ಧರ್ಮಸ್ಥಳ-ನಾರಾವಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಮನವಿ ಮಾಡಿದ್ದು ನಾನೇ, ಹಾಗೂ ಮಾಜಿ ಶಾಸಕ ವಸಂತ ಬಂಗೇರರು ಮಾಡಿರುವ ಆರೋಪಕ್ಕೆ ಪ್ರಮಾಣಕ್ಕೆ ಬದ್ಧ-ಹರೀಶ್ ಪೂಂಜ ಪತ್ರಿಕಾಗೋಷ್ಠಿ

0

ಉಜಿರೆ: ಧರ್ಮಸ್ಥಳದಿಂದ ನಾರಾವಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸಂಚಾರ ಆರಂಭಿಸಬೇಕೆಂದು ಆ ಭಾಗದ ನಾರಾವಿ, ಸುಲ್ಕೇರಿ, ಪಿಲ್ಯ, ಅಳದಂಗಡಿ, ಕುದ್ಯಾಡಿ, ಕುತ್ಲೂರು, ಕಟ್ಟೆ ಪರಿಸರದ ವಿದ್ಯಾರ್ಥಿಗಳು 2018-19ರಲ್ಲಿ ನನಗೆ ಮನವಿ ನೀಡಿದ ಪ್ರಕಾರ ಕೆಎಸ್‌ಆರ್‌ಟಿಸಿ ಡಿ.ಸಿ ಯವರಿಗೆ ಮನವಿ ನೀಡಿ ಅದರ ಬಗ್ಗೆ ಗಮನಹರಿಸಿದ್ದೆ.ಅದರಂತೆ ಕೆಎಸ್‌ಆರ್‌ಟಿಸಿ ಯಿಂದ ಶಾಸಕರ ಮನವಿಗೆ ಸ್ಪಂದಿಸಿ ಆ.25ರಂದು ಬಸ್ ಸಂಚಾರ ಪ್ರಾರಂಭಿಸುವುದಾಗಿ ಆದೇಶ ನೀಡಿದ್ದು, ಆದರೆ ಮಾಜಿ ಶಾಸಕ ವಸಂತ ಬಂಗೇರರವರು ನಾನೇ ಮಾಡಿಸಿದ್ದು ಎಂದು ಹೇಳಿ ಈ ಸಂಚಾರವನ್ನು ರದ್ದು ಪಡಿಸಿದ್ದೂ ನಾನೇ ಎಂದು ಹೇಳಿದ್ದರು.
ಅಲ್ಲದೇ ಹರೀಶ್ ಪೂಂಜ ಪ್ರಮಾಣಕ್ಕೆ ಬರಲಿ ಎಂದು ಹೇಳಿದ್ದರು.ಅದರಂತೇ ಈ ಬಸ್ಸು ಸಂಚಾರಕ್ಕೆ ನಾನು ಪ್ರಯತ್ನಿಸಿದ್ಧೇನೆ ಎಂದು ಅವರು ಕರೆದ ದೈವ-ದೇವಸ್ಥಾನಗಳ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಸಿದ್ಧ.ಅಲ್ಲದೆ ಅವರ ಆರೋಪದಂತೆ ಶೇ.40 ಭ್ರಷ್ಟಾಚಾರ ಮಾಡಿದ್ದೇನೆ, ರೂ.1500 ಕೋಟಿ ಭ್ರಷ್ಟಾಚಾರದಿಂದ ದುಡ್ಡು ಮಾಡಿದ್ದೇನೆ, ರೂ.5ಕೋಟಿಯ ಮನೆ ಕಟ್ಟಿದ್ದೇನೆ, ಅಕ್ರಮ ಮರಳುಗಾರಿಕೆಯಲ್ಲಿ ದುಡ್ಡು ಮಾಡಿದ್ದೇನೆ, ಕಾಡಿನ ಮರ ಕಡಿದು ಅವ್ಯವಹಾರ ಮಾಡಿದ್ದೇನೆ, ನೆರೆ ಬಂದಾಗ ಕಾಳಜಿ ಫಂಡ್ ಮೂಲಕ ಅವ್ಯವಹಾರ ಮಾಡಿದ್ಧೇನೆ, ದೇವಸ್ಥಾನದ ಬ್ರಹ್ಮಕಲಶದಲ್ಲಿ ಅವ್ಯವಹಾರ ಮಾಡಿದ್ಧೇನೆ ಎಂದು ಮೊದಲಾದ ಆರೋಪವನ್ನು ಮಾಜಿ ಶಾಸಕರು ಮಾಡಿದ್ದಾರೆ.