿಕೊಂಡು ಓರ್ವನನ್ನು ಬಂಧಿಸಲಾಗಿತ್ತು. ಮತ್ತೊಂದು ಎಫ್‌ಐಆರ್‌ನಲ್ಲಿ ೧೩ ಮಂದಿಯ ವಿರುದ್ಧ ಕೇಸು ದಾಖಲು ಮಾಡಲಾಗಿತ್ತು. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಸೌಮ್ಯರವರು ತನಿಖೆ ನಡೆಸಿದ್ದರು. ಬಡಾರು ಕೊರಗಲ್ಲುವಿನಲ್ಲಿರುವ ಸ್ವಾಮಿ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿದ ಘಟನೆ ಜುಲೈ ೧೧ರಂದು ಬೆಳಿಗ್ಗೆ ೧೦.೩೦ರ ವೇಳೆಗೆ ನಡೆದಿತ್ತು. ಈ ಕುರಿತು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ ನೀಡಿದ್ದ ದೂರಿನಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಬಜಿರೆ ಗ್ರಾಮದ ಬಡಾರು ನಿವಾಸಿಗಳಾದ ಹರೀಶ್ ಪೂಜಾರಿ, ಡಾ.ರಾಜೇಶ್, ರಮೇಶ್ ಕುಡ್ಮೇರು, ಓಂಪ್ರಕಾಶ್ ಮತ್ತು ಪ್ರಶಾಂತ್ ಬಂಟ್ವಾಳ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ ೪೩೬, ೧೦೯, ೨೯೫(ಎ) ಜೊತೆಗೆ ೩೪ ಐಪಿಸಿಯಡಿ ಕೇಸು ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಪ್ರಮುಖ ಆರೋಪಿ ಹರೀಶ್ ಪೂಜಾರಿಯನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಘಟನೆಯಿಂದಾಗಿ ಉದ್ವಿಗ್ನಗೊಂಡಿದ್ದ ಪರಿಸರವನ್ನು ಪುತ್ತೂರು ಡಿವೈಎಸ್‌ಪಿಯಾಗಿದ್ದು ಬಂಟ್ವಾಳ ಡಿವೈಎಸ್‌ಪಿಯಾಗಿ ಪ್ರಭಾರ ಕರ್ತವ್ಯದಲ್ಲಿದ್ದ ಡಾ.ಗಾನಾ ಪಿ. ಕುಮಾರ್ ಮತ್ತು ಎಸ್‌ಐ ಸೌಮ್ಯ ನೇತೃತ್ವದಲ್ಲಿ ಹತೋಟಿಗೆ ತರಲಾಗಿತ್ತು. ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಆಸುಪಾಸಿಗೆ ಯಾರೂ ತೆರಳದಂತೆ ನಿಷೇಧಾಜ್ಞೆ ವಿಧಿಸಿದ್ದರು. ಮತ್ತೊಂದು ಬೆಳವಣಿಗೆಯಲ್ಲಿ ಕೊರಗಲ್ಲು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಡಾ.