ಅನುಗ್ರಹ ಟ್ರೈನಿಂಗ್ ಕಾಲೇಜು ಫೈರ್ ಅಂಡ್ ಸೇಫ್ಟಿ ವಿಭಾಗದ ವಿದ್ಯಾರ್ಥಿಗಳಿಂದ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿ

0

ಬೆಳ್ತಂಗಡಿ: ಸಂಸ್ಥೆಯ ಸಂಸ್ಥಾಪಕ ಎಂ. ಜಿ. ತಲ್ಹತ್ ಸವಣಾಲು ಅವರ ನಿರಂತರ ಕಾಳಜಿ, ದೂರದೃಷ್ಟಿಯ ನೇತೃತ್ವ ಹಾಗೂ ಅವಿರತ ಪರಿಶ್ರಮದ ಫಲವಾಗಿ ಅನುಗ್ರಹ ಟ್ರೈನಿಂಗ್ ಕಾಲೇಜು ಕಳೆದ 15 ವರ್ಷಗಳಿಂದ ತಾಲೂಕಿನಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ತರಬೇತಿಗಳನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಇದೀಗ ಸಂಸ್ಥೆಗೆ ಬೆನ್ನೆಲುಬಾಗಿ ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಮತ್ತು ಅಬ್ದುಲ್ ಖಾದರ್ ನಾವೂರು ಇವರುಗಳಿಂದ ಪರಿಣಾಮಕಾರಿ ಆಡಳಿತ, ಶಿಸ್ತಿನ ಕಾರ್ಯವೈಖರಿ ಹಾಗೂ ಸಮಾಜಮುಖಿ ದೃಷ್ಟಿಕೋನದಿಂದ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದು, ಮಂಗಳೂರಿನ ಮುಡಿಪು ಎಂಬಲ್ಲಿ ಮತ್ತೊಂದು ಶಾಖೆಯನ್ನು ಹೊಂದಿದೆ. ಇದೀಗ ಬೆಳ್ತಂಗಡಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಫೈರ್ ಅಂಡ್ ಸೇಫ್ಟಿ ಕೋರ್ಸ್ ಪ್ರಾರಂಭಿಸಿ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಫೈರ್ ಅಂಡ್ ಸೇಫ್ಟಿ ಕೋರ್ಸ್‌ನ ತರಬೇತಿಯ ಭಾಗವಾಗಿ ಡಿ. 16ರಂದು ಕಾಲೇಜಿನ ವಿದ್ಯಾರ್ಥಿಗಳು ಬೆಳ್ತಂಗಡಿ ಅಗ್ನಿಶಾಮಕ ಘಟಕಕ್ಕೆ ಶೈಕ್ಷಣಿಕ ಭೇಟಿಯನ್ನು ನಡೆಸಿದರು.

ಈ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಮೇಲಿನ ಜವಾಬ್ದಾರಿಯನ್ನು ಸಂಸ್ಥೆಯ ಪ್ರಾಂಶುಪಾಲ ಎಂ. ಜಿ. ತಲ್ಹತ್ ಅವರು ವಹಿಸಿಕೊಂಡು, ಅತ್ಯಂತ ಶಿಸ್ತಿನೊಂದಿಗೆ ಮತ್ತು ಕಾಳಜಿಯಿಂದ ಭೇಟಿಯನ್ನು ಯಶಸ್ವಿಯಾಗಿ ನಡೆಸಿದರು. ಶಿಕ್ಷಣದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಸಮಾನ ಮಹತ್ವ ನೀಡುವ ಅವರ ನೇತೃತ್ವವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುತ್ತಿದೆ ಎಂದು ಪ್ರಶಂಸಿಸಲಾಯಿತು.

ಫೈರ್ ಅಂಡ್ ಸೇಫ್ಟಿ ವಿಭಾಗದ ಶಿಕ್ಷಕಿ ಅಂಕಿತ ಹಾಗೂ ಸಂಸ್ಥೆಯ ಮ್ಯಾನೇಜರ್ ಶಮೀಮಾ ನೆರಿಯ ಅವರು ಸಂಪೂರ್ಣ ಸಹಕಾರ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಮತ್ತು ಅಬ್ದುಲ್ ಖಾದರ್ ನಾವೂರು ಅವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.

ಬೆಳ್ತಂಗಡಿ ಅಗ್ನಿಶಾಮಕ ಘಟಕದ ಸಹಾಯಕ ಠಾಣಾಧಿಕಾರಿ ಕೆ. ನೀಲಯ ಗೌಡ ಅವರು ಅಗತ್ಯ ಎಲ್ಲಾ ಅನುಮತಿಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡಿದರು. ಇದೇ ವೇಳೆ ಲೀಡಿಂಗ್ ಫೈರ್‌ಮ್ಯಾನ್ ಉಸ್ಮಾನ್ ಗರ್ಡಾಡಿ ಅವರು ತಮ್ಮ ವಿಶಾಲ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಗ್ನಿ ನಿಯಂತ್ರಣ ಕ್ರಮಗಳು, ಅಪಾಯ ನಿರ್ವಹಣೆ (Risk Management), ರಿಸ್ಕ್ಯೂ ಕಾರ್ಯಾಚರಣೆಗಳು, ತುರ್ತು ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಫೈರ್ ಅಂಡ್ ಸೇಫ್ಟಿ ಉಪಕರಣಗಳ ಬಳಕೆಯ ಕುರಿತು ನೇರ ಪ್ರಾತ್ಯಕ್ಷಿಕೆ (Live Demonstration) ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಪ್ರಾಯೋಗಿಕ ತರಬೇತಿ ನೀಡಿದರು. ಅವರ ಸಮರ್ಪಿತ ಹಾಗೂ ಸ್ಪಷ್ಟ ತರಬೇತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ವೃತ್ತಿಪರ ಮನೋಭಾವವನ್ನು ಬೆಳೆಸಿತು.

ಅಗ್ನಿಶಾಮಕ ಸಿಬ್ಬಂದಿಗಳಾದ ವೆಂಕಣ್ಣ ಹಂಚಿನಾಳ, ಶ್ರವಣ್ ನಾಯಕ, ಮಲಗೌಡ ಪಾಟೀಲ ಮತ್ತು ಶ್ರೀಶೈಲ ಬಿ. ಕಂಬಿ ಅವರು ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.

ಈ ಶೈಕ್ಷಣಿಕ ಭೇಟಿ ಮೂಲಕ ವಿದ್ಯಾರ್ಥಿಗಳು ಅಗ್ನಿ ಸುರಕ್ಷತೆ, ರಿಸ್ಕ್ಯೂ ಕಾರ್ಯಾಚರಣೆಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೌಲ್ಯಯುತ ಪ್ರಾಯೋಗಿಕ ಜ್ಞಾನ ಪಡೆದು ವೃತ್ತಿಪರವಾಗಿ ಸಿದ್ಧರಾಗುತ್ತಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here