ಆದರೆ ಈ ಎಲ್ಲಾ ಅವ್ಯವಹಾರಗಳನ್ನು, ಭ್ರಷ್ಟಾಚಾರವನ್ನು ಮಾಡಿಲ್ಲ ಎಂದು ಮಾಜಿ ಶಾಸಕರು ಹೇಳಿದ ದಿನಾಂಕ ಸಮಯದಲ್ಲಿ, ಹೇಳಿದ ದೈವ-ದೇವರ ಸನ್ನಿಧಿಯಲ್ಲಿ ಪ್ರಮಾಣಕ್ಕೆ ಸಿದ್ಧ.ಮಾಜಿ ಶಾಸಕರೂ ಕೂಡ ನಾನು ಭ್ರಷ್ಟಾಚಾರ ಮಾಡಿದ್ಧೇನೆ ಎಂದು ಅವರು ಪ್ರಮಾಣ ಮಾಡಲಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಆ.30ರಂದು ಉಜಿರೆ ಓಷಿಯನ್ ಪರ್ಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಾಜಿ ಶಾಸಕ ವಸಂತ ಬಂಗೇರರು ಕಳೆದ 5 ವರ್ಷಗಳಿಂದ ನನ್ನ ಮೇಲೆ ಆರೋಪಗಳನ್ನು ಮಾಡಿಕೊಂಡು ಬಂದಿದ್ದರೂ ನಾನು ಉತ್ತರ ಕೊಡಲು ಹೋಗಲಿಲ್ಲ.ಆದರೆ ಅವರ ಆರೋಪಕ್ಕೆ ನಮ್ಮ ಕಾರ್ಯಕರ್ತರು ಉತ್ತರ ಕೊಡಬೇಕೆಂದು ಹೇಳುತ್ತಾ ಇದ್ದರು.ಅವರ ರಾಜಕೀಯ ಹಿರಿತನಕ್ಕೆ ಗೌರವ ಕೊಟ್ಟು ಮಾತನಾಡಲಿಲ್ಲ.ಅವರು ಅಭಿವೃದ್ಧಿಗೆ ತಡೆ ಒಡ್ಡಿದರೂ ತಾಲೂಕಿನಲ್ಲಿ ನಾನು ಪ್ರಾಮಾಣಿಕ ಕೆಲಸ ಮಾಡಿದ್ದೇನೆ.ಇವರು 1983 ಮತ್ತು 1955ರಲ್ಲಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಎರಡನೇ ಬಾರಿ ಆಯ್ಕೆಯಾದಾಗ ಯಡಿಯೂರಪ್ಪ ಮತ್ತು ಇವರು ಮಾತ್ರ ಇದ್ದುದರಿಂದ ಇನ್ನು ಬಿಜೆಪಿಯಲ್ಲಿಯೇ ಇದ್ದರೆ ರಾಜಕೀಯ ಭವಿಷ್ಯ ಇಲ್ಲ ಎಂದು ತಿಳಿದು ಸ್ವಾರ್ಥ ರಾಜಕಾರಣಕ್ಕೆ ಜೆಡಿಎಸ್ ಸೇರಿ ಅಲ್ಲಿ ಒಮ್ಮೆ ಶಾಸಕರಾಗಿ ಅಲ್ಲಿಯೂ ಭವಿಷ್ಯ ಇಲ್ಲ ಎಂದು ತಿಳಿದು ತಾಲೂಕಿನ ಮೂ ಕಾಂಗ್ರೆಸ್ಸಿಗರ ಬಾಗಿಲು ತಟ್ಟಿ ಅವಕಾಶ ಕೇಳಿ ಶಾಸಕರಾಗಿ ಆಯ್ಕೆಯಾದರು.


ಆದರೆ ಆರೋಗ್ಯ ಸರಿ ಇಲ್ಲ ಎಂದು ಹೇಳಿಕೊಂಡರೂ ಕೊನೆಯ ಅವಕಾಶ ಎಂದು ಹೇಳುತ್ತಾ ಮೂಲ ಕಾಂಗ್ರೆಸ್ಸಿಗರನ್ನು ಒಪ್ಪಿಸಿ ಶಾಸಕರಾದರು.2018ರಲ್ಲಿ ಸ್ಪರ್ಧೆ ಮಾಡಿ ಸೋತರು.ಮತ್ತೆ ಓಡಾಟ ಮಾಡಿ ಈ ಬಾರಿ ನಾನೇ ಅಭ್ಯರ್ಥಿಯಾಗಬೇಕೆಂದು ಹೇಳಿ ಹಾಗೂ ಗಂಗಾಧರ ಗೌಡರಿಗೆ ಅವಕಾಶ ಕೊಡುತ್ತಾರೆ ಎಂದು ಬೆಂಗಳೂರು, ದೆಹಲಿಗೆ ಕರೆದುಕೊಂಡು ಹೋಗಿ ಮೋಸ ಮಾಡಿ ಸ್ವಾರ್ಥ ರಾಜಕಾರಣಿಯಾಗಿದ್ದಾರೆ.
ಇವರ 25 ವರ್ಷಗಳ ಶಾಸಕ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಬಗ್ಗೆ ಯೋಚನೆ ಮಾಡದೇ ಮಜಾ ರಾಜಕಾರಣಿಯಾಗಿದ್ದರು.ತಾಲೂಕಿನಲ್ಲಿ ಹಳೆಯ ಐಬಿ ಯಲ್ಲಿಯೇ ಇವರ ರಾಜಕೀಯ ಸುಳ್ಳಿನ ಗೋಪುರ ಕಟ್ಟಿದ ರಾಜಕಾರಣಿ.
ಸೌಜನ್ಯ ಪ್ರಕರಣದ ಬಗ್ಗೆ ಅವರೇ ಶಾಸಕರಾಗಿದ್ದ ಸಂದರ್ಭ ಆದ ಘಟನೆಯಾಗಿದ್ದುದರಿಂದ ಎಲ್ಲಾ ಅಧಿಕಾರಿಗಳಿಗೆ ಬೈಯುವ ಮೂಲಕ ತನಿಖೆ ಮಾಡಿಸಬೇಕಿತ್ತಲ್ಲಾ?, ಶಾಸಕರಾಗಿದ್ದಾಗ ಪ್ರಶ್ನಿಸದೇ ಇದ್ದ ಹೋರಾಟ ಈಗ ಯಾಕೆ? ಸದನದಲ್ಲಿ ಕೇವಲ ಒಮ್ಮೆ ಸಿಓಡಿ ತನಿಖೆಗೆ ಒತ್ತಾಯಿಸಬೇಕೆಂದು ಮಾತನಾಡಿದ್ದು ಮಾತ್ರ.ಅವರದೇ ಸರಕಾರ ಇರುವಾಗ ಮಾಡದ ಹೋರಾಟ ಈಗ ಏಕೆಂದು ಪ್ರಶ್ನೆ ಮೂಡುತ್ತದೆ.ಅವರ 25 ವರ್ಷದ ರಾಜಕೀಯ ಅವಧಿಯಲ್ಲಿ ಬೆಳ್ತಂಗಡಿ, ಧರ್ಮಸ್ಥಳ, ಉಪ್ಪಿನಂಗಡಿ, ಪುಂಜಾಲಕಟ್ಟೆ, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಷ್ಟು ಅಸಹಜ ಸಾವುಗಳು ಆಗಿವೆ.ಹಾಗೂ 2018ರಿಂದ ಎಷ್ಟು ಅಸಹಜ ಸಾವುಗಳು ಆಗಿವೆ ಎಂದು ಅವರದ್ದೇ ವಕೀಲರನ್ನು ತರಿಸಿ ವಿಚಾರಿಸಲಿ.ಸೌಜನ್ಯ ಮರುತನಿಖೆಗಾಗಿ ಈ ಮೊದಲು ನ್ಯಾಯಾಲಯದಲ್ಲಿದ್ದುದರಿಂದ ಪ್ರಶ್ನಿಸಲು ಅವಕಾಶ ಇರಲಿಲ್ಲ ಎಂದು ಅವರು ತಿಳಿದುಕೊಳ್ಳಲಿ.ಮೊನ್ನೆ ಬಂದ ತೀರ್ಪಿನ ನಂತರ ನಾನು ಹಾಗೂ ಎಮ್‌ಎಲ್‌ಸಿ ಪ್ರತಾಪಸಿಂಹ ನಾಯಕ್ ಮರುತನಿಖೆಗಾಗಿ ಮುಖ್ಯಮಂತ್ರಿಗೆ ಮನವಿ ನೀಡಿದ್ಧೇವೆ.ಬಿಜೆಪಿ ಯ ಉಭಯ ಜಿಲ್ಲೆಯ ಶಾಸಕರುಗಳು, ಸಂಸದರು ಆರೋಪಿಗಳಿಗೆ ಶಿಕ್ಷೆಗೆ ಹೋರಾಟಕ್ಕೆ ಸದಾ ಸಿದ್ಧ.

ಮೊನ್ನೆ ಬಿಜೆಪಿ ವತಿಯಿಂದ ಭಾನುವಾರ ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿದ್ದಾರೆ.ಈ ಹೋರಾಟ ಜಿಲ್ಲೆಯ ಜನರ ಭಾವನೆಗೆ ಪೂರಕವಾದ ಪ್ರತಿಭಟನೆಯಾಗಿದ್ದು, ನಾವು ಮನವಿ ನೀಡುವುದಾದರೆ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ.ತಹಶೀಲ್ದಾರರಿಗೆ ಅಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಕ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ ನಾವೂರು, ಶ್ರೀನಿವಾಸ ರಾವ್ ಧರ್ಮಸ್ಥಳ, ಬೆಳ್ತಂಗಡಿ ನಿಕಟಪೂರ್ವ ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here