ಬೆಳ್ತಂಗಡಿ: 18ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಎ.ಕೃಷ್ಣಪ್ಪ ಪೂಜಾರಿ ಆಯ್ಕೆ

0

ಬೆಳ್ತಂಗಡಿ: ಡಿಸೆಂಬರ್ 17ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕಿನ 18ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಎ ಕೃಷ್ಣಪ್ಪ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಬ ತಾಲೂಕಿನ ಅಲಂಕಾರು ಎಂ.ತಿಮ್ಮಪ್ಪ ಪೂಜಾರಿ ಮತ್ತು ಮುತ್ತಕ್ಕ ಅವರ ಮಗನಾಗಿ 1966ರಲ್ಲಿ ಜನಿಸಿದ ಕೃಷ್ಣಪ್ಪ ಪೂಜಾರಿಯವರು ಹಿರಿಯರ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತರ ಪದವಿ ಹಾಗೂ ಬಿ.ಇಡಿ ಪದವಿಯನ್ನು ಗಳಿಸಿರುವ ಇವರು ಬೇರೆ ಬೇರೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢಶಾಲೆಗಳಲ್ಲಿ, ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಹೀಗೆ ಒಟ್ಟು 53 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಸೇವೆ ಮಾಡಿದ ಇವರ ಸಾಧನೆಯನ್ನು ಗುರುತಿಸಿ ಬೇರೆ ಬೇರೆ ಸಂಘ-ಸಂಸ್ಥೆಗಳು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.

ತಾಲೂಕು ಅಲ್ಲದೆ ಬೇರೆ ಊರುಗಳಲ್ಲಿಯೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತೊಡಗಿಸಿ ಕೊಂಡವರು.500ಕ್ಕೂ ಮಿಕ್ಕಿ ಶೈಕ್ಷಣಿಕ ಕಾರ್ಯಾಗಾರಗಳು ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ.ಅಲ್ಲದೆ 500ಕ್ಕೂ ಮಿಕ್ಕಿ ಧಾರ್ಮಿಕ ಉಪನ್ಯಾಸಗಳನ್ನು ನೀಡಿದ್ದಾರೆ.

ಬೇರೆ ಬೇರೆ ಸ್ಮರಣ ಸಂಚಿಕೆಗಳಲ್ಲಿ ಸಂಪಾದಕರಾಗಿ, ಲೇಖಕರಾಗಿ ತೊಡಗಿಸಿಕೊಂಡಿದ್ದಾರೆ.ಮಂಗಳೂರು ಆಕಾಶವಾಣಿಯಲ್ಲಿ ಚಿಂತನಾ ಕಾರ್ಯಕ್ರಮಗಳನ್ನು ಮತ್ತು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.50ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದ್ದಾರೆ. ಯಕ್ಷಗಾನ ತಾಳಮದ್ದಲೆಗಳಲ್ಲಿ ಅರ್ಥದಾರಿಯಾಗಿ ಗುರುತಿಸಿಕೊಂಡಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರಿಂದ ಶೈಕ್ಷಣಿಕ ಸಾಧನ ಪ್ರಶಸ್ತಿ, ದ.ಕ ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾ ಗೌರವ ಪ್ರಶಸ್ತಿ, ದುಬೈ ಬಿಲ್ಲವಾಸ್ ಸಂಸ್ಥೆಯಿಂದ ಗೌರವ ಪ್ರಶಸ್ತಿ, ಮುಂಬೈ ಬಿಲ್ಲವ ಮಹಾಮಂಡಲದಿಂದ ಶೈಕ್ಷಣಿಕ ಸಾಧನಾ ಪ್ರಶಸ್ತಿ, ಅರ್ಕುಳ ಚಾರಿಟೇಬಲ್ ಟ್ರಸ್ಟ್ ನಿಂದ ಸಮಾಜ ಸೇವೆಗೆ ನೀಡುವ ಪ್ರಶಸ್ತಿ, ಶ್ರೀ ಗುರುನಾರಾಯಣ ಸೇವಾ ಸಂಸ್ಥೆ ಪುತ್ತೂರು ಇವರ ಸಾಧನಾ ಪ್ರಶಸ್ತಿ, ಕನ್ನಡ ಸಂಘ ಕಾಂತಾವರ ಇವರಿಂದ ‘ಶ್ರೇಷ್ಠ ಶಿಕ್ಷಕ ಸೌರಭ’ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡು ಜನ ಮಾನಸದಲ್ಲಿ ಅಭಿಮಾನವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here