ಉಜಿರೆ: ಎಸ್.ಡಿ.ಎಂ. ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಮಾಮ್ ಪ್ರಶಸ್ತಿ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಾಲ್ವರು ಪತ್ರಿಕೋದ್ಯಮ ವಿದ್ಯಾರ್ಥಿಗಳು ಮೀಡಿಯಾ ಆಲುಮ್ನಿ ಅಸೋಸಿಯೇಶನ್ ಆಫ್ ಮಂಗಳ ಗಂಗೋತ್ರಿ ಸಂಘಟನೆ (MAAM) ಯ ಮಾಮ್ ಇನ್ಸ್ಪೈರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಸೆ.10ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆಯಾಗಿರುವ ಮಾಮ್ ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ 2020-21 ಹಾಗೂ 2021-22ನೇ ಶೈಕ್ಷಣಿಕ ಸಾಲಿನ ಪ್ರಶಸ್ತಿಗಳನ್ನು ಒಟ್ಟಾಗಿ ನೀಡಲಾಗಿದೆ.

ಜಿಲ್ಲೆಯ ಒಟ್ಟು ಎಂಟು ಮಂದಿ ಸಾಧಕರಲ್ಲಿ ನಾಲ್ವರು ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.2021-22ನೇ ಶೈಕ್ಷಣಿಕ ಸಾಲಿನ ಪದವಿ ವಿಭಾಗದಲ್ಲಿ ರಶ್ಮಿ ಯಾದವ್ ಪ್ರಥಮ ಸ್ಥಾನ, ಸ್ನಾತಕೋತ್ತರ ವಿಭಾಗದಲ್ಲಿ ಚೈತ್ರಾ ಪ್ರಥಮ ಹಾಗೂ ಸ್ವಸ್ತಿಕ್ ಕನ್ಯಾಡಿ ದ್ವಿತೀಯ ಆಯ್ಕೆಯಾಗಿದ್ದು, 2021-22ನೇ ಸಾಲಿನ ಪದವಿ ವಿಭಾಗದಲ್ಲಿ ಶಾಮ ಪ್ರಸಾದ್ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ, ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ, ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮುಖ್ಯಸ್ಥ ಆರ್. ಉಪೇಂದ್ರ ಶೆಟ್ಟಿ, ಮಾಮ್ ಗೌರವಾಧ್ಯಕ್ಷ ವೇಣು ಶರ್ಮಾ, ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಮಾಮ್ ಸಂಘಟನೆಯು ಅನುಭವಿ ಮಾಧ್ಯಮ ವೃತ್ತಿಪರರು ಹಾಗೂ ಪ್ರಾಧ್ಯಾಪಕರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳ ಪ್ರಕಟಿತ ಬರಹಗಳು, ದೂರದರ್ಶನ- ರೇಡಿಯೋದಲ್ಲಿ ಪ್ರಸಾರವಾದ ಕಾರ್ಯಕ್ರಮಗಳು, ಸಂಶೋಧನಾ ಲೇಖನಗಳು, ಸಾರ್ವಜನಿಕ ಸಂಪರ್ಕ ನೈಪುಣ್ಯ, ನವಮಾಧ್ಯಮಗಳಲ್ಲಿ ಕೌಶಲಗಳನ್ನು ಪರಿಶೀಲಿಸಿದ ಸಮಿತಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು.

ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ: ಮುಖ್ಯವಾಹಿನಿ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿ ತಮ್ಮದೇ ಹೆಗ್ಗುರುತು ಮೂಡಿಸುತ್ತಿರುವ ಎಸ್.ಡಿ.ಎಂ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳ ಪರಂಪರೆಯನ್ನು ಮಾಮ್ ಪ್ರಶಸ್ತಿಯು ಎತ್ತಿಹಿಡಿದಂತಾಗಿದೆ. ಈ ಪ್ರಶಸ್ತಿಯು ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಡಾ. ಭಾಸ್ಕರ ಹೆಗಡೆ, ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಕಾಲೇಜು, ಉಜಿರೆ ತಿಳಿಸಿದರು.

LEAVE A REPLY

Please enter your comment!
Please enter your name here