ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪೆರಾಜೆ ಕಿಂಡಿ ಅಣೆಕಟ್ಟುವಿನಲ್ಲಿ ಮಳೆಗಾಲದಲ್ಲಿ ನೀರಿನ ಸೆಳೆತಕ್ಕೆ ಶೇಕರಣೆಗೊಂಡ ಮರದ ದಿಮ್ಮಿಗಳು ಹಾಗೂ ಕಸ ಕಡ್ಡಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ತೆರವುಗೊಳಿಸುವ ಕಾರ್ಯಕ್ರಮ ಆ.27ರಂದು ಬೆಳಿಗ್ಗೆಯಿಂದ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮೂರು ದಿನದ ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆ ವರದಿಯನ್ನು ಪ್ರಕಟಿಸಿದ್ದನ್ನು ಗಮನಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ರವರು ಬಳಂಜದ ಸುದ್ದಿ ಪ್ರತಿನಿಧಿಯನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಸ್ಥಳೀಯ ಬಳಂಜ, ನಾಲ್ಕೂರು, ತೆಂಕಕಾರಂದೂರು, ಅಳದಂಗಡಿಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಭಾಗವಹಿಸಿ ತೆರವು ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾಗಿ ರಾಜ್ಯಾದ್ಯಂತ ಸಾವಿರಾರು ಯುವ ತಂಡಗಳೊಂದಿಗೆ ವಿಪತ್ತು ನಿರ್ವಹಣಾ ತಂಡ ತುರ್ತು ಸಂದರ್ಭಗಳಲ್ಲಿ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯವಾಗಿದ್ದು ವಿವೇಕ್ ವಿನ್ಸೆಂಟ್ ಪಾಯಸ್ ರವರು ಇದರ ನಿರ್ದೇಶಕರಾಗಿ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.