

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಇಂದು ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಕಾರ್ಯದರ್ಶಿ ಯತೀಶ ಸಿರಿಮಜಲು ಅವರು ವರದಿ ವಾಚಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಅವರು ಮಾತನಾಡಿ, ಸಂಘದ ನೂತನ ಸಭಾಭವನ ನಿರ್ಮಾಣಕ್ಕೆ ಬ್ಯಾಂಕ್ ಸಾಲದ ಮೂಲಕ ಈಗಾಗಲೇ ಜಾಗ ಖರೀದಿಯ ಪ್ರಕ್ರಿಯೆ ಮುಗಿದಿದ್ದು, ಹಣಕಾಸಿನ ವ್ಯವಸ್ಥೆ ಆಗಬೇಕಿದೆ. ಶಾಸಕ ಹರೀಶ್ ಪೂಂಜರವರು ಭರವಸೆಯಿತ್ತ ರೂ.1.50 ಕೋಟಿ ಅನುದಾನದ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ.ತಾಲೂಕಿನ ಸಮುದಾಯ ಬಂಧುಗಳು ಸಹಕಾರ ನೀಡಬೇಕು. ಆ ಮೂಲಕ ಬಲಿಷ್ಠ ಸಮುದಾಯವಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ. ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ಒಂದೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದರು.
ಸಭೆಯ ಪರಿವೀಕ್ಷರಾಗಿದ್ದ ಸೋಮನಾಥ ಕೆ.ವಿ. ಅವರು ಮಾತನಾಡಿ, ಸಂಘದ ಕಾರ್ಯಚಟುವಟಿಕೆ ಶ್ಲಾಘಿಸಿ ತಾಲೂಕಿನಾದ್ಯಂತ ಇನ್ನಷ್ಟು ಒಗ್ಗಟ್ಟು ಮೂಡುವಂತಾಗಲಿ ಎಂದರು.
ಕಟ್ಟಡ ಸಮಿತಿ ಅಧ್ಯಕ್ಷರಾದ ಎಚ್. ಸೋಮಯ್ಯ ಹನೈನಡೆ ಅವರು ಮಾತನಾಡಿ, ಸಂಘದ ನೂತನ ಕಟ್ಟಡ ನಿರ್ಮಾಣ ನಮ್ಮೆಲ್ಲರ ಧ್ಯೇಯವಾಗಲಿ, ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಲ್ಲೂ ಶ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 24 ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಂಘದ ಮಾಜಿ ಅಧ್ಯಕ್ಷರು ಹಿರಿಯರಾದ ಗೋವಿಂದ ಮೂಲ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕು| ಸ್ವಾತಿ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಎಚ್. ಪದ್ಮಕುಮಾರ್ ಸ್ವಾಗತಿಸಿದರು. ಕಟ್ಟಡ ಸಮಿತಿ ಕಾರ್ಯದರ್ಶಿ ಶಿಕ್ಷಕ ಜಗನ್ನಾಥ ಕುಲಾಲ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲು ವಂದಿಸಿದರು.