ರಾಜ್ಯದಲ್ಲಿ ಕಾಂಗ್ರೇಸ್‌ ಸರಕಾರ ಬಂದ ಮೇಲೆ ತುಷ್ಟೀಕರಣ ನೀತಿ ಎಗ್ಗಿಲ್ಲದೆ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಹದೆಗೆಡಲು ಕಾರಣವಾಗಿದೆ- ಪ್ರತಾಪಸಿಂಹ ನಾಯಕ್‌ ಪತ್ರಿಕಾ ಹೇಳಿಕೆ

0

ಬೆಳ್ತಂಗಡಿ: ರಾಜ್ಯದಲ್ಲಿ ಕಾಂಗ್ರೇಸ್‌ ಸರಕಾರ ಬಂದ ಮೇಲೆ ತುಷ್ಟೀಕರಣ ನೀತಿ ಎಗ್ಗಿಲ್ಲದೆ ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಹದೆಗೆಡಲು ಕಾರಣವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಆರೋಪಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಸಿದ್ಧರಾಮಯ್ಯ ಸರಕಾರವು ಅನುಸರಿಸುತ್ತಿರುವ ನೀತಿಯನ್ನು ಖಂಡಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಗಲಭೆಯಾಗಿ ಅಲ್ಲಿನ ಪೋಲಿಸ್‌ ಠಾಣೆಯ ಮೇಲೆ ದಾಳಿಯಾದಾಗ ಹಾಗೂ ಕಾಂಗ್ರೇಸಿನ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗ ಪೋಲಿಸರು ಕಿಡಿಗೇಡಿಗಳನ್ನು ಸಾಕ್ಷಾಧಾರಗಳ ಸಮೇತ ಬಂಧಿಸಿ ಪ್ರಕರಣದ ದಾಖಲಿಸಿಕೊಂಡಿದ್ದರು. ಇದೀಗ ಕಾಂಗ್ರೇಸ್‌ ಶಾಸಕ ತನ್ವೀರ್‌ ಸೇಠ ಬರೆದ ಪತ್ರಕ್ಕೆ ಸ್ಪಂದಿಸಿದ ಗೃಹಸಚಿವ ಡಾ| ಜಿ. ಪರಮೇಶ್ವರ ಅವರು ಗಲಭೆ ನಡೆಸಿದವರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಚಿಂತನೆ ನಡೆಸುತ್ತಿದ್ದಾರೆ. ಈಚೆಗೆ ಬಂಧಿಸಲ್ಪಟ್ಟ ೫ ಮಂದಿಯನ್ನು ಸಾಕಷ್ಟು ಸಾಕ್ಷಾಧಾರಗಳಿದ್ದರೂ ಭಯೋತ್ಪಾದಕರು ಎಂದು ಘೋಷಿಸಲು ಮೀನ-ಮೇಷ ಎಣಿಸುತ್ತಿದ್ದಾರೆ. ಉಡುಪಿಯಲ್ಲಿ ಶೌಚಾಲಯದಲ್ಲಿ ಮೊಬೈಲ್‌ ಚಿತ್ರೀಕರಣದ ಘಟನೆಯ ಬಗ್ಗೆ ಆರೋಪಿಗಳ ವಿರುದ್ಧ ಎಫ್.ಐ.ಆರ್‌. ದಾಖಲಿಸಲು ಒಂದು ವಾರ ವಿಳಂಬ ಮಾಡಿದ್ದು ಮತ್ತು ಅದು ಸಣ್ಣ ವಿಷಯವೆಂದು ಕಡೆಗಣಿಸಲು ನೋಡುತ್ತಿರುವುದು ಇವೆಲ್ಲವೂ ತುಷ್ಟೀಕರಣದ ರಾಜಕಾರಣವಾಗಿದೆ.
ಕಲ್ಲೂ ತೂರುವವರು, ಬೆಂಕಿ ಹಚ್ಚುವವರು, ಬಾಂಬ್‌ ಸ್ಪೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ತಾನ ಜಿಂದಾಬಾದ್‌ ಎಂದು ಘೊಷಣೆ ಕೂಗುವವರು ಇಂತಹವರೆಲ್ಲ ಕಾಂಗ್ರೇಸಿಗರಿಗೆ ಬ್ರದರ್ಸ್‌ ಮತ್ತು ಅಮಾಯಕರಾಗಿರುವುದು ದುರಂತ ಮತ್ತು ಖಂಡನೀಯ. ಸಮಾಜಘಾತುಕ ಶಕ್ತಿಗಳು ಮಾಡುವ ಕೃತ್ಯಗಳು ಅವರಿಗೆ ಮಕ್ಕಳಾಟವೆಂದು ಕಾಣುವುದು ತಲೆತಗ್ಗಿಸುವಂತಹ ವಿಚಾರ. ಸಾರ್ವಜನಿಕ ಹಣದಲ್ಲಿ ಇವರನ್ನು ಪೋಷಿಸಲು ಸರಕಾರದ ವಿಶೇಷ ಯೋಜನೆಗಳು ಇರುವುದು ಇನ್ನೂ ಕಳವಳಕಾರಿಯಾಗಿದೆ ಮತ್ತು ಇವು ರಾಜ್ಯದಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here