ರಾಜೇಶ್ ಬರ್ದಿಲರವರು ನೀಡಿದ ಪ್ರತಿ ದೂರಿನಂತೆ ಧಾರ್ಮಿಕ ನಿಂದನೆ, ಜೀವ ಬೆದರಿಕೆ, ಮೋಸ ಎಸಗಿದ ಆರೋಪದಡಿ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯಶೇಖರ, ಮಹಾನಂದ ಪೂಜಾರಿ, ಹರಿಪ್ರಸಾದ್, ಮನು ಗೌಡ, ಶ್ರೀಧರ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ ಮತ್ತು ಹರೀಶ್ ಪೂಜಾರಿ ಎಂಬವರ ವಿರುದ್ಧ ಐಪಿಸಿ ೨೯೫, ೪೨೦, ೪೩೬,೫೦೬,೧೦೯,೩೪ರಂತೆ ಕೇಸು ದಾಖಲಿಸಲಾಗಿತ್ತು. ತನಿಖಾಧಿಕಾರಿಯಾಗಿದ್ದ ಎಸ್‌ಐ ಸೌಮ್ಯ ತನಿಖೆ ನಡೆಸಿದ್ದರು. ಈ ಮಧ್ಯೆ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ತಹಶೀಲ್ದಾರ್ ಸುರೇಶ್ ಕುಮಾರ್ ನೇತೃತ್ವದಲ್ಲಿ ಜಾಗದ ಸರ್ವೆ ನಡೆಸಲಾಗಿತ್ತು. ಕೊರಗಜ್ಜನ ಕಟ್ಟೆ ಇರುವ ಸ್ಥಳ ಸರಕಾರಕ್ಕೆ ಸೇರಿದ್ದು ಎಂದು ಸರ್ವೆಯಲ್ಲಿ ಗೊತ್ತಾಗಿತ್ತು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಂದಕುಮಾರ್, ವೇಣೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗಳಾದ ಸೌಮ್ಯ ಮತ್ತು ಆನಂದ ಹಾಗೂ ೨೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು. ಹೊಸದಾಗಿ ಕೊರಗಜ್ಜನ ಕಟ್ಟೆ ನಿರ್ಮಿಸಲು ಸಿದ್ಧತೆ ನಡೆಸಲಾಗಿರುವ ಜಾಗ ಸ್ಥಳೀಯರ ವರ್ಗ ಜಮೀನು ಎಂಬುದು ಸರ್ವೆಯಲ್ಲಿ ಗೊತ್ತಾಗಿತ್ತು. ಹಿಂದಿನ ಕಟ್ಟೆ ಸರಕಾರಿ ಸ್ಥಳದಲ್ಲಿದೆ ಎಂದು ಸರ್ವೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಟ್ಟೆಗೆ ತಾತ್ಕಾಲಿಕವಾಗಿ ಸರಕಾರದ ವತಿಯಿಂದಲೇ ಚಪ್ಪರ ಹಾಕಿಕೊಡಲಾಗುವುದು. ಡಿಸೆಂಬರ್‌ವರೆಗೆ ಯಾವುದೇ ಜೀರ್ಣೋದ್ಧಾರ ಕಾರ್ಯ ನಡೆಸಬಾರದು, ಒಂದು ತಿಂಗಳವರೆಗೆ ಈ ಕಟ್ಟೆಯಲ್ಲಿ ದೀಪ ಇಡಬಾರದು, ಇಚ್ಛೆ ಇದ್ದವರು ದೈವದ ಗುಡಿಗೆ ಕೈ ಮುಗಿಯಬಹುದು, ಮುಜರಾಯಿ ಇಲಾಖೆಯ ಒಪ್ಪಿಗೆ ಪಡೆದು ಮುಂದಿನ ಕಾರ್ಯ ಮಾಡಬೇಕು ಎಂದು ತಹಶೀಲ್ದಾರ್ ಸುರೇಶ್ ಕುಮಾರ್ ಸೂಚನೆ ನೀಡಿದ್ದರು. ಇದಾದ ಬಳಿಕವೂ ವಾದ ಪ್ರತಿವಾದ ಮುಂದುವರಿದಿತ್ತು. ಇದೀಗ ಅಧಿಕಾರಿಗಳ ಮಧ್ಯಪ್ರವೇಶವಾಗಿದೆ.

