ಉಜಿರೆ: ಜುಲೈ 21 ಶ್ರೀ.ಧ.ಮ.ಅ.ಸೆಕೆಂಡರಿ ಶಾಲೆ ಉಜಿರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಟ್ರಸ್ಟ್ ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಧರ್ಮಸ್ಥಳ, ಜಿಲ್ಲಾ ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ.ಧ.ಮಂ.ಅ. ಸೆ. ಶಾಲೆಯ ಮಾನವ ಹಕ್ಕುಗಳ ಸಂಘಗಳ ಸಹಭಾಗಿತ್ವದಲ್ಲಿ “ಸ್ವಾಸ್ಥ್ಯ ಸಂಕಲ್ಪ ” ಕಾರ್ಯಕ್ರಮ ನಡೆಯಿತು.
ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿರುವ ಕಾಸಿಂ ಮಲ್ಲಿಗೆ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ, “ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡಾಗ ದುಶ್ಚಟಗಳಿಂದ ದೂರ ಇರಲು ಸಾಧ್ಯವಾಗಿ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ” ಎನ್ನುವ ಸಂದೇಶವನ್ನು ನೀಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ನಿರ್ದೇಶಕರಾಗಿರುವ ಶ್ರೀ ಮಹಾಬಲ ಕುಲಾಲ್ ರವರು ಮಾತನಾಡಿ “ವಿದ್ಯಾರ್ಥಿಗಳು ಸಜ್ಜನರ ಸಂಗ ಮಾಡಿ ಉತ್ತಮ ವ್ಯಕ್ತಿಗಳಾಗಿ ಜೀವನ ಹಸನಾಗಿಸಿಕೊಳ್ಳಿ ಎಂದರು.
ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಶಿಬಿರಾರ್ಥಿಗಳಾದ ರಾಜೇಶ್ ರವರು ವಿದ್ಯಾರ್ಥಿಗಳ ಜೊತೆ ಸಂವಹನದ ಮೂಲಕ ಮಾತನಾಡಿ ಜೀವನದಲ್ಲಿ ಯಾವ ರೀತಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಾರೆ.ಅದರಿಂದ ದೂರವಿರಲು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸುವುದರೊಂದಿಗೆ ದುಶ್ಚಟದ ವಿರುದ್ಧ ಹೋರಾಡಲು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿಯವರು, “ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಹೊರಲು ಸಿದ್ಧರಿರಬೇಕು” ಎಂದು ಸಂದೇಶವನ್ನು ನೀಡಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯ ಸುರೇಶ್.ಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಸುರೇಂದ್ರ, ಮೇಲ್ವಿಚಾರಕಿ ವನಿತಾ, ಪ್ರೇಮಲತಾ, ಸೌಮ್ಯ ಬಿ, ರತ್ನಮಾನಸದ ನಿಲಯ ಪಾಲಕರಾದ ಯತೀಶ್, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.ಶಾಲಾ ಮಾನವ ಹಕ್ಕುಗಳ ಸಂಘದ ಸಂಯೋಜಕರಾದ ವಿಶ್ವನಾಥ್ ಸ್ವಾಗತಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿವನಿತಾ ವಂದಿಸಿದರು.ಶಿಕ್ಷಕ ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು.