


ನಾರಾವಿ: ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ವತಿಯಿಂದ ಜುಲೈ 31ನೇ ಭಾನುವಾರದಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ ಮುನಿಗಳಾದ ಪರಮಪೂಜ್ಯ ಆಚಾರ್ಯ 108 ನಂದಿಕುಮಾರ ಮಹಾರಾಜರಿಗೆ ವಿನಯಾಂಜಲಿ ಸಭೆ,ಜಿನಭಜನಾ ಪುಸ್ತಕ ಬಿಡುಗಡೆ ಮತ್ತು ವಿಶೇಷ ಆಟಿದ ಕೂಟವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪ್ರಸಿದ್ಧ ಸಾಹಿತಿಗಳು, ಜೈನ ವಿದ್ವಾಂಸರು ಆಗಿರುವ ಶ್ರೀ ಮುನಿರಾಜ್ ರೆಂಜಾಳರವರು ಉದ್ಘಾಟಿಸಿ ಪೂಜ್ಯ ಶ್ರೀ ಗಳಿಗೆ ವಿನಯಾಂಜಲಿಯನ್ನು ಸಲ್ಲಿಸಿ ಆಟಿ ತಿಂಗಳ ವೈಶಿಷ್ಟ್ಯತೆ ಮತ್ತು ಆಚರಣೆಗಳ ಮಹತ್ವದ ಜೊತೆ ವಿಶೇಷ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ನಿವೃತ್ತ ಶಿಕ್ಷಕರಾದ ಸನ್ಮತ್ ಕುಮಾರ್ ರವರು ಪರಮ ಪೂಜ್ಯ ಶ್ರೀ ಗಳಿಗೆ ವಿಶೇಷ ನುಡಿ ನಮನವನ್ನು ಸಲ್ಲಿಸಿದರು.
ಭಾರತೀಯ ಜೈನ್ ಮಿಲನ್ ನಾರಾವಿ ಇದರ ಸಹಕಾರದಿಂದ ಶ್ರೀ ಸನತ್ ಕುಮಾರ್ ಜೈನ್ ಈದು ವಿರಚಿತ “ಅಮರ ಪ್ರಭು ಜಿನನ ಜಯ ಜಯ ಭಜನೆ” ಎಂಬ ಜಿನ ಭಜನಾ ಪುಸ್ತಕವನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಕಲಾ ಕ್ಷೇತ್ರದ ಸಾಧಕ ಸನತ್ ಕುಮಾರ್ ಜೈನ್ ಈದು, 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 4ನೇ ಶ್ರೇಣಿ ಪಡೆದ ಕುಮಾರಿ ಮಾನ್ಯ ಜೈನ್ ನಲ್ಲೂರು ಮತ್ತು T. N ಪ್ರೊಡಕ್ಷನ್ ನ ನಿರ್ದೇಶಕರು,ಸಾಹಿತ್ಯ ಮತ್ತು ಕಲಾ ಸಾಧಕ, ಬಹುಮುಖ ಪ್ರತಿಭೆ ಸುರೇಂದ್ರ ಜೈನ್ ನಾರಾವಿ ಇವರುಗಳ ಪ್ರತಿಭೆಯನ್ನು ಗುರುತಿಸಿ ನಾರಾವಿ ಜೈನ್ ಮಿಲನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಜೈನರ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಮಾಣಿಕ್ಯರಾಜ್ ವೇಣೂರು ನೇತೃತ್ವದ ‘ಶ್ರೀ ಬಾಹುಬಲಿ’ ಕಲಾ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ನಾರಾವಿ ಜೈನ್ ಮಿಲನ್ ನ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಈದು,ಜೈನ್ ಮಿಲನ್ ಮಂಗಳೂರು ವಿಭಾಗದ ವಲಯ ನಿರ್ದೇಶಕರಾದ ಶ್ರೀವರ್ಮ ಅಜ್ರಿ, ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಾರಾವಿ ಜೈನ್ ಮಿಲನ್ ನ ಕಾರ್ಯದರ್ಶಿ ಅಭಿಜಿತ್ ಜೈನ್, ಕೋಶಾಧಿಕಾರಿ ಕುಸುಮ ವಿನಯ್ ಹೆಗ್ಡೆ ಮತ್ತು ಮಿಲನ್ ಬಂಧುಗಳು ಉಪಸ್ಥಿತರಿದ್ದರು.
ಶಿಶುಪಾಲ್ ಜೈನ್ ಬೈರ್ನಡೆಗುತ್ತು ಸ್ವಾಗತಿಸಿದರು. ಪ್ರಶಾಂತ್ ಕುಮಾರ್ ಜೈನ್ ವಂದಿಸಿದರು.ಶಿಕ್ಷಕರಾದ ನಿರಂಜನ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಕೊನೆಗೆ ಅತಿಥಿ ಗಣ್ಯರು ಮತ್ತು ಮಿಲನ್ ಬಂಧುಗಳು ಪೂಜ್ಯ ಶ್ರೀ ಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.