ಜಾತ್ರೆ ಮಾಡಲು ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ-ಬಾಂಡ್ ಪಡೆದು ತಲಾ ಇಬ್ಬರಿಗೆ ಸದಸ್ಯತ್ವ-ಡಿ.ಸಿ: ವೇಣೂರಿನ ಬಜಿರೆ ಕೊರಗಜ್ಜನಕಟ್ಟೆ ವಿಚಾರದಲ್ಲಿ ಹಲವು ಮೀಟಿಂಗ್ ಆದರೂ ಕೂಡ ಸಮಸ್ಯೆಗೆ ಬಗೆಹರಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್.ಪಿ ಮತ್ತು ನಾನು ಸ್ಥಳಕ್ಕೆ ಭೇಟಿ ನೀಡಿzವೆ. ಸಾರ್ವಜನಿಕರು ಮತ್ತು ಬಾಡಾರು ಕುಟುಂಬಸ್ಥರ ನಡುವೆ ಹೊಂದಾಣಿಕೆ ಮಾಡುವ ಉದ್ದೇಶವಾಗಿತ್ತು. ಆದ್ಯತೆಯ ಪ್ರಕಾರ ೨೦೨೪ರ ಜನವರಿ ೫ ಮತ್ತು ೬ರಂದು ಮಾಡುವ ವಾರ್ಷಿಕೋತ್ಸವಕ್ಕೆ ತಾತ್ಕಾಲಿಕ ತಂಡ ರಚನೆ ಮಾಡಲಿzವೆ. ಅದರ ಮೇಲುಸ್ತುವಾರಿಯನ್ನು ತಹಶೀಲ್ದಾರ್ ವಹಿಸಿಕೊಳ್ಳಲಿದ್ದಾರೆ. ಎರಡೂ ಕಡೆಯ ತಂಡಗಳಿಂದ ತಲಾ ಇಬ್ಬರು ಸದಸ್ಯರು ಜಾತ್ರೆ ಮಾಡಲು ಬದ್ಧರಾಗಿದ್ದೇವೆ ಎಂದು ಬಾಂಡ್ ಬರೆದು ತಾತ್ಕಾಲಿಕ ಸಮಿತಿಯಲ್ಲಿ ಸದಸ್ಯರಾಗುತ್ತಾರೆ. ಇದು ಕೇವಲ ಜಾತ್ರೆ ಮಾಡಲು ಮಾತ್ರ ಇರುವ ಸಮಿತಿ. ಈ ವಿಚಾರಕ್ಕೆ ಸಾರ್ವಜನಿಕರು ಮತ್ತು ಬಾಡಾರು ಕುಟುಂಬಸ್ಥರು ಸಹಮತ ಸೂಚಿಸಿದ್ದಾರೆ. ನಂತರ ನಮ್ಮ ಕಾನೂನು ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನು ನಾವು ಮುಂದೆ ಮಾಡಲಿದ್ದೇವೆ. ಭಿನ್ನಾಭಿಪ್ರಾಯಗಳು ಇತ್ತು. ಅದಕ್ಕಾಗಿಯೇ ತಹಶೀಲ್ದಾರ್ ನೇತೃತ್ವದಲ್ಲಿ ಆಯೋಜಕರ ತಂಡ ರಚನೆ ಮಾಡಿದ್ದೇವೆ.ಜವಾಬ್ದಾರಿ ಇರುವವರು ಮಾತ್ರ ಒಳಗೆ ಬರಲು ಬಾಂಡ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚರ್ಚೆ ಆಗಬಾರದು ಎಂಬ ಕಾರಣಕ್ಕೆ ಮಾಧ್ಯಮ ಸೇರಿದಂತೆ ಯಾರನ್ನೂ ಸಭೆಗೆ ಬಿಡಲಿಲ್ಲ. ಕೇವಲ ಎರಡೂ ತಂಡದವರನ್ನು ಮಾತ್ರ ಕರೆದು ಮಾತನಾಡಿಸಿದ್ದೇವೆ. -ಮುಲೈ ಮುಗಿಲನ್ ದ.ಕ. ಜಿಲ್ಲಾಧಿಕಾರಿ

ಡಿ.ಸಿ.ಯವರಿಂದ ನಮಗೆ ನ್ಯಾಯ ಸಿಕ್ಕಿದೆ-ಇದು ದೈವ ದೇವರ ಅನುಗ್ರಹ- ಪ್ರದೀಪ್: ಇದು ಸಾರ್ವಜನಿಕವಾ ಅಥವಾ ಕುಟುಂಬದ್ದಾ ಅನ್ನುವುದರ ಕುರಿತು ಸಮಸ್ಯೆಯಾಗಿತ್ತು.ತಹಶೀಲ್ದಾರ್ ನೇತೃತ್ವದಲ್ಲಿ ಇತ್ಯರ್ಥವಾಗಿತ್ತು.ಈಗ ಡಿ.ಸಿ.ಯವರು ಬಂದು ಉತ್ತಮವಾಗಿ ಮುಗಿಸಿಕೊಟ್ಟಿದ್ದಾರೆ. ನಮ್ಮ ಉದ್ದೇಶವೂ ಇದ್ದದ್ದೂ ಒಂದೇ.ಅನಾದಿಕಾಲದಿಂದ, ೩೦೦-೪೦೦ ವರ್ಷಗಳಿಂದ ಸಾರ್ವಜನಿಕವಾಗಿ ಆರಾಧಿಸಿಕೊಂಡು ಬಂದ ದೈವಸ್ಥಾನ ಅದು. ಡಿ.ಸಿ.ಯವರಿಂದ ನಮಗೆ ನ್ಯಾಯ ಸಿಕ್ಕಿದೆ. ನಮಗೆ ಅಲ್ಲಿರುವ ಜಾಗ, ಹಣದ ಬಗ್ಗೆ ಯಾವುದೇ ಆಸೆಗಳಿಲ್ಲ. ಹಿಂದಿನವರು ಮಾಡಿದ ಕಟ್ಟುಕಟ್ಟಳೆಗಳು ಉಳಿಯಬೇಕು ಎಂಬ ಉzಶ ಇಟ್ಟುಕೊಂಡಿದ್ದೇವೆ. ಡಿ.ಸಿ.ಯವರಿಂದ ಅದಾಗಿದೆ. ದೈವ ದೇವರ ಅನುಗ್ರಹ ಇದು ಎಂದು ನಂಬಿದ್ಧೇವೆ.- ಪ್ರದೀಪ್ ಅಧ್ಯಕ್ಷರು ಸಾರ್ವಜನಿಕ ಟ್ರಸ್ಟ್

ಡಿ.ಸಿ.ಯವರ ಮಾತಿಗೆ ಒಪ್ಪಿದ್ದೇವೆ-ವರ್ಷದಲ್ಲಿ ಒಂದು ಸಲ ನಮಗೆ ದೀಪ ಇಡುವ ಹಕ್ಕು ಕೊಡಬೇಕು-ರಮೇಶ್ ಕುಡುಮೇರ್: ನಮ್ಮ ಬಾಡಾರು ಮನೆತನದ ಕೊರಗಜ್ಜನ ಸಾನಿಧ್ಯದ ಬಗ್ಗೆ ಸುಮಾರು ಆರು ತಿಂಗಳಿನಿಂದ ಊಹಾಪೋಹಗಳು ಬಂದಿತ್ತು. ಅದಕ್ಕಾಗಿ ಈಗ ಡಿ.ಸಿ.ಯವರು, ಎಸ್ಪಿಯವರು, ಎಸಿಯವರು ಎಲ್ಲಾ ಅಧಿಕಾರಿಗಳು ಬಂದು ನಮ್ಮ ಜಾಗದಲ್ಲಿರುವ ಸಾನಿಧ್ಯವನ್ನು ನೋಡಿ ಇದು ಕುಟುಂಬದ್ದೂ ಕೂಡ ಹೌದು, ಇದರಲ್ಲಿ ಸಾರ್ವಜನಿಕರೂ ಭಾಗವಹಿಸಿ ಒಮ್ಮತದಿಂದ ಮಾಡಿಕೊಂಡು ಹೋಗಲು ೨೦೨೪ರ ಜನವರಿಯ ಜಾತ್ರೆ ಮಾಡಲು ಅವಕಾಶ ನೀಡುವುದಾಗಿ ಹೇಳಿದರು. ಅದಕ್ಕೂ ಮೊದಲು ತಾತ್ಕಾಲಿಕ ಸಮಿತಿ ಮಾಡುವ ಮೊದಲು ಬಾಂಡ್ ಬರೆದು ಕೊಡಲು ಹೇಳಿದರು. ಅದನ್ನು ನಾವು ಮಾಡಿಕೊಡುತ್ತೇವೆ. ಇದರಲ್ಲಿ ನಮಗೆ ಹಣದ ಆಸೆಯಿಲ್ಲ. ಬಾಂಡ್ ಕೊಡಲು ನಾವು ಸಿದ್ಧರಿzವೆ. ಕೊರಗಜ್ಜನ ಸಾನಿಧ್ಯ ಒಳ್ಳೆಯದಾಗಲು ಬಾಂಡ್ ಕೊಡುತ್ತೇವೆ. ನಮಗೆ ವರ್ಷದಲ್ಲಿ ಒಂದು ಸಲ ದೀಪ ಇಡುವ ಹಕ್ಕನ್ನು ನಮ್ಮ ಮನೆತನದವರಿಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇವೆ.- ರಮೇಶ್ ಕುಡುಮೇರ್ ಕುಟುಂಬದ ಪರವಾದಿ

LEAVE A REPLY

Please enter your comment!
Please enter your